ಕೊಪ್ಪಳ: ಸ್ಟಿಂಗ್ ಆಪರೇಷನ್ ಇರಲಿ, ರಿಂಗ್ ಆಪರೇಷನ್ ಇರಲಿ, ಪ್ರಕರಣದ ಸತ್ಯಾಸತ್ಯತೆ ಹೊರಬರಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಧೈರ್ಯವಿದ್ದರೆ ಸಿಬಿಐ ತನಿಖೆಗೆ ವಹಿಸಲಿ ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.
ಎಸ್ಸಿ, ಎಸ್ಟಿ ಸಮುದಾಯಗಳ ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಕೈಗೊಂಡಿತ್ತು. ಆದರೆ, ರಾಜ್ಯ ಸರ್ಕಾರದ ವಕೀಲರು ಹೈಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸದ ಕಾರಣ ಮೀಸಲಾತಿ ಹೆಚ್ಚಳಕ್ಕೆ ಹಿನ್ನಡೆಯಾಗಿದೆ ಎಂದು ಆರೋಪಿಸಿದರು. ಶೇ. 56ರಷ್ಟು ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಈಗಿನ ಸರ್ಕಾರ ಸ್ಪಷ್ಟವಾಗಿ ಹೇಳುತ್ತಿಲ್ಲ ಎಂದರು.
ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ನಿಗದಿಪಡಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದೆ. ಕಬ್ಬು ಸೇರಿದಂತೆ ವಿವಿಧ ಬೆಳೆಗಳ ಬೆಲೆ ಹೆಚ್ಚಳಕ್ಕೆ ರೈತರು ಬೇಡಿಕೆ ಸಲ್ಲಿಸಿದ್ದು, ಸರ್ಕಾರ ರೈತರೊಂದಿಗೆ ಮಾತುಕತೆ ನಡೆಸುತ್ತಿದೆ. ರೈತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ ಎಂದು ಹೇಳಿದರು.ಹಾಲಿನ ದರ ಏರಿಕೆಗೆ ಆಕ್ಷೇಪ: ಚುನಾವಣೆ ಮುಗಿದ ಬಳಿಕ ಹಾಲಿನ ದರವನ್ನು ಲೀಟರ್ಗೆ ₹8 ಹೆಚ್ಚಿಸಲು ಸರ್ಕಾರ ಮುಂದಾಗಲಿದೆ ಎಂದು ಆರೋಪಿಸಿದ ರವಿಕುಮಾರ, ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಾಲಿನ ದರ ₹17 ಹೆಚ್ಚಳವಾಗಿದೆ ಎಂದರು. ಬರಗಾಲದ ಸಂದರ್ಭದಲ್ಲಿ ರೈತರಿಗೆ ₹2,500 ನೀಡುತ್ತಿರುವುದು ಅಮಾನವೀಯ ಸರ್ಕಾರದ ನಡೆ ಎಂದು ಟೀಕಿಸಿದರು.
ಶಿಕ್ಷಕರನ್ನು ಪಾಠ ಮಾಡುವುದಕ್ಕಿಂತ ಇತರ ಕೆಲಸಗಳಿಗೆ ನಿಯೋಜಿಸಲಾಗುತ್ತಿದೆ. ಪ್ರೌಢಶಾಲಾ ಶಿಕ್ಷಕರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ಮೇಲಿನ ಕೆಲಸದ ಹೊರೆ ಕಡಿಮೆ ಮಾಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಅನುದಾನ ನೀಡಿಲ್ಲ. ಐಟಿಐ ಕಾಲೇಜುಗಳಿಗೆ ಅನುದಾನದ ನೆರವು ಒದಗಿಸಬೇಕು ಎಂದು ಒತ್ತಾಯಿಸಿದರು.
ಅತಿಥಿ ಶಿಕ್ಷಕರ ವೇತನದಲ್ಲಿ ಶೇ. 2ರಷ್ಟು ಟಿಡಿಎಸ್ ಕಡಿತ ಮಾಡುತ್ತಿರುವುದನ್ನೂ ಪ್ರಸ್ತಾಪಿಸಿದ ಅವರು, ಶಿಕ್ಷಕರ ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನಾಲ್ಕು ವಿಧಾನಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಮತದಾರರು ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.