ಸರ್ಕಾರದಲ್ಲಿ ಭೂ ಹಗರಣದ ಮಾಹಿತಿ ಕೊರತೆ?

KannadaprabhaNewsNetwork |  
Published : Aug 12, 2024, 01:08 AM IST
ಗಗಗ | Kannada Prabha

ಸಾರಾಂಶ

ರಾಜ್ಯದಲ್ಲಿ ಈಗಾಗಲೇ ಮುಡಾ ಹಗರಣ ಹಾಗೂ ವಾಲ್ಮಿಕಿ ನಿಗಮದ ಹಗರಣಗಳು ಸದ್ದು ಮಾಡುತ್ತಿವೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳ ಮೇಲಿರುವ ಹಗರಣಗಳ ಆರೋಪ, ಪ್ರತ್ಯಾರೋಪದ ಹಾವಳಿಯಲ್ಲಿ ವಿಜಯಪುರದ ಅಕ್ರಮ ಆಸ್ತಿ ಹಗರಣವನ್ನೇ ಎಲ್ಲರೂ ಮರೆತಂತಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯದಲ್ಲಿ ಈಗಾಗಲೇ ಮುಡಾ ಹಗರಣ ಹಾಗೂ ವಾಲ್ಮಿಕಿ ನಿಗಮದ ಹಗರಣಗಳು ಸದ್ದು ಮಾಡುತ್ತಿವೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳ ಮೇಲಿರುವ ಹಗರಣಗಳ ಆರೋಪ, ಪ್ರತ್ಯಾರೋಪದ ಹಾವಳಿಯಲ್ಲಿ ವಿಜಯಪುರದ ಅಕ್ರಮ ಆಸ್ತಿ ಹಗರಣವನ್ನೇ ಎಲ್ಲರೂ ಮರೆತಂತಿದೆ. ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದೆರಡ್ಮೂರು ವರ್ಷಗಳಿಂದ ಖೊಟ್ಟಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಮಾಡುತ್ತಿರುವ ಹಲವಾರು ಪ್ರಕರಣಗಳಿಗೆ ಕಡಿವಾಣವೇ ಇಲ್ಲದಂತಾಗಿದೆ. ಇದೆಲ್ಲದರ ಮಧ್ಯೆ ಸರ್ಕಾರದಲ್ಲಿ ಸರಿಯಾದ ಮಾಹಿತಿಯೇ ಇಲ್ಲವಾ ಎಂಬ ಅನುಮಾನ ಕಾಡತೊಡಗಿದೆ. ಏಕೆಂದರೆ ಗೃಹ ಸಚಿವರ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ 29 ಪ್ರಕರಣಗಳಾಗಿದ್ದು, 35 ಆರೋಪಿಗಳನ್ನು ಬಂಧಿಸಲಾಗಿದೆ. ಕಂದಾಯ ಸಚಿವರ ಮಾಹಿತಿಯಲ್ಲಿ ಕೇವಲ 2 ಪ್ರಕರಣಗಳು ಜರುಗಿವೆ ಎಂಬ ಮಾಹಿತಿ ಒದಗಿಸಲಾಗಿದೆ. ಸರ್ಕಾರದ ಅಂಕಿಸಂಖ್ಯೆಯಲ್ಲಿ ವ್ಯತ್ಯಾಸ:

ಖೊಟ್ಟಿ ದಾಖಲೆ ಸೃಷ್ಟಿಸಿ ನಡೆದಿರುವ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಒಂದು ಅಂದಾಜಿನ ಪ್ರಕಾರ 50ಕ್ಕೂ ಅಧಿಕ ಪ್ರಕರಣಗಳು ನಡೆದಿವೆ ಎನ್ನಲಾಗಿದೆ. ಸರ್ಕಾರದಲ್ಲಿ ಅಧಿಕೃತವಾಗಿ ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರ ಲೆಕ್ಕಕ್ಕೆ ಬಂದಿವೆ. ರಾಜ್ಯ ಸರ್ಕಾರ ಕಂದಾಯ ಸಚಿವರು ಹಾಗೂ ಗೃಹ ಸಚಿವರು ನೀಡಿರುವ ಅಂಕಿಸಂಖ್ಯೆಗಳೇ ಬೇರೆ ಬೇರೆಯಾಗಿವೆ. ಕಳೆದ 3 ವರ್ಷಗಳಲ್ಲಿ ನಿರಂತರವಾಗಿ ಹಲವು ಪ್ರಕರಣಗಳು ನಡೆದಿದ್ದು, ಈಗಾಗಲೇ ಕೆಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಗೃಹ ಸಚಿವರ ಅಂಕಿ-ಸಂಖ್ಯೆಗಳು:

ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಅವರು ಅಧಿವೇಶನದಲ್ಲಿ ಪ್ರಸ್ತಾಪಿಸಿದಾಗ ಗೃಹ ಸಚಿವ ಜಿ.ಪರಮೇಶ್ವರ ಅವರು, 2023ರಲ್ಲಿ 19 ಪ್ರಕರಣಗಳು ದಾಖಲಾಗಿದ್ದು, 22 ಜನ ಆರೋಪಿಗಳನ್ನು ಬಂಧಿಸಲಾಗಿದೆ. 2024ರಲ್ಲಿ 10 ಪ್ರಕರಣಗಳು ದಾಖಲಾಗಿದ್ದು, 13 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉತ್ತರಿಸಿದ್ದಾರೆ. ಕಂದಾಯ ಸಚಿವರ ಅಂಕಿ-ಸಂಖ್ಯೆಗಳು:

ಕಳೆದ 3 ವರ್ಷಗಳಲ್ಲಿ ಜಿಲ್ಲೆಯಲ್ಲಿ ನಡೆದಿರುವ ಖೊಟ್ಟಿ ವ್ಯವಹಾರಗಳ ಬಗ್ಗೆ ಅಧಿವೇಶನದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಕೇಳಿರುವ ಚುಕ್ಕೆ ಗುರುತಿನ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣಭೈರೇಗೌಡರು ಉತ್ತರಿಸಿದ್ದು, ವಿಜಯಪುರ ಉಪನೋಂದಣಿ ಕಚೇರಿಯಲ್ಲೊಂದು ಹಾಗೂ ಇಂಡಿ ಉಪನೋಂದಣಿ ಕಚೇರಿಯಲ್ಲೊಂದು ಖೊಟ್ಟಿ ದಾಖಲೆ ಸೃಷ್ಟಿಸಿಲಾಗಿದೆ. ಜಿಲ್ಲೆಯಲ್ಲಿ ಕೇವಲ 2 ದಸ್ತಾವೇಜುಗಳು ನೋಂದಣಿಯಾಗಿವೆ ಎಂದು ಮಾಹಿತಿ ಒದಗಿಸಿದ್ದಾರೆ.ಸರ್ಕಾರ ಕೈಗೊಂಡ ಕ್ರಮಗಳು:

ಖೊಟ್ಟಿ ಸುಳ್ಳು ಸ್ಪಷ್ಟನೆ ದಾಖಲಾತಿಗಳ ಆಧಾರದ ಮೇಲೆ ದಸ್ತಾಮೇಜು ನೋಂದಣಿ ತಡೆಗಟ್ಟಲು, ಸುಳ್ಳು ಸ್ಪಷ್ಟನೆ ದಸ್ತಾವೇಜುಗಳನ್ನು ನೋಂದಣಿ ಮಾಡಲು ನಿರಾಕರಿಸಲು ಹಾಗೂ ಜಿಲ್ಲಾ ನೋಂದಣಾಧಿಕಾರಿರವರು ಸಂಬಂಧಪಟ್ಟ ಪಕ್ಷಾಕಾರರಿಗೆ ಕಾರಣ ಕೇಳುವ ನೋಟಿಸ್ ಜಾರಿ ಮಾಡಿ ದಸ್ತಾವೇಜಿನ ನೋಂದಣಿಯನ್ನು ರದ್ದುಪಡಿಸಲು ನೋಂದಣಿ ಕಾಯ್ದೆ 1908 ಗೆ ಕರ್ನಾಟಕ ರಾಜ್ಯಕ್ಕೆ ಅನ್ವಯವಾಗುವಂತೆ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, 2023 (2023ರ ವಿಧಾನಸಭೆಯ ವಿಧೇಯಕ ಸಂಖ್ಯೆ -11) ರನ್ವಯ ಹೊಸದಾಗಿ ಕಲಂ 22- ಬಿ, 22-ಸಿ ಮತ್ತು 22-ಡಿ ಯನ್ನು ಸೇರ್ಪಡೆ ಮಾಡಲು ಕ್ರಮವಹಿಸಲಾಗಿದ್ದು, ಈ ತಿದ್ದುಪಡಿಗೆ ಘನವೆತ್ತ ರಾಷ್ಟ್ರಪತಿಯವರ ಅಂಕಿತ ಬಾಕಿ ಇರುತ್ತದೆ.ದಸ್ತಾವೇಜು ನೋಂದಣಿ ಸಮಯದಲ್ಲಿ ಪಕ್ಷಕಾರರ ಆಧಾರ್ ಸಂಖ್ಯೆಯನ್ನು ಪರಿಶೀಲಿಸಲು, ವೆಲಿಡಿಟಿ ಆಫ್ ಕನ್ಸೆಂಟ್ ಬೇಸ್ಡ್ ಆಧಾರ್ ಅಥೆಂಟೇಷನ್ ಸರ್ವಿಸ್‌ನ್ನು 2024 ಮಾರ್ಚ್ 11ರ ಅಧಿಸೂಚನೆಯಲ್ಲಿ ಕರ್ನಾಟಕ ನೋಂದಣಿ ನಿಯಮಗಳು-1965 ರ ನಿಯಮ-81 ಕ್ಕೆ ತಿದ್ದುಪಡಿ ತರುವ ಮೂಲಕ ಜಾರಿಗೆ ತರಲಾಗಿದೆ.ಜಿಲ್ಲೆಯಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಜಮೀನು, ನಿವೇಶನಗಳನ್ನು ಖರೀದಿ ಮತ್ತು ಮಾರಾಟದ ಕುರಿತಂತೆ ಚರ್ಚೆಗೆ ಬೆಂಗಳೂರು ಮಳೆಗಾಲ ಅಧಿವೇಶನದಲ್ಲಿ ಜು.6 ರಂದು ಪ್ರಶ್ನಿಸಲಾಗಿದೆ. ಆದರೆ, ಸರ್ಕಾರ ಚರ್ಚೆಗೆ ಅವಕಾಶ ಕಲ್ಪಿಸದೇ ಜು.22 ರಂದು ಲಿಖಿತ ಉತ್ತರ ಮಾತ್ರ ನೀಡಿದ್ದು, ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಈ ಗಂಭೀರ ವಿಷಯದ ಕುರಿತು ಗಮನ ಸೆಳೆಯಲಾಗುವುದು. ಇಂತಹ ಪ್ರಕರಣಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಶಿಕ್ಷೆ ಆಗಬೇಕು, ಅಮಾಯಕರಿಗೆ ಅನ್ಯಾಯ ಆಗುವುದನ್ನು ತಪ್ಪಿಸಬೇಕೆಂಬುವುದೇ ನಮ್ಮ ಉದ್ದೇಶವಾಗಿದೆ.

-ಬಸನಗೌಡ ಪಾಟೀಲ್ ಯತ್ನಾಳ, ವಿಜಯಪುರ ಶಾಸಕ.ನಾನು ಕೇಳಿದ್ದ ಪ್ರಶ್ನೆಗೆ ಸರ್ಕಾರದ ವತಿಯಿಂದ ಅಂಕಿಸಂಖ್ಯೆಗಳ ಉತ್ತರ ಬಂದಿದೆ. ಇದನ್ನು ನೋಡಿದರೇ ಜಿಲ್ಲೆಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ದೊಡ್ಡ ಪ್ರಮಾಣದಲ್ಲೇ ಅಕ್ರಮವಾಗಿ ಆಸ್ತಿಗಳ ವ್ಯವಹಾರ ನಡೆದಿದೆ ಎಂಬುವುದು ಗೊತ್ತಾಗುತ್ತದೆ. ಇದಕ್ಕೆಲ್ಲ ತಕ್ಷಣ ಕಡಿವಾಣ ಬೀಳಬೇಕು. ವಂಚಕರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಕಳೆದ ಹಲವು ವರ್ಷಗಳಿಂದ ವಂಚನೆಗೊಳಗಾದ ಅಮಾಯಕರಿಗೆ ನ್ಯಾಯ ಸಿಗಬೇಕು.

-ಪ್ರಕಾಶ ರಾಠೋಡ,

ವಿಧಾನ ಪರಿಷತ್ ಸದಸ್ಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ