ಕನ್ನಡಪ್ರಭ ವಾರ್ತೆ ಹಾಸನ ಜಿಲ್ಲೆಯಲ್ಲಿ ಈಗಾಗಲೇ ಪೂರ್ಣಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಸಂಬಂಧ ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಸೂಚಿಸಿದ್ದಾರೆ.
ವಿವಿಧ ಅಭಿವೃದ್ಧಿ ನಿಗಮಗಳು ಹಾಗೂ ವಿವಿಧ ಇಲಾಖೆಗಳಲ್ಲಿ ಸವಲತ್ತು ವಿತರಣೆಗೆ ಆಯ್ಕೆಯಾಗಿರುವ ಫಲಾನುಭವಿಗಳ ಪಟ್ಟಿ ತಯಾರಿಸಿ ಎಂದು ತಿಳಿಸಿದರಲ್ಲದೆ, ಹೊಸದಾಗಿ ರಚನೆಯಾಗಿರುವ ಕಂದಾಯ ಗ್ರಾಮಗಳಿಗೆ ಹಕ್ಕು ಪತ್ರ ವಿತರಣೆಗೆ ಕ್ರಮವಹಿಸಲು ತಿಳಿಸಿದರು. ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ನಿರ್ಮಿಸುತ್ತಿರುವ ೪೧ ಮನೆಗಳನ್ನು ಪೂರ್ಣಗೊಳಿಸಿ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಿ ಎಂದರು. ನಗರದ ರಸ್ತೆಗಳ ಗುಂಡಿ ಮುಚ್ಚುವ ಜೊತೆಗೆ ನಗರ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು. ನಗರೋತ್ಥಾನ, ಇಂದಿರಾ ಕ್ಯಾಂಟಿನ್, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುದಾನಕ್ಕೆ ಹೆಚ್ಚು ಒತ್ತು ನೀಡಿ ಶೇ.100 ಗುರಿ ಸಾಧಿಸುವಂತೆ ಸೂಚಿಸಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ. ೨೬, ೨೭ರಂದು ನಡೆಯುವ ಬೃಹತ್ ಉದ್ಯೋಗ ಮೇಳದಲ್ಲಿ ಜಿಲ್ಲೆಯ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗಪಡೆದುಕೊಳ್ಳುವಂತೆ ಪ್ರಚಾರ ನೀಡುವಂತೆ ತಿಳಿಸಿದರು. ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ, ಉಪ ಅರಣ್ಯಸಂರಕ್ಷಣಾಧಿಕಾರಿ ಸೌರಬ್ ಕುಮಾರ್,ಎಡಿಸಿ ಕೆ ಟಿ.ಶಾಂತಲಾ, ಎಎಸ್ಪಿ ವೆಂಕಟೇಶ್ ನಾಯ್ಡು ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.