ಚಿಂತಾಮಣಿಯಲ್ಲಿ ಎಂಜಿನಿಯರಿಂಗ್ ಕಾಲೇಜು ನಿರ್ಮಾಣ

KannadaprabhaNewsNetwork |  
Published : Feb 04, 2024, 01:33 AM IST
ಸಿಕೆಬಿ-5 ಸಚಿವ ಡಾ.ಎಂ.ಸಿ.ಸುಧಾಕರ್ ಚಿಂತಾಮಣಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ನೀಡಿ ಕಟ್ಟಡ ಪರಿಶೀಲಿಸಿದರು. | Kannada Prabha

ಸಾರಾಂಶ

ಚಿಂತಾಮಣಿ ನಗರದಲ್ಲಿ ಎಂಜಿನಿಯರಿಂಗ್ ಕಾಲೇಜು ನಿರ್ಮಿಸುವುದು ಈ ಭಾಗದ ಜನರ ಕನಸಾಗಿತ್ತು. ಅದರಂತೆ ನಿರ್ಮಾಣ ಪ್ರಕ್ರಿಯೆಗಳು ವೇಗವಾಗಿ ನಡೆಯುತ್ತಿದ್ದು, ನೆಲ ಅಂತಸ್ತಿನ ಕಟ್ಟಡ ಕಾಮಗಾರಿಗಳ ನಿರ್ಮಾಣಕ್ಕೆ ಬೇಕಾದ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಂತಾಮಣಿ ನಗರದಲ್ಲಿ 70 ಕೋಟಿ ರು.ಗಳ ವೆಚ್ಚದಲ್ಲಿ ಎಂಜಿನಿಯರಿಂಗ್ ಕಾಲೇಜನ್ನು ನಿರ್ಮಿಸಲಾಗುವುದು ಎಂದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ಶನಿವಾರ ಚಿಂತಾಮಣಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ “ಕಾಲೇಜು ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜು ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಅದರಲ್ಲೂ ವೃತ್ತಿ ಪರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದರು.

ಸರ್ಕಾರಿ ಕಾಲೇಜಿಗೆ ಹೊಸ ಕಟ್ಟಡ

ಚಿಂತಾಮಣಿ ನಗರದಲ್ಲಿ ಎಂಜಿನಿಯರಿಂಗ್ ಕಾಲೇಜು ನಿರ್ಮಿಸುವುದು ಈ ಭಾಗದ ಜನರ ಕನಸಾಗಿತ್ತು. ಅದರಂತೆ ನಿರ್ಮಾಣ ಪ್ರಕ್ರಿಯೆಗಳು ವೇಗವಾಗಿ ನಡೆಯುತ್ತಿದ್ದು, ನೆಲ ಅಂತಸ್ತಿನ ಕಟ್ಟಡ ಕಾಮಗಾರಿಗಳ ನಿರ್ಮಾಣಕ್ಕೆ ಬೇಕಾದ ಎಲ್ಲ ಅಗತ್ಯ ಸಿದ್ದತಾ ಕ್ರಮಗಳನ್ನು ಸರ್ಕಾರ ಈಗಾಗಲೆ ಕೈಗೊಂಡಿದೆ. ಜೊತೆಗೆ 14 ಕೋಟಿ ವೆಚ್ಚದಲ್ಲಿ ಚಿಂತಾಮಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೊತ್ತರ ಕೇಂದ್ರ ಹಾಗೂ 7.5 ಕೋಟಿ ವೆಚ್ಚದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡಗಳನ್ನು ನಿರ್ಮಿಸಲು ಈಗಾಗಲೆ ಕ್ರಮ ವಹಿಸಲಾಗಿದೆ ಎಂದರು.

ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗ ತಮಗೆ ನಿಗದಿಯಾಗಿರುವ ಕೆಲಸ ಕಾರ್ಯಗಳನ್ನು ಸಮಪರ್ಕವಾಗಿ, ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಎಲ್ಲ ಪ್ರಸಿದ್ದ ಖಾಸಗಿ ಕಾಲೇಜುಗಳ ಶಿಕ್ಷಣವನ್ನು ಮೀರಿಸುವಂತಹ ಕಲಿಕಾ ವಾತಾವರಣವನ್ನು ಇಲ್ಲಿ ನಿರ್ಮಿಸಬಹುದು ಎಂದರು.

ನ್ಯಾಕ್‌ ಮಾನದಂಡ ಪಾಲಿಸಿ

ಮುಂದಿನ ದಿನಗಳಲ್ಲಿ ನ್ಯಾಕ್ ( ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತೆ) ಸಮಿತಿ ಈ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಲಿದೆ ಆಂತಹ ಸಂದರ್ಭದಲ್ಲಿ ಉನ್ನತ ದರ್ಜೆಯ ಗ್ರೇಡ್ ಸಿಗುವಂತಾಗಲು ನಿಮ್ಮ ಕಾರ್ಯದಕ್ಷತೆ, ಶೈಕ್ಷಣಿಕ ಫಲಿತಾಂಶ, ಕಲಿಕಾ ವಾತಾವರಣ ಎಲ್ಲವೂ ಮಾನದಂಡವಾಗಲಿದೆ ಎಂದರು. ಎಲ್ಲ ಕಾಲೇಜುಗಳಲ್ಲಿ ಹುದ್ದೆಗಳು ಖಾಲಿ ಇರುವುದು ಸರ್ಕಾರದ ಗಮನದಲ್ಲಿದೆ. ಮುಂದಿನ ದಿನಗಳಲ್ಲಿ 7 ಸಾವಿರ ಬೋಧಕರ ವರ್ಗದವರನ್ನು ಹಾಗೂ 20 ಸಾವಿರ ಬೋಧಕೇತರ ವರ್ಗದವರನ್ನು ಉನ್ನತ ಶಿಕ್ಷಣ ಇಲಾಖೆಯಡಿ ನೇಮಕ ಮಾಡಿಕೊಳ್ಳಲು ಅಗತ್ಯ ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ತುಂಬುವ ಕೆಲಸ ಆಗಲಿದೆ ಎಂದು ಸಚಿವರು ಭರವಸೆ ನೀಡಿದರು.

ಕಾಲೇಜು ಕಟ್ಟಡದ ನೀಲನಕ್ಷೆ ಈ ವೇಳೆ ಸಚಿವರು ಚಿಂತಾಮಣಿ ನಗರದಲ್ಲಿ ನೂತನವಾಗಿ ನಿರ್ಮಿಸಲಿರುವ ಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಚಿಂತಾಮಣಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೊತ್ತರ ಕೇಂದ್ರದ ಕಟ್ಟಡಗಳ ಪೂರ್ವ ಸಿದ್ದತಾ ನೀಲ ನಕ್ಷೆಗಳನ್ನು ವಿಕ್ಷಿಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಈ ಸಭೆಯಲ್ಲಿ ಚಿಂತಾಮಣಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೊತ್ತರ ಕೇಂದ್ರದ ಪ್ರಾಂಶುಪಾಲರಾದ ಹೆಚ್.ಜಿ.ಸುಗುಣ,ಚಿಂತಾಮಣಿ ನಗರಸಭೆ ಪೌರಾಯುಕ್ತ ಚಲಪತಿ, ಕಾಲೇಜು ಅಭಿವೃಧ್ಧಿ ಸಮಿತಿ ಸಭೆಯ ಸದಸ್ಯರು, ಕಾಲೇಜಿನ ಬೋದಕ ಬೋದಕೇತರ ವರ್ಗದವರು ಹಾಜರಿದ್ದರು.

ಪಾಲಿಟೆಕ್ನಿಕ್‌ ಕಾಲೇಜಿಗೆ ಭೇಟಿ

ಚಿಂತಾಮಣಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೊತ್ತರ ಕೇಂದ್ರದ ಕಾಲೇಜು ಅಭಿವೃಧ್ಧಿ ಸಮಿತಿ ಸಭೆಯ ನಂತರ ಸಚಿವರು ಚಿಂತಾಮಣಿ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಮಹಾತ್ಮ ಗಾಂಧೀಜಿ ಫ್ರೌಢಶಾಲೆ ಹಾಗೂ ಕಾಗತಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''