- ಜಲಾಶಯದ ನಿರ್ವಹಣೆಗೆ ಸರ್ಕಾರ ಮಾಡಬೇಕಿದೆ ಸಂಕಲ್ಪ । ಟೆಂಡರ್ ಪ್ರಕ್ರಿಯೆ ರದ್ದಾಗಿದ್ದರಿಂದ 2 ವರ್ಷಗಳಿಂದ ನಡೆಯದ ಸೂಕ್ತ ನಿರ್ವಹಣೆ
ಅನಿಲ್ ಬಿರಾದರ್
ಕನ್ನಡಪ್ರಭ ವಾರ್ತೆ ಕೊಡೇಕಲ್ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯದ ನಿರ್ವಹಣೆಯ ಸಲುವಾಗಿ ಕರೆಯುವ ಟೆಂಡರ್ ಪ್ರಕ್ರಿಯೆ ಸೂಕ್ತವಾಗಿ ನಡೆಯದ ಕಾರಣ, ಕಳೆದ ಎರಡು ವರ್ಷಗಳಿಂದ ಜಲಾಶಯದ ನಿರ್ವಹಣೆಯಾಗದಿರುವುದರಿಂದ ರಾಜ್ಯದಲ್ಲಿ ಮತ್ತೊಂದು ಆಣೆಕಟ್ಟು ಅಪಾಯದಲ್ಲಿರುವಂತೆ ಕಾಣುತ್ತಿದೆ.
ಬಸವ ಸಾಗರ ಜಲಾಶಯದ ಅಧಿಕಾರಿಗಳು ತಿಳಿಸುವಂತೆ, ಪ್ರತಿ ಮುಂಗಾರಿನ ಮೊದಲು ಮಾರ್ಚ್ ಹಾಗೂ ಏಪ್ರಿಲ್ ಅವಧಿಯಲ್ಲಿ ಜಲಾಶಯದ ಗೇಟ್‌ನ ಸ್ಥಿತಿಗತಿಗಳ ಕುರಿತು ಅಗತ್ಯ ಪರಿಶೀಲನೆ ಮಾಡಿ, ಗೇಟ್‌ಗಳ ಸುರಕ್ಷತೆಯ ನಿರ್ವಹಣೆಗೆ ಬೇಕಾದ ಪೇಂಟಿಂಗ್, ವೆಲ್ಡಿಂಗ್ ಮತ್ತು ಗ್ರೀಸಿಂಗ್‌ಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರೂ ಸಹಿತ, ನಿರ್ವಹಣೆ ವಿಷಯವಾಗಿ ಕಳೆದ ಎರಡು ವರ್ಷಗಳಿಂದ ಪಟ್ಟಭದ್ರಾ ಹಿತಾಸಕ್ತಿಗಳ ಹಗ್ಗ-ಜಗ್ಗಾಟದಿಂದಾಗಿ ಟೆಂಡರ್ ರದ್ದಾಗಿರುವುದರಿಂದ ಗುತ್ತಿರುವುದರಿಂದ ಜಲಾಶಯದ ನಿರ್ವಹಣೆ ನೆನೆಗುದಿಗೆ ಬಿದ್ದಿದೆ ಎನ್ನುತ್ತಾರೆ ನೀರಾವರಿ ಪರಿಣಿತರು.
ಜಲಾಶಯದ ಹೈಡ್ರೋಮೆಕ್ಯಾನಿಕಲ್ ಕಾಂಪೋನೆಂಟ್ಸ್, ಹೈಡ್ರೋಲಿಕ್ ಹಾಗೂ ಹೈಡ್ರೋ ಎಲೆಕ್ಟ್ರಿಕ್ ಸಾಮಗ್ರಿಗಳ ಕುರಿತು ನಿಗಮಕ್ಕೆ ಹಾಗೂ ಸರ್ಕಾರಕ್ಕೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರೂ ಸಹಿತ ಸರಿಯಾಗಿ ಟೆಂಡರ್ ಆಗದ ಕಾರಣ ಜಲಾಶಯದ ನಿರ್ವಹಣೆಯಾಗುತ್ತಿಲ್ಲ.
ಗ್ರೀಸಿಂಗ್ ಕಾಣದ ರೋಪ್‌ಗಳು: ಜಲಾಶಯದಲ್ಲಿ ರೇಡಿಯಲ್ (ತ್ರಿಜ್ಯಾಕಾರದ) ವಿನ್ಯಾಸವುಳ್ಳ ಒಟ್ಟು 30 ಪ್ರಮುಖ ಎಲೆಕ್ಟ್ರಿನಿಕ್ ಆಧಾರಿತ ಕ್ರಸ್ಟ್ ಗೇಟ್‌ಗಳಿಗೆ ಸರಿಯಾಗಿ ಗ್ರೀಸಿಂಗ್ ಮಾಡಲಾಗುತ್ತಿಲ್ಲ ಎನ್ನಲಾಗಿದೆ. ಜಲಾಶಯದ ನಿರ್ವಹಣೆಗೆ ಒಟ್ಟು 2 ಕೋಟಿ ರು.ಗಳ ಪ್ರಸ್ತಾವನೆಯನ್ನು ನಿಗಮವು ಸರ್ಕಾರಕ್ಕೆ ಸಲ್ಲಿಸಿದರೂ ಸಹಿತ ಸೂಕ್ತ ಅನುದಾನ ಬಿಡುಗಡೆಯಾಗದ ಕಾರಣ ಗೇಟ್‌ಗಳಿಗೆ ಸರಿಯಾದ ಗ್ರೀಸಿಂಗ್ ಮಾಡಲಾಗಿಲ್ಲ ಎಂಬ ಅರೋಪ ಕೇಳಿಬರುತ್ತಿದೆ.
ಕಳೆದ ಜುಲೈ ಹಾಗೂ ಈ ತಿಂಗಳ ಆ.10ರವರಗೆ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದ್ದು, ಕೆಲವೊಮ್ಮೆ 3.30 ಲಕ್ಷ ಕ್ಯುಸೆಕ್‌ವರೆಗೆ ಜಲಾಶಯದ ಎಲ್ಲಾ 30 ಕ್ರಸ್ಟ್ ಗೇಟ್‌ಗಳನ್ನು ತೆರೆದು ನೀರು ಬಿಟ್ಟಿದ್ದು, ಬರುವ ಅಲ್ಪ ಅನುದಾನದಲ್ಲಿಯೇ ಸೂಕ್ತವಾಗಿ ಗೇಟ್‌ಗಳ ಕಾರ್ಯಕ್ಷಮತೆಯನ್ನು ನಿರ್ವಹಿಸುತ್ತಿರುವುದು ನಿಗಮದ ಅಧಿಕಾರಿಗಳಿಗೆ ಸವಾಲಿನ ಸಂಗತಿಯಾಗಿದ್ದರೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ.
- 42 ವರ್ಷಗಳಾದರೂ ಬಸವ ಸಾಗರಕ್ಕೆ ಒಬ್ಬ ಸಿಎಂ ಭೇಟಿ ಇಲ್ಲ !
ಜಲಾಶಯದ ಹಿರಿಮೆ: ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಬಸವಸಾಗರ ಜಲಾಶಯವು ಕೃಷ್ಣಾ ಅಚ್ಚುಕಟ್ಟು ಪ್ರದೇಶ 6 ಲಕ್ಷ ಹೆಕ್ಟೇರ್ ಪ್ರದೇಶದ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ.
ಯಾದಗಿರಿ ಮಾತ್ರವಲ್ಲದೇ, ಕಲಬುರಗಿ, ವಿಜಯಪುರ, ರಾಯಚೂರು ಜಿಲ್ಲೆಗಳು ಸೇರಿದಂತೆ ಬಸವಸಾಗರ ಹಿನ್ನೀರನ್ನು ಕುಡಿವ ನೀರು, ಬೃಹತ್ ನೀರಾವರಿ ಯೋಜನೆ ಅಡಿಯಲ್ಲಿ ಕಾಲುವೆ ಮತ್ತು ಏತ ನೀರಾವರಿಯಿಂದ ನೀರು ಬಳಸಿಕೊಂಡು ಕೃಷಿಗೆ ನೀರಾವರಿ ಸೇರಿದಂತೆ ಉದ್ಯಮಗಳಿಗೆ ಬೇಡಿಕೆ ಹಾಗೂ ಅಗತ್ಯ ನೀರನ್ನು ಒದಗಿಸಲು ಈ ಬೃಹತ್ ಜಲಾಶಯವೇ ಜಲಮೂಲವಾಗಿದೆ.ಗೇಟ್‌ಗಳಿಂದ ಹರಿದಿದ್ದು 487 ಟಿಎಂಸಿ ನೀರು: ಕಳೆದ ಜುಲೈ ಮಧ್ಯಂತರದಿಂದ ಇಲ್ಲಿಯವರೆಗೆ ರಾಜ್ಯದ ಅವಳಿ ಜಲಾಶಯಗಳಾದ ಆಲಮಟ್ಟಿಯಿಂದ 591 ಟಿಎಂಸಿ ನೀರನ್ನು, ಬಸವಸಾಗರ ಜಲಾಶಯದಿಂದ 487 ಟಿಎಂಸಿ ಪ್ರಮಾಣದ ನೀರನ್ನು ಗೇಟ್‌ಗಳಿಂದ ನದಿಗೆ ಬಿಟ್ಟಿದ್ದು, ರಾಜ್ಯದ ಕಾವೇರಿ ಜಲಾನಯನ, ಲಿಂಗನಮಕ್ಕಿ, ಸುಪಾ ಹಾಗೂ ವರಾಹಿ ಜಲಾಶಯಗಳಿಗಿಂತ ದುಪ್ಪಟ್ಟು ನೀರನ್ನು ನದಿಗೆ ಬಿಡಲಾಗಿದೆ. ಇಷ್ಟೊಂದು ಪ್ರಮಾಣದ ನೀರಿನ ಒತ್ತಡವನ್ನು ನಿಭಾಯಿಸಬೇಕಾದ ಗೇಟ್‌ಗಳ ನಿರ್ವಹಣೆ ಅತ್ಯಗತ್ಯ. ಕೂಡಲೇ ಸರ್ಕಾರ ಈ ಕುರಿತು ಗಮನಹರಿಸಿ ಸೂಕ್ತ ಅನುದಾನ ಬಿಡುಗಡೆ ಮಾಡುವ ಮೂಲಕ ಜಲಾಶಯದ ಸುರಕ್ಷತೆ ಕಾಪಾಡಬೇಕಿದೆ.
------ಫೋಟೊ:
24ವೈಡಿಆರ್4: ಕೊಡೇಕಲ್ ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯ.