ವಿಶ್ವಪ್ರಸಿದ್ಧ ಗೋಕರ್ಣ ಬೀಚ್‌ಗಳಲ್ಲಿ ಮೂಲಸೌಕರ್ಯ ಕೊರತೆ!

KannadaprabhaNewsNetwork |  
Published : Oct 15, 2026, 02:15 AM IST
ಕೋಟಿತೀರ್ಥದಲ್ಲಿ ಬಂದ್ ಆಗಿರುವ ಶೌಚಾಲಯ, ಬಟ್ಟೆ ಬದಲಿಸುವ ಕೊಠಡಿ  | Kannada Prabha

ಸಾರಾಂಶ

ಗೋಕರ್ಣದ ಓಂ ಬೀಚ್, ಕುಡ್ಲೆ ಬೀಚ್‌ಗಳಲ್ಲಿನ ಸೌಲಭ್ಯದ ಕೊರತೆಯನ್ನು ಪ್ರವಾಸಿಗರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಜಾಗತಿಕ ಪ್ರವಾಸಿ ತಾಣದ ದುರವಸ್ಥೆಯನ್ನು ಬಿಂಬಿಸುತ್ತಿದ್ದಾರೆ.

ಕಾರವಾರ: ವಿಶ್ವಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣದ ಕಡಲತೀರಗಳು ದೇಶ- ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದರೂ, ಪ್ರವಾಸಿಗರಿಗೆ ಅಗತ್ಯವಾದ ಮೂಲ ಸೌಕರ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಶೌಚಾಲಯ, ಬಟ್ಟೆ ಬದಲಾಯಿಸಲು ಕೊಠಡಿ, ಸುಸಜ್ಜಿತ ರಸ್ತೆ ಇಲ್ಲದೆ ಪ್ರವಾಸಿಗರು ಪರದಾಡುವಂತಾಗಿದೆ. ಗೋಕರ್ಣದ ಓಂ ಬೀಚ್, ಕುಡ್ಲೆ ಬೀಚ್‌ಗಳಲ್ಲಿನ ಸೌಲಭ್ಯದ ಕೊರತೆಯನ್ನು ಪ್ರವಾಸಿಗರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಜಾಗತಿಕ ಪ್ರವಾಸಿ ತಾಣದ ದುರವಸ್ಥೆಯನ್ನು ಬಿಂಬಿಸುತ್ತಿದ್ದಾರೆ. ಗೋಕರ್ಣದ ಕಡಲತೀರಗಳ ಸೌಂದರ್ಯ ಸವಿಯಲು ನಿತ್ಯ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಾರೆ. ಕಡಲಿನಲ್ಲಿ ಈಜಾಡಿ, ಮರಳಿನಲ್ಲಿ ವಿಹರಿಸಿ ಸಂಭ್ರಮಿಸುವ ಪ್ರವಾಸಿಗರಿಗೆ ಬಳಿಕ ಬಟ್ಟೆ ಬದಲಾಯಿಸಲು ಸೂಕ್ತ ವ್ಯವಸ್ಥೆಯಿಲ್ಲದಿರುವುದು ಮುಜುಗರಕ್ಕೆ ಕಾರಣವಾಗಿದೆ. ವಿಶೇಷವಾಗಿ ಮಹಿಳೆಯರು, ಮಕ್ಕಳು ಹಾಗೂ ಕುಟುಂಬ ಸಮೇತ ಬರುವ ಪ್ರವಾಸಿಗರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ವಿಶ್ವದ ಪ್ರವಾಸಿ ನಕ್ಷೆಯಲ್ಲಿ ಗುರುತಿಸಿಕೊಂಡಿರುವ ಕುಡ್ಲೆ ಬೀಚ್, ಓಂ ಬೀಚ್‌ನಲ್ಲೇ ಇಂತಹ ಸೌಲಭ್ಯಗಳ ಕೊರತೆ ಇರುವುದು ಪ್ರವಾಸೋದ್ಯಮದ ನಿರ್ವಹಣೆ ಕುರಿತು ಪ್ರಶ್ನೆ ಮೂಡಿಸಿದೆ.ಕೋಟಿತೀರ್ಥದಲ್ಲೂ ಶೌಚಾಲಯ ಬಂದ್!: ಗೋಕರ್ಣದ ಪ್ರಮುಖ ಧಾರ್ಮಿಕ ತಾಣ ಕೋಟಿತೀರ್ಥಕ್ಕೆ ಆಗಮಿಸುವ ಭಕ್ತರು ಮತ್ತು ಪ್ರವಾಸಿಗರಿಗೂ ಶೌಚಾಲಯದ ಸಮಸ್ಯೆ ಎದುರಾಗಿದೆ. ಇಲ್ಲಿನ ಶೌಚಾಲಯ ಬಂದ್ ಆಗಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಧಾರ್ಮಿಕ ಕ್ಷೇತ್ರಕ್ಕೆ ಪ್ರತಿದಿನ ಭೇಟಿ ನೀಡುವ ಭಕ್ತರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಶೌಚಾಲಯವನ್ನು ತಕ್ಷಣವೇ ಪುನಾರಂಭಿಸಬೇಕೆಂಬ ಒತ್ತಾಯ ಕೇಳಿಬಂದಿದೆ.ಕುಡ್ಲೆ ರಸ್ತೆಯಲ್ಲಿ ಸಂಚಾರ ಸಂಕಷ್ಟ: ಇನ್ನು, ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಕುಡ್ಲೆ ಬೀಚ್‌ಗೆ ತೆರಳುವ ರಸ್ತೆಯೂ ದುಸ್ಥಿತಿಯಲ್ಲಿದೆ. ರಸ್ತೆ ಗಬ್ಬೆದ್ದು ಹೋಗಿರುವುದರಿಂದ ವಾಹನ ಸವಾರರು ಹಾಗೂ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ. ಬೀಚ್ ಸುತ್ತಮುತ್ತಲಿನ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳಿಗೆ ತೆರಳುವವರಿಗೂ ಸಮಸ್ಯೆಯಾಗುತ್ತಿದೆ. ಪ್ರವಾಸಿಗರನ್ನು ಆಕರ್ಷಿಸುವ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸುಸ್ಥಿತಿಯಲ್ಲಿರಬೇಕಾದುದು ಅತ್ಯಗತ್ಯ.ಪ್ರವಾಸೋದ್ಯಮ ಇಲಾಖೆ, ಸ್ಥಳೀಯ ಗ್ರಾಪಂ ಹಾಗೂ ಸಂಬಂಧಪಟ್ಟ ಇಲಾಖೆಗಳು ಓಂ, ಕುಡ್ಲೆ ಹಾಗೂ ಪ್ಯಾರಾಡೈಸ್ ಬೀಚ್‌ಗಳಲ್ಲಿ ಶೌಚಾಲಯ ಮತ್ತು ಬಟ್ಟೆ ಬದಲಿಸುವ ಕೊಠಡಿಗಳ ವ್ಯವಸ್ಥೆ ಕಲ್ಪಿಸಬೇಕು. ಕೋಟಿತೀರ್ಥದ ಶೌಚಾಲಯವನ್ನು ಪುನರಾರಂಭಿಸಿ, ಕುಡ್ಲೆ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂಬುದು ಪ್ರವಾಸಿಗರ ಆಗ್ರಹವಾಗಿದೆ.

ಗಮನಕ್ಕೆ ಬಂದಿದೆ: ಶೌಚಾಲಯ, ಬಟ್ಟೆ ಬದಲಾಯಿಸಲು ಕೊಠಡಿ ಇಲ್ಲದಿರುವ ಬಗ್ಗೆ ಪ್ರವಾಸಿಗರು ವಿಡಿಯೋ ಹರಿಬಿಡುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ. ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ಶೌಚಾಲಯ, ಬಟ್ಟೆ ಬದಲಾವಣೆಗೆ ಕೊಠಡಿ ವ್ಯವಸ್ಥೆ ಕಲ್ಪಿಸುತ್ತೇವೆ. ಕುಡ್ಲೆ ಬೀಚ್ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯುತ್ತೇವೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಮಂಗಳಗೌರಿ ಭಟ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಜನಾದ್ರಿ ದೇಗುಲದಿಂದ ಸಿಬ್ಬಂದಿ ಹೊರಗೆ ಹಾಕಿದ ವಿದ್ಯಾದಾಸ ಬಾಬಾ
ವರ್ತುಲ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ