ಕನ್ನಡಪ್ರಭ ವಾರ್ತೆ ಮಂಡ್ಯಕಳೆದೆರಡು ದಶಕಗಳಿಂದ ಮಂಡ್ಯ ಜಿಲ್ಲೆಯಲ್ಲಿ ವಿವೇಕವಿರುವ ನಾಯಕತ್ವದ ಕೊರತೆ ಕಾಡುತ್ತಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ವಿಷಾದಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನದ ವತಿಯಿಂದ ಎಂ.ಶ್ರೀನಿವಾಸ್–73ರ ಅಂಗವಾಗಿ ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ ಮತ್ತು ಎಂ.ಶ್ರೀನಿವಾಸ್ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಮಂಚೇಗೌಡ, ಎಸ್.ಎಂ.ಲಿಂಗಪ್ಪ, ಕೆ.ವಿ.ಶಂಕರಗೌಡ, ಜಿ.ಮಾದೇಗೌಡ, ಚೌಡಯ್ಯ ಸೇರಿದಂತೆ ಹಲವು ಮಹನೀಯರ ಜೊತೆ ಕೆಲಸ ಮಾಡುವ ಸೌಭಾಗ್ಯ ನನ್ನದಾಗಿತ್ತು. ಇದೆಲ್ಲದರ ನಡುವೆ ವಿವೇಕ ಎನ್ನುವುದಿತ್ತು. ಮಂಡ್ಯದಲ್ಲಿ ಧರಣಿಯಾಗುತ್ತದೆ ಎಂದರೆ ಕೇವಲ ವಿಧಾನಸೌಧ ಅಲ್ಲ. ಬೆಂಗಳೂರು ಅಷ್ಟೇ ಅಲ್ಲ ಇಡೀ ದೇಶವೇ ತಿರುಗಿ ನೋಡುತ್ತಿತ್ತು. 2000 ದ ನಂತರ ವಿವೇಕವನ್ನು ಬೆಳೆಸಿಕೊಳ್ಳುವ ಒಂದು ನಾಯಕತ್ವ ಕೊಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಸಜ್ಜನ ಹಾಗೂ ವಿಶಿಷ್ಠ ರಾಜಕಾರಣಿಯಾಗಿರುವ ಎಂ.ಶ್ರೀನಿವಾಸ್ ಅವರೇ ಸಾರ್ವಜನಿಕ ಕ್ಷೇತ್ರಕ್ಕೆ ಒಂದು ಕೊಡುಗೆಯಾಗಿದ್ದಾರೆ. ದೇಶದ ಚರಿತ್ರೆಯನ್ನು ಓದಿದಾಗ ಸ್ವತಂತ್ರವಾಗಿ ಸಾಧನೆ ಮಾಡುವುದೇ ಒಂದು ಗುರಿಯಾಗಿದೆ. ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗಡೆ ಹೋಗುವುದಕ್ಕೆ ಈ ಹಿಂದೆ ಬಿಡುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ, ಆ ನಿಟ್ಟಿನಲ್ಲಿ ನಳಿನಿ ಅವರು ಪ್ರಶಸ್ತಿ ಸ್ವೀಕರಿಸುವ ಮಟ್ಟಕ್ಕೆ ಬೆಳೆದಿರುವುದು ಹಾಗೂ ಪ್ರಶಸ್ತಿಯ ಗೌರವವೂ ಹೆಚ್ಚಿ ಇತರರಿಗೂ ಮಾದರಿಯಾಗಿದ್ದಾರೆ, ರಾಜೇಗೌಡರು ನ್ಯಾಯ ಹೇಳುವ ವ್ಯಕ್ತಿಯಾಗಿದ್ದಾರೆ. ಅವರು ನಿಷ್ಠುರವಾದಿಗಳು ಎಂದು ಶ್ಲಾಘಿಸಿದರು.ನಂಜುಂಡಸ್ವಾಮಿ ಅವರು ನಮ್ಮ ಗುರುಗಳಾಗದಿದ್ದರೂ ಸಹ ಅವರ ಶಿಷ್ಯರಾಗಲು ಬಯಸಿದ ವ್ಯಕ್ತಿಯಾಗಿದ್ದೆನು. ರಾಜಕಾರಣಿಗಳಿಗೆ ಇತ್ತೀಚಿನ ದಿನಗಳಲ್ಲಿ ಏಕವಚನ ಮಾತುಗಳೇ ಮುಖ್ಯವಾಗಿವೆ, ನ್ಯಾಯ ಹೇಳುವುದು ಹಳ್ಳಿಗಳಲ್ಲಿ ಮುಖ್ಯವಾಗಿದೆ. ಅದರಲ್ಲಿ ನ್ಯಾಯ ಹೇಳುತ್ತಾರೆ ನಮ್ಮ ರಾಜೇಗೌಡರು ಎಂದರೆ ಅದನ್ನು ಒಪ್ಪಿಕೊಳ್ಳಬೇಕಿದೆ ಎಂದು ತಿಳಿಸಿದರು.
ಹುಳುಕಿಲ್ಲದೇ ವ್ಯಕ್ತಿತ್ವವನ್ನು ನ್ಯಾಯ ಹೇಳುವ ಮೂಲಕ ಆರಂಭಿಸುವುದು ಮುಖ್ಯವಾಗಬೇಕು. ಮುಂದಿನ ದಿನಗಳಲ್ಲಿ ಇನ್ನೂ ನಾಯಕತ್ವದ ಅವಶ್ಯಕತೆ ಅಪಾರವಾಗಿ ಬೇಕಿದೆ, ರೈತ ಹೋರಾಟಗಾರರಾದ ನಂಜುಂಡಸ್ವಾಮಿ ಅವರು ರೈತರ ಸಾಲ ಮನ್ನಾ ಸೇರಿದಂತೆ ಹಲವು ಹೋರಾಟಗಳ ಮೂಲಕ ಮುಖ್ಯಮಂತ್ರಿ ಮತ್ತು ಸರ್ಕಾರದ ಆದಿಯಾಗಿ ಕೆಲಸ ಮಾಡಿಸಿಕೊಂಡು ಬರುತ್ತಿದ್ದ ಮಹಾನ್ ವ್ಯಕ್ತಿಯಾಗಿ ಗಮನ ಸೆಳೆಯುತ್ತಿದ್ದರು ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ರಾಜಕೀಯದಲ್ಲಿ ನನ್ನಷ್ಟು ನೋವು ಅನುಭವಿಸದಷ್ಟು ಯಾರೂ ಅನುಭವಿಸಿಲ್ಲ, 1990 ರಿಂದ 1999 ರವರೆಗೆ ಬಹಳ ತಡೆಯಲಾದ ನೋವನ್ನು ಅನುಭವಿಸಿದ್ದೀನಿ, ಈಗ ಬಹಳ ಜನ ಮಾತನಾಡುತ್ತಾರೆ ಮಂಡ್ಯನೇ ನಂದೇ ಎನ್ನುತ್ತಾರೆ. ಅದು ಹೇಗೋ ನನಗೆ ಗೊತ್ತಿಲ್ಲ, ಇದು ಮಂಡ್ಯದ ಮಣ್ಣೇ ವಿಶಿಷ್ಟವಾಗಿದೆ, ಮೌನದಲ್ಲೇ ಎಲ್ಲರನ್ನೂ ಪ್ರೀತಿಸಿದವರು ಎಂ.ಶ್ರೀನಿವಾಸ್ ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಎಂ.ಶ್ರೀನಿವಾಸ್ ಸಮಾಜ ಸೇವಾ ಪ್ರಶಸ್ತಿಯನ್ನು ನಳಿನಿ ತಿಮ್ಮಯ್ಯ ಹಾಗೂ ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿಯನ್ನು ಎಂ.ವಿ.ರಾಜೇಗೌಡ ಅವರಿಗೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ, ಜೆಡಿಎಸ್ ಮುಖಂಡ ಕೆ.ಟಿ.ಶ್ರೀಕಂಠೇಗೌಡ, ಕಾಂಗ್ರೆಸ್ ಮುಖಂಡ ಬಿ.ರಾಮಕೃಷ್ಣ, ನಿವೃತ್ತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ, ಮುಖಂಡ ಎಂ.ಶ್ರೀನಿವಾಸ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ಪ್ರತಿಷ್ಠಾನದ ಅಧ್ಯಕ್ಷ ಡಿ.ಶಿವರಾಜು ಕೀಲಾರ, ಯೋಗೇಶ್, ನಾಗಪ್ಪ ಹನಕೆರೆ ಭಾಗವಹಿಸಿದ್ದರು.