ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಾಣ ಮಾಡಿರುವಂತಹ ತಂಗುದಾಣಗಳು ಸೂಕ್ತ ನಿರ್ವಹಣೆ ಇಲ್ಲದೆ ಕಸದ ತೊಟ್ಟಿಯಂತಾಗಿದ್ದು, ನೋಡಿದರೆ ವಾಕರಿಕೆ ಬರುವಂತಿವೆ. ಮತ್ತೆ ಕೆಲವೆಡೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ತಾಲೂಕಿನಾದ್ಯಂತ ಪ್ರಮುಖ ರಸ್ತೆಗಳಲ್ಲಿ ಪ್ರಯಾಣಿಕರ ಉಪಯೋಗಕ್ಕಾಗಿ ನಿರ್ಮಾಣ ಮಾಡಿರುವ ತಂಗುದಾಣಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಕೊರತೆಯಿಂದಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಮಾರ್ಪಟ್ಟಿದ್ದರೆ ಮತ್ತೊಂದು ಕಡೆ ಪ್ರಯಾಣಿಕರು ಈ ತಂಗುದಾಣಗಳ ಬಳಿ ಹೋಗಲೂ ಅಸಹ್ಯಪಡುವಂತಾಗಿವೆ.ತಂಗುದಾಣ ನಿರ್ವಹಣೆ ಕೊರತೆ
ಸರ್ಕಾರಗಳು ಕೋಟ್ಯಂತರ ರುಪಾಯಿಗಳ ವೆಚ್ಚದಲ್ಲಿ ತಂಗುದಾಣಗಳನ್ನು ನಿರ್ಮಿಸುತ್ತಿದೆಯಾದರೂ ಅವುಗಳ ನಿರ್ವಹಣೆಗೆ ಯಾವುದೇ ಇಲಾಖೆ ಅಧಿಕಾರಿಗಳು ಮುಂದಾಗದ ಕಾರಣ ಅವುಗಳು ಬಳಕೆಯಾಗದೆ ಮೂಲೆ ಗುಂಪಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ನಗರದ ದೇಶಿಹಳ್ಳಿಯ ಬಡಾವಣೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ತಂಗುದಾಣವು ಕುಡುಕರ ಅಡ್ಡೆಯಾಗಿದೆ. ಬಂಗಾರಪೇಟೆ ಮತ್ತು ಕೆಜಿಎಫ್ ಮುಖ್ಯ ರಸ್ತೆಯಲ್ಲಿರುವಂತಹ ದೇಶಿಹಳ್ಳಿ ಬಡಾವಣೆಯಲ್ಲಿನ ಶಾಸಕ ಎಸ್.ಎನ್.ನಾರಾಯಣಸ್ವಾಮಿಯವರ ಕೆಎಲ್‌ಎಲ್‌ಎಡಿ ಯೋಜನೆಯ ಅನುದಾನದಲ್ಲಿ 5 ಲಕ್ಷ ರುಪಾಯಿಗಳ ವೆಚ್ಚದಲ್ಲಿ ಸುಸಜ್ಜಿತವಾದ ತಂಗುದಾಣವನ್ನು ಯಾವುದೇ ಅಧಿಕಾರಿಗಳೂ ಮತ್ತು ಸ್ಥಳೀಯ ಆಡಳಿತ ನಿರ್ವಹಣೆ ಮಾಡದೆ ಕಡೆಗಣಿವೆ. ಇದರಿಂದಾಗಿ ಸರಕಾರದ ಅನುದಾನ ವ್ಯರ್ಥವಾಗುತ್ತಿದೆ.ತಂಗುದಾಣದ ಸುತ್ತ ಗಿಡಗಂಟಿದೇಶಿಹಳ್ಳಿ,ಬಾವರಹಳ್ಳಿ, ಪರವನಹಳ್ಳಿ,ಹಂಚಾಳ,ಹುದುಕುಳ ಗ್ರಾಮಗಳಲ್ಲಿನ ಮುಖ್ಯ ರಸ್ತೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿರುವ ಕಾರಣ, ಬಸ್ ನಲ್ಲಿ ಪ್ರಯಾಣಿಕರು ಬಿಸಿಲಿನಲ್ಲಿ ಮತ್ತು ಮಳೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸುರಕ್ಷತೆಯ ದೃಷ್ಟಿಯಿಂದ ಬಸ್ಸಿಗಾಗಿ ಕಾಯುವಂತಹವರಿಗೆ ಯಾವುದೇ ರೀತಿಯ ಸಮಸ್ಯೆಯಾಗದ್ದಂತೆ ಪ್ರಯಾಣಿಕರ ಬೇಡಿಕೆಯಂತೆ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗಿದೆ. ಗ್ರಾಮ ಪಂಚಾಯಿತಿ ಅಥವಾ ಸಂಬಂಧಪಟ್ಟ ಯಾವುದೇ ಇಲಾಖೆಯೂ ತಂಗುದಾಣ ನಿರ್ವಹಣೆಗೆ ಮುಂದಾಗದೇ ನಿರ್ಲಕ್ಷ್ಯ ಧೋರಣೆಯಿಂದಾಗಿ ತಂಗುದಾಣದ ಸುತ್ತಲೂ ಗಿಡಗಂಟೆಗಳು ಬೆಳೆದು ನಿಂತಿದೆ. ಇದರಿಂದ ಪ್ರಯಾಣಿಕರು ತಂಗುದಾಣವನ್ನು ಬಳಸಲು ಹಿಂದೇಟು ಹಾಕುತ್ತಿದ್ದು ರಾತ್ರಿಯಾಗುತ್ತಿದ್ದಂತೆ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ ಎಂದು ಸಾರ್ವಜನಿಕರ ಆರೋಪಯಾಗಿದೆ.ಎಲ್ಲೆಂದರಲ್ಲಿ ಮದ್ಯದ ಪ್ಯಾಕೆಟ್
ತಂಗದಾಣದಲ್ಲಿ ಎಲ್ಲೆಂದರಲ್ಲಿ ಮಧ್ಯದ ಪಾಕೆಟ್‌ಗಳು, ಪ್ಲಾಸ್ಟಿಕ್ ಲೋಟಗಳು ತುಂಬಿ ತುಳುಕುವುದರ ಜತೆಗೆ ಮಳೆ ನೀರು ಶೇಖರಣೆಯಾಗಿ ಗಬ್ಬುನಾರುತ್ತಿದೆ.ಹಾಗೂ ತಂಗುದಾನಗಳು ಖಾಸಗಿ ವ್ಯಕ್ತಿಗಳು ಪ್ರಚಾರಕ್ಕೂ ಬಳಸುತ್ತಿರುವುದರಿಂದ ತಂಗುದಾನದ ಸ್ವರೂಪವೇ ಬದಲಾಗುತ್ತಿದೆ.ಗ್ರಾಮಗಳಿಂದ ವಿವಿಧ ಪಟ್ಟಣಗಳಿಗೆ ಸಂಚರಿಸುವ ಜನಸಾಮಾನ್ಯರು ಬಿಸಿಲು ಮಳೆಯಿಂದ ಎಚ್ಚೆತ್ತುಕೊಂಡು ಆಶ್ರಯ ಪಡೆಯಲು ಸಮಸ್ಯೆ ಎದುರಾಗಿದೆ. ಇದು ಕೇವಲ ಒಂದು ತಂಗುದಾಣದ ಸಮಸ್ಯೆ ಅಲ್ಲ, ಬಹುತೇಕ ತಂಗುದಾಣಗಳ ಸ್ಥಿತಿ ಹೀಗೆ ಇದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ತಂಗುದಾಣಗಳನ್ನು ಸ್ವಚ್ಛಗೊಳಿಸಿ, ಜನಸಾಮಾನ್ಯರ ಉಪಯೋಗಕ್ಕಾಗಿ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.