ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿಯೇ ಹೋದರೂ ಹಣೆಗೆ ಕುಂಕುಮ ಹಚ್ಚದಂತೆ ರಾಜ್ಯದ ಜನರಲ್ಲಿ ಶಾಸಕ ಅರವಿಂದ ಬೆಲ್ಲದ ಮನವಿ ಮಾಡಿಕೊಂಡಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿ ಚಲೋ ಚಳವಳಿ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕರಿಗೆ ಅನುದಾನ ಕೊಡುವ ಯೋಗ್ಯತೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕಿಲ್ಲ. ನಾನೂ ಶಾಸಕನಿದ್ದೇನೆ. ಕಳೆದ 8 ತಿಂಗಳಾದರೂ ಒಂದು ಕೋಟಿ ರೂಪಾಯಿ ಅನುದಾನ ನೀಡಿಲ್ಲ. ಅವರಲ್ಲಿ ಒಳಜಗಳ, ಭ್ರಷ್ಟಾಚಾರದ ಆರೋಪದಿಂದ ಪಾರಾಗಲು ಜನರ ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದರು.
ಅವರು ಏನೇ ತಿಪ್ಪರಲಾಗಾ ಹಾಕಿದರೂ ಕೇಂದ್ರದಲ್ಲಿ ನರೇಂದ್ರ ಮೋದಿ ಅವರನ್ನೇ ಆರಿಸಿ ತರುವ ನಿರ್ಧಾರ ಜನ ಮಾಡಿದ್ದಾರೆ. ಸರ್ಕಾರದ ದುಡ್ಡನ್ನು ಪಕ್ಷಕ್ಕೆ, ಕಾರ್ಯಕರ್ತರ ಜೇಬಿಗೆ ಹೊರಟಿದೆ. ಅದೇ ದುಡ್ಡನ್ನು ಬರಗಾಲ, ಅಭಿವೃದ್ಧಿಗೆ ಹಾಕಲಿ. ಭ್ರಷ್ಟಾಚಾರದ ಮೂಲಕ ನಾಯಕರೆಲ್ಲ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಗ್ಯಾರಂಟಿಗಳು ಕೇವಲ ಲೋಕಸಭಾ ಚುನಾವಣೆವರೆಗೂ ಮಾತ್ರ. ಇವರಿಗೆ ತಾವು ಲೋಕಸಭೆಯಲ್ಲಿ ಗೆಲ್ಲಲ್ಲ ಅಂತಾ ಗೊತ್ತಾಗಿದೆ. ಅದಕ್ಕೆ ಗ್ಯಾರಂಟಿ ರದ್ದಿನ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.