ಸಾಹಿತ್ಯ ಸಮ್ಮೇಳನಕ್ಕೆ ಅನುದಾನದ ಕೊರತೆ

KannadaprabhaNewsNetwork |  
Published : Feb 21, 2025, 12:48 AM IST
20ಉಳಉ1111 | Kannada Prabha

ಸಾರಾಂಶ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ₹ 5 ಲಕ್ಷ ಮತ್ತು ತಾಲೂಕು ಕಸಾಪ ಸಮ್ಮೇಳನಕ್ಕೆ ₹ 1 ಲಕ್ಷ ನೀಡುತ್ತಿತ್ತು. ಈ ಅನುದಾನವು ಸಹ ಅರೆ ಬರೆಯಾಗಿ ನೀಡಿದ್ದರಿಂದ ಈಗ ಸಮ್ಮೇಳನ ನಡೆಸಿದರೆ ಜವಾಬ್ದಾರಿ ಯಾರು ಎನ್ನುವ ಪ್ರಶ್ನೆ ಉದ್ಭವಿಸಿದೆ.

ರಾಮಮೂರ್ತಿ ನವಲಿ

ಗಂಗಾವತಿ:

ಅನುದಾನದ ಕೊರತೆ, ಕನ್ನಡ ಸಾಹಿತ್ಯ ಪರಿಷತ್‌ ಘಟಕಗಳ ನಿರಾಸಕ್ತಿಯಿಂದಾಗಿ ಈ ಬಾರಿಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ತಾಲೂಕು ಸಮ್ಮೇಳನ ನಡೆಯುವುದು ಅನಮಾನ.

2022ರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹನುಮಸಾಗರದಲ್ಲಿ ಏರ್ಪಡಿಸಲಾಗಿತ್ತು. ಅಲ್ಲದೇ ಜಿಲ್ಲೆಯ ಗಂಗಾವತಿ, ಕಾರಟಗಿ, ಕುಕನೂರು ಮತ್ತು ಕೊಪ್ಪಳ ತಾಲೂಕು ಸಮ್ಮೇಳನಗಳು ಮಾತ್ರ ನಡೆದಿದ್ದವು. ಈ ಸಮ್ಮೇಳನಕ್ಕೆ ಬರಬೇಕಾಗಿದ್ದ ಅನುದಾನ ಸಮರ್ಪವಾಗಿ ಬಾರದ ಕಾರಣ ಈ ಬಾರಿ ಸಮ್ಮೇಳನ ನಡೆಸಲು ಜಿಲ್ಲಾ ಮತ್ತು ತಾಲೂಕು ಕಸಾಪ ಘಟಕಗಳು ಹಿಂಜರಿಯುತ್ತಿವೆ.

ಗಂಗಾವತಿಯಲ್ಲಿ 2011ರಲ್ಲಿ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆದು ರಾಜ್ಯದ ಗಮನ ಸೆಳೆದಿತ್ತು. ಈಗ ಸಮ್ಮೇಳನ ನಡೆಸಲು ಸಂಪನ್ಮೂಲದ ಕೊರತೆಯಿಂದ ಗಂಗಾವತಿ ಸೇರಿದಂತೆ ಇತರ ತಾಲೂಕುಗಳ ಕಸಾಪ ಘಟಕಗಳು ಸಮ್ಮೇಳನ ನಡೆಸಲು ಮೀನಮೇಷ ಮಾಡುತ್ತಿವೆ.

ಅರೆಬರೆ ಅನುದಾನ:

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ₹ 5 ಲಕ್ಷ ಮತ್ತು ತಾಲೂಕು ಕಸಾಪ ಸಮ್ಮೇಳನಕ್ಕೆ ₹ 1 ಲಕ್ಷ ನೀಡುತ್ತಿತ್ತು. ಈ ಅನುದಾನವು ಸಹ ಅರೆ ಬರೆಯಾಗಿ ನೀಡಿದ್ದರಿಂದ ಈಗ ಸಮ್ಮೇಳನ ನಡೆಸಿದರೆ ಜವಾಬ್ದಾರಿ ಯಾರು ಎನ್ನುವ ಪ್ರಶ್ನೆ ಉದ್ಭವಿಸಿದೆ. ಈಗಾಗಲೇ ಕುಷ್ಟಗಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜನಪ್ರತಿನಿಧಿಗಳು ಮತ್ತು ಸಂಘ-ಸಂಸ್ಥೆಗಳ ಸಹಕಾರದಿಂದ ಏರ್ಪಡಿಸಿ ಯಶ್ವಸಿಯಾಗಿದೆ. ಆದರೆ, ಉಳಿದ ತಾಲೂಕು ಘಟಕಗಳು ತಟಸ್ಥವಾಗಿರುವುದು ಕಲಾವಿದರು, ಕನ್ನಡ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ನಿರಾಸಕ್ತಿ:

ಜಿಲ್ಲಾ ಮತ್ತು ತಾಲೂಕು ಘಟಕಗಳಲ್ಲಿ ಬಹುತೇಕವಾಗಿ ಶಿಕ್ಷಣ ಇಲಾಖೆಯ ನೌಕರರು, ಶಿಕ್ಷಕರು ಇದ್ದಾರೆ. ಪ್ರಸ್ತುತ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರುತ್ತಿದ್ದರಿಂದ ಸಮ್ಮೇಳನ ನಡೆಸಲು ಆಸಕ್ತಿ ತೋರುತ್ತಿಲ್ಲ ಎಂದು ಹೇಳಲಾಗಿದೆ. ಆಯಾ ಕ್ಷೇತ್ರಗಳ ಶಾಸಕರು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಇಲ್ಲದ ಕಾರಣ ಸಮ್ಮೇಳನ ನಡೆಸಲು ಹಿನ್ನಡೆಯಾಗಿದೆ. ಏನೇ ಇದ್ದರೂ ಈ ಬಾರಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವುದು ಅನುಮಾನವಾಗಿದೆ.ಕಳೆದ ಬಾರಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಘಟಕವು ಕಡಿಮೆ ಅನುದಾನ ನೀಡಿದೆ. ಇದರಿಂದ ತಾಲೂಕು ಘಟಕಗಳ ಅಧ್ಯಕ್ಷರು ಸಮ್ಮೇಳನ ನಡೆಸಲು ಮುಂದೇ ಬರುತ್ತಿಲ್ಲ. ಒಂದು ವೇಳೆ ಸಮ್ಮೇಳನ ನಡೆಸುವುದಾದರೆ ಸ್ಥಳೀಯರ ಸಹಕಾರ ಪಡೆದು ನಡೆಸಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ ಹೇಳಿದರು.2022ರಲ್ಲಿ ನಡೆದ ಜಿಲ್ಲಾ ಸಮ್ಮೇಳನದ ಅನುದಾನ ಪೂರ್ಣವಾಗಿ ಬಂದಿಲ್ಲ. ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಂದ ಸಮ್ಮೇಳನಗಳಿಗೆ ಅನುದಾನ ಇಲ್ಲದಂತಾಗಿದೆ. ಕೇಂದ್ರ ಸಾಹಿತ್ಯ ಸಮ್ಮೇಳನಕ್ಕೆ ನೌಕರರು ಒಂದು ದಿನದ ಭತ್ಯೆ ನೀಡಿದಂತೆ, ಜಿಲ್ಲಾ ಮತ್ತು ತಾಲೂಕು ಸಮ್ಮೇಳನಕ್ಕೆ ನೌಕರರು ಒಂದು ದಿನದ ಭತ್ಯೆ ನೀಡಿಡಬೇಕು. ಹೀಗಾದರೆ ಮಾತ್ರ ಸಮ್ಮೇಳನ ನಡೆಸಬಹುದು ರಾಜ್ಯ ಕಸಾಪ ಕೇಂದ್ರ ಸಂಘ ಸಂಸ್ಥೆಗಳ ಪ್ರತಿನಿಧಿ ನಬಿಸಾಬ್ ಕುಷ್ಟಗಿ ಹೇಳಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ