ದೊಡ್ಡಬಳ್ಳಾಪುರ: ಕರಕುಶಲ, ಗುಡಿ ಕೈಗಾರಿಕೆಗಳು ಬಹಳ ಹಳೆಯ ಕಾಲದ ಸಾಂಪ್ರದಾಯಿಕ, ಪಾರಂಪರಿಕ ಕೈಗಾರಿಕೆಗಳಾಗಿವೆ. ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಡಲು ಗುಡಿ ಕೈಗಾರಿಕೆಗಳು ಸಹಕಾರಿಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.
ಹಿಂದಿನ ಕಾಲದಲ್ಲಿ ವಸ್ತುಗಳನ್ನು ಸಂತೆಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈಗ ಆಧುನಿಕತೆ, ತಂತ್ರಜ್ಞಾನ ಬೆಳೆದಂತೆ ಆನ್ಲೈನ್ ಮೂಲಕ ಮಾರಾಟ ಮತ್ತು ಕೊಳ್ಳುವಿಕೆ ಪ್ರಕ್ರಿಯೆ ನಡೆಯುತ್ತಿದೆ. ನಾವೇ ಉತ್ಪನ್ನಗಳನ್ನು ತಯಾರಿಸಿ ನಾವೇ ಮಾರಾಟ ಮಾಡುವ ಪ್ರವೃತ್ತಿ ಬೆಳೆಯಬೇಕು. ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸಬೇಕು. ಉತ್ಪನ್ನಗಳನ್ನು ತಯಾರಿಸಿ ಅವುಗಳನ್ನು ನಾವೇ ಮಾರಾಟ ಮಾಡಬೇಕು ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ತರಬೇತಿ ಕಾರ್ಯಕ್ರಮ ಸಣ್ಣ ಕೈಗಾರಿಕೆ ಗುಡಿ ಕೈಗಾರಿಕೆ ಸ್ವಂತ ಉದ್ಯಮಗಳನ್ನು ಮಾಡುವ ಆಸಕ್ತರಿಗೆ, ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಸಹಕಾರಿಯಾಗಲಿದೆ. ಉತ್ಪನ್ನಗಳ ತಯಾರಿಕೆ , ಮಾರುಕಟ್ಟೆ ಸೌಲಭ್ಯ, ಸಾಲ ಸೌಲಭ್ಯ ಮುಂತಾದ ವಿಷಯಗಳ ಬಗ್ಗೆ ಈ ತರಬೇತಿಯಲ್ಲಿ ಮಾಹಿತಿ ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು. ನೀವು ತಯಾರಿಸುವ ಗುಡಿ ಕೈಗಾರಿಕೆ ಉತ್ಪನ್ನಗಳು ಗುಣಮಟ್ಟದ್ದಾಗಿದ್ದರೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಹಾಗೂ ಲಾಭ ಬರುತ್ತದೆ. ಹಾಗಾಗಿ ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ಆದ್ಯತೆ ನೀಡಿ ಎಂದು ಕಿವಿಮಾತು ಹೇಳಿದರು.ಕೇಂದ್ರ ಸರ್ಕಾರವು ಸಾಂಪ್ರದಾಯಿಕ ಉದ್ದಿಮೆಗಳನ್ನು ಉತ್ತೇಜಿಸಲು ವಿಶ್ವಕರ್ಮ ಯೋಜನೆ ಜಾರಿಗೆ ತಂದಿದೆ. ಬಡಗಿ (ಸುತಾರ್), ದೋಣಿ ತಯಾರಕರು, ಶಸ್ತ್ರಾಸ್ತ್ರ ತಯಾರಕರು, ಕಮ್ಮಾರ (ಲೋಹರ್), ಸುತ್ತಿಗೆ ಮತ್ತು ಟೂಲ್ ಕಿಟ್ ತಯಾರಕರು, ಬೀಗ ತಯಾರಕರು, ಚಿನ್ನಾರಿ (ಸೋನಾರ್), ಕುಂಬಾರ (ಕುಮ್ಹಾರ), ಶಿಲ್ಪಿ (ಮೂರ್ತಿಕಾರ, ಕಲ್ಲು ಕೆತ್ತುವವರು), ಕಲ್ಲು ಒಡೆಯುವವರು, ಚಮ್ಮಾರ (ಚರ್ಮಕಾರ)/ಪಾದರಕ್ಷೆ ತಯಾರಕರು, ಕಲ್ಲಿನ ಕೆಲಸಗಾರ (ರಾಜಮಿಸ್ತ್ರಿ), ಬುಟ್ಟಿ/ಚಾಪೆ/ಪೊರಕೆ ತಯಾರಕರು/ನಾರಿನ ಕೆಲಸಗಾರರು ಬೊಂಬೆ ಮತ್ತು ಆಟಿಕೆಗಳ ತಯಾರಕರು (ಸಾಂಪ್ರದಾಯಿಕ)
ಮುಂದಿನ ದಿನಗಳಲ್ಲಿ ನೀವು ತಯಾರಿಸುವ ಉತ್ಪನ್ನಗಳಿಗೆ ಒಂದು ವಸ್ತು ಪ್ರದರ್ಶನ ಮಳಿಗೆ(ಎಕ್ಸಿಬಿಷನ್ ಸೆಂಟರ್) ಮಾಡಿ ಅಲ್ಲಿ ನಿಮ್ಮ ಉತ್ಪನ್ನಗಳ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು ಈ ಬಗ್ಗೆ ಸೂಕ್ತ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
27ಕೆಡಿಬಿಪಿ1- ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ಎಂಎಸ್ಎಂಇ ಅಭಿವೃದ್ಧಿ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಉದ್ಘಾಟಿಸಿದರು.