ಬಿ.ರಾಮಪ್ರಸಾದ್ ಗಾಂಧಿ
ನೈಋತ್ಯ ರೈಲ್ವೆಗೆ ಒಳಪಡುವ ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಹರಪನಹಳ್ಳಿ ರೈಲ್ವೆ ನಿಲ್ದಾಣ ಪ್ರಾರಂಭವಾಗಿ ದಶಕ ಕಳೆದಿದೆ. ಆದರೂ ರೈಲ್ವೆ ನಿಲ್ದಾಣಕ್ಕೆ ತೆರಳಲು ಸರಿಯಾದ ರಸ್ತೆ, ಸಾರಿಗೆ, ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಪಟ್ಟಣದಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಬಸ್ ಸಂಪರ್ಕ ಇಲ್ಲದಿರುವುದರಿಂದ ಪ್ರಯಾಣಿಕರು ಖಾಸಗಿ ವಾಹನಗಳನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ.ರಾತ್ರಿ ವೇಳೆ ಬರುವ ಪ್ರಯಾಣಿಕರು ಪಟ್ಟಣ ತಲುಪಲು ಹರಸಹಾಸ ಪಡಬೇಕಾಗಿದೆ. ಆಟೋ ಮೂಲಕ ಬಸ್ ನಿಲ್ದಾಣ ತಲುಪಬೇಕೆಂದರೆ ಕನಿಷ್ಠ ಒಬ್ಬ ವ್ಯಕ್ತಿ ₹50 ನೀಡಬೇಕಾಗಿದೆ. ಆಟೋ ಸಿಗದೇ ಇದ್ದರೆ ಕಾಲು ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯತೆ ಇರುವುದು ಇಲ್ಲಿನ ವಸ್ತು ಸ್ಥಿತಿಗೆ ಹಿಡಿದ ಕನ್ನಡಿ.
ಈ ಬಗ್ಗೆ ಕಂಚಿಕೇರಿ ಬೆಂಡಿಗೇರಿ ಮಾರ್ಗವಾಗಿ ದಾವಣಗೆರೆಗೆ ಹೋಗುವ ಎಲ್ಲ ಸಾರಿಗೆ ಬಸ್‌ಗಳನ್ನು ರೈಲ್ವೆ ನಿಲ್ದಾಣದ ಮುಖ್ಯ ರಸ್ತೆ ಬಳಿ ಕೋರಿಕೆ ನಿಲುಗಡೆ ಒದಗಿಸುವಂತೆ ರೈಲ್ವೆ ನಿಲ್ದಾಣದ ಅಧೀಕ್ಷಕರು ಹರಪನಹಳ್ಳಿ ಸಾರಿಗೆ ವ್ಯವಸ್ಥಾಪಕರಿಗೆ ಮನವಿ ಮಾಡಿದರೂ ಬಸ್ ಸ್ಟಾಪ್ ಮಾಡುತ್ತಿಲ್ಲ. ಇನ್ನು ರಸ್ತೆ ಬದಿ ದೀಪದ ವ್ಯವಸ್ಥೆ ಕಲ್ಪಿಸಲು ನಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ರೈಲ್ವೆ ಸಿಬ್ಬಂದಿ ತಿಳಿಸುತ್ತಾರೆ.
ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ರೈಲು ಸಂಚಾರ ಪ್ರಾರಂಭವಾಗಿದೆ. ಆದರೆ ರೈಲ್ವೆ ನಿಲ್ದಾಣಕ್ಕೆ ಹೋಗಲು ಸೂಕ್ತ ರಸ್ತೆ, ಸಾರಿಗೆ, ಬೆಳಕಿನ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಮುಖ್ಯ ರಸ್ತೆ ಬಳಿ ಕೋರಿಕೆ ನಿಲುಗಡೆ ಒದಗಿಸುವಂತೆ ಸಾರಿಗೆ ಇಲಾಖೆಯವರಿಗೆ ಮನವಿ ಮಾಡಿಕೊಂಡಿದ್ದೇವೆ. ಇನ್ನು ರಸ್ತೆ ಬದಿ ಲೈಟ್ ವ್ಯವಸ್ಥೆಗೆ ಸಂಬಂಧಪಟ್ಟಂತೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎನ್ನುತ್ತಾರೆ ಹರಪನಹಳ್ಳಿ ರೈಲ್ವೆ ಸ್ಟೇಷನ್ ಮಾಸ್ಟರ್ ಗುರುರಾಜ.