ಕಾನೂನು ಅನುಷ್ಠಾನಕ್ಕೆ ಮಾನವ ಸಂಪನ್ಮೂಲ ಕೊರತೆ: ವಾಣಿ

KannadaprabhaNewsNetwork | Published : Mar 3, 2024 1:31 AM

ಸಾರಾಂಶ

ಭಾರತದಲ್ಲಿ ಹುಡುಗಿಯರು ಮತ್ತು ಹುಡುಗರು ಇಬ್ಬರೂ ಬಾಲ್ಯ ವಿವಾಹ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಮನೆಯಲ್ಲಿ ಮತ್ತು ಶಾಲೆಯಲ್ಲಿ ಹಿಂಸೆ, ಕಳ್ಳಸಾಗಣೆ, ಆನ್‌ಲೈನ್ ಹಿಂಸೆ, ಬಾಲ ಕಾರ್ಮಿಕ ಮತ್ತು ಬೆದರಿಸುವಿಕೆಯನ್ನು ಎದುರಿಸುತ್ತಾರೆ. ಎಲ್ಲಾ ರೀತಿಯ ಹಿಂಸೆ, ನಿಂದನೆ ಮತ್ತು ಶೋಷಣೆಗಳು ಮಕ್ಕಳ ಜೀವನದ ಮೇಲೆ ಪರಿಣಾಮ ಬೀರುತ್ತವೆ

ಕನ್ನಡಪ್ರಭ ವಾರ್ತೆ ಮಂಡ್ಯ ಅಸಮರ್ಪಕ ಮಾನವ ಸಂಪನ್ಮೂಲ ಸಾಮರ್ಥ್ಯ ಮತ್ತು ಗುಣಮಟ್ಟದ ತಡೆಗಟ್ಟುವಿಕೆ ಕಾರಣದಿಂದಾಗಿ ಕಾನೂನುಗಳನ್ನು ಅನುಷ್ಠಾನಗೊಳಿಸುವಲ್ಲಿ ಸವಾಲಾಗಿದೆ. ಇದರ ಪರಿಣಾಮವಾಗಿ ಲಕ್ಷಾಂತರ ಮಕ್ಕಳು ಹಿಂಸೆ, ದೌರ್ಜನ್ಯ ಮತ್ತು ಶೋಷಣೆಗೆ ಗುರಿಯಾಗುತ್ತಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಾಣಿ ಎ. ಶೆಟ್ಟಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಇವರ ವತಿಯಿಂದ ನಗರದ ಜಿಲ್ಲಾ ಮಕ್ಕಳ ರಕ್ಷಣಾ ಕಚೇರಿ ಸಭಾಂಗಣದಲ್ಲಿ ಪೊಲೀಸ್ ಅಧಿಕಾರಿಗಳಿಗಾಗಿ ನಡೆದ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-೨೦೧೫ ತಿದ್ದುಪಡಿ ೨೦೨೧ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಹುಡುಗಿಯರು ಮತ್ತು ಹುಡುಗರು ಇಬ್ಬರೂ ಬಾಲ್ಯ ವಿವಾಹ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಮನೆಯಲ್ಲಿ ಮತ್ತು ಶಾಲೆಯಲ್ಲಿ ಹಿಂಸೆ, ಕಳ್ಳಸಾಗಣೆ, ಆನ್‌ಲೈನ್ ಹಿಂಸೆ, ಬಾಲ ಕಾರ್ಮಿಕ ಮತ್ತು ಬೆದರಿಸುವಿಕೆಯನ್ನು ಎದುರಿಸುತ್ತಾರೆ. ಎಲ್ಲಾ ರೀತಿಯ ಹಿಂಸೆ, ನಿಂದನೆ ಮತ್ತು ಶೋಷಣೆಗಳು ಮಕ್ಕಳ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎಂದರು.

ಪ್ರತಿಯೊಂದು ಇಲಾಖೆಯೊಂದಿಗೆ ಪೊಲೀಸ್ ಇಲಾಖೆಯನ್ನೂ ಜೋಡಣೆ ಮಾಡಿ, ಶಾಲಾ-ಕಾಲೇಜುಗಳನ್ನು ಆಯ್ಕೆ ಮಾಡಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿ, ಉಪನ್ಯಾಸಕರು ಮೇಲ್ಕಂಡ ವಿಷಯಗಳ ಬಗ್ಗೆ ಬೋಧಿಸಿದರೆ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಮುಟ್ಟುತ್ತದೆ ಎಂದು ಅಭಿಪ್ರಾಯಪಟ್ಟರು.

ಇತ್ತೀಚಿನ ದಿನಗಳಲ್ಲಿ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲೇ ಹೆಚ್ಚು ಫೋಕ್ಸೋ ಪ್ರಕರಣ ದಾಖಲಾಗುತ್ತಿದೆ. ಆದ್ದರಿಂದ ಅಪರಾಧ ಎಷ್ಟು ಗಂಭೀರವಾಗಿದೆ ಎಂಬ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.

ಅಪರ ಪೊಲೀಸ್ ಅಧೀಕ್ಷಕ ಸಿ.ಇ.ತಿಮ್ಮಯ್ಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಸ್. ರಶ್ಮಿ, ರಕ್ಷಣಾಧಿಕಾರಿ ಸಿ.ಬಿ.ರಾಜೇಂದ್ರ ಸಮಾರಂಭದಲ್ಲಿ ಭಾಗವಹಿಸಿದ್ದರು.

Share this article