- ಗ್ರಾಮಸ್ಥರಿಂದ ಪ್ರತಿಭಟನೆ,
ಕನ್ನಡ ಪ್ರಭವಾರ್ತೆ, ಹುಣಸೂರು
ಹನಗೋಡು ಹೋಬಳಿ ಮುದಗನೂರು ಬಳಿ ಜಮೀನಿನಲ್ಲಿ ಕಾಡಾನೆ ತುಳಿತಕ್ಕೆ ರೈತನೋರ್ವ ಬಲಿಯಾಗಿರುವ ಘಟನೆ ಶನಿವಾರ ಬೆಳಗ್ಗೆ ಜರುಗಿದೆ.ಗ್ರಾಮದ ಚೆಲುವಯ್ಯ (70) ಮೃತಪಟ್ಟ ದುರ್ದೈವಿ. ಚೆಲುವಯ್ಯ ಅವರು ಸಮೀಪದ ಎಪಿಎಂಸಿ ಮಾಜಿ ಅಧ್ಯಕ್ಷ ಸುಭಾಷ್ ಅವರ ತೋಟದ ಹತ್ತಿರ ಹೋಗಿದ್ದರು. ಕೊಳವಿಗೆ ಅರಣ್ಯ ಇಲಾಖೆಯ ವಸತಿ ಗೃಹದ ಹತ್ತಿರ ಪ್ರತ್ಯಕ್ಷವಾದ ಸಲಗವನ್ನು ಅರಣ್ಯದೊಳಗೆ ಓಡಿಸಲು ಪ್ರಯತ್ನಿಸಿದಾಗ ಸಲಗವು ರೈಲ್ವೆ ಬ್ಯಾರಿಕೇಡ್ ಹತ್ತಿರ ದಾಟಿ ವೇಗವಾಗಿ ಮುದಗನೂರಿನ ತೋಟದ ಸಮೀಪದಲ್ಲಿ ಕೆಲಸ ಮಾಡುತ್ತಿದ್ದ ರೈತ ಚೆಲುವಯ್ಯ ಅವರ ಮೇಲೆ ಎರಗಿದೆ, ತಕ್ಷಣ ಪಕ್ಕದಲ್ಲಿ ಇದ್ದ ಅರಣ್ಯ ಇಲಾಖೆಯವರು ಕೂಗಿಕೊಂಡರು ಬಿಡದೆ ಎರಡು ಕೈಗಳನ್ನು ಮುರಿದು ಹಾಕಿ ಕಾಲಿನಿಂದ ಒಸಕಿ ಹಾಕಿದ ರಭಸಕ್ಕೆ ಸ್ಥಳದಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಈ ಆನೆಯನ್ನು ಹಿಡಿಯಲು ಸುತ್ತಮುತ್ತಲಿನ ಗ್ರಾಮಗಳಲ್ಲಿ ಒತ್ತಾಯ ಇದ್ದರು ಆನೆ ಹಿಡಿಯುವ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ, ಈ ಸುತ್ತಮುತ್ತ ಪ್ರತಿ ವರ್ಷ ಒಂದು ಅಥವಾ ಎರಡು ಸಾವು ಆನೆ ದಾಳಿಯಿಂದ ಆಗುತ್ತಿವೆ, ಇದನ್ನು ತಪ್ಪಿಸಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಸುಭಾಷ್ ಆರೋಪಿಸಿದ್ದಾರೆ.
ನನಗೆ ಸ್ವಲ್ಪ ಆರೋಗ್ಯ ಸಮಸ್ಯೆ ಇದ್ದ ಕಾರಣ ಸ್ಥಳಕ್ಕೆ ಬರಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸೂಕ್ತ ಪರಿಹಾರ ನೀಡಿ ಸಾಂತ್ವನ ಹೇಳಿ ಎಂದು ಕಳುಹಿಸಿದ್ದೇನೆ, ನನ್ನ ಆರೋಗ್ಯ ಸುಧಾರಿಸಿದ ತಕ್ಷಣ ಗ್ರಾಮಕ್ಕೆ ಭೇಟಿ ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸ್ಥಳಕ್ಕೆ ಬರಬೇಕು, ಅರಣ್ಯದಂಚಿನ ಗ್ರಾಮಸ್ಥರು ಆತಂಕದಲ್ಲಿ ಜೀವನ ನಡೆಸುವಂತೆ ಆಗಿದೆ. ಒಂದು ಕಡೆ ಹುಲಿ ಕಾಟವಾದರೆ ಮತ್ತೊಂದೆಡೆ ಆನೆಯ ದಾಳಿಯಿಂದ ದಿನನಿತ್ಯ ನರಕ ಅನುಭವಿಸುವಂತಾಗಿದೆ, ಆದ್ದರಿಂದ ಸಚಿವರು ಸ್ಥಳಕ್ಕೆ ಬರಬೇಕು, ಅಲ್ಲಿಯವರೆಗೂ ಮೃತ ದೇಹವನ್ನು ಮೇಲೆತ್ತಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷ ಕುಮಾರ್ ಚಿಕ್ಕನರಗುಂದ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮನವೊಲಿಸಲು ಮುಂದಾದರು ಸಹ ಯಾರು ಜಗ್ಗಲಿಲ್ಲ, ಅರಣ್ಯ ಇಲಾಖೆಯ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟಿಸಿದರು.