ಕೋರಂ ಕೊರತೆ: ನಡೆಯದ ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರ ಆಯ್ಕೆ

KannadaprabhaNewsNetwork | Published : Nov 9, 2023 1:00 AM

ಸಾರಾಂಶ

ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ, ಪ್ರಕ್ರಿಯೆ ಸಭೆಯಲ್ಲಿ 9 ಜನ ನಿರ್ದೇಶಕರ ಕೋರಂ ಇರಬೇಕಿತ್ತು. ಆದರೆ, ಎಂಟು ನಿರ್ದೇಶಕರ ಹಾಜರಾತಿ ಮಾತ್ರ ಇದ್ದುದ್ದರಿಂದ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್‌ ವಿಶ್ವಜಿತ್‌ ಮೆಹತಾ ಕೋರಂ ಕೊರತೆ ಹಿನ್ನೆಲೆ ಮುಂದೂಡಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಬಿಡಿಸಿಸಿ) ಚುನಾವಣೆ ಕೋರಂ ಕೊರತೆಯಿಂದ ಮುಂದೂಡಿತು. ಈ ಚುನಾವಣೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಂಗಳಕ್ಕೆ ತಲುಪಿದ್ದು, ಕಾಂಗ್ರೆಸ್‌ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದರಿಂದ ಇನ್ನಷ್ಟು ಕುತೂಹಲಕ್ಕೆಡೆ ಮಾಡಿದೆ.

ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ, ಪ್ರಕ್ರಿಯೆ ಸಭೆಯಲ್ಲಿ 9 ಜನ ನಿರ್ದೇಶಕರ ಕೋರಂ ಇರಬೇಕಿತ್ತು. ಆದರೆ, ಎಂಟು ನಿರ್ದೇಶಕರ ಹಾಜರಾತಿ ಮಾತ್ರ ಇದ್ದುದ್ದರಿಂದ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್‌ ವಿಶ್ವಜಿತ್‌ ಮೆಹತಾ ಕೋರಂ ಕೊರತೆ ಹಿನ್ನೆಲೆ ಮುಂದೂಡಿದರು.

ಅಧ್ಯಕ್ಷರ ಸ್ಥಾನಕ್ಕೆ ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಸಹಕಾರಿಗಳಲ್ಲಿತ್ತು. ಆದರೆ, ಅವರು ನಾಮಪತ್ರ ಸಲ್ಲಿಸದೇ ದೂರವೇ ಉಳಿದರು.

ನಾಮಪತ್ರ ಸಲ್ಲಿಕೆ:

ಬಿಡಿಸಿಸಿ ಬ್ಯಾಂಕ್‌ನ ಚುನಾವಣೆಗೆ ನಿಗದಿತ ಸಮಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೂಡ್ಲಿಗಿಯ ಕೆ. ತಿಪ್ಪೇಸ್ವಾಮಿ ಹಾಗೂ ಸಿರುಗುಪ್ಪದ ಚೊಕ್ಕಬಸವನಗೌಡ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕಂಪ್ಲಿಯ ಮೂಕಯ್ಯ ಸ್ವಾಮಿ, ಕೊಟ್ಟೂರಿನ ಐ. ದ್ವಾರುಕೇಶ್ ನಾಮಪತ್ರ ಸಲ್ಲಿಸಿದರು. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿಯೇ ಬಣಗಳ ನಡುವೆ ಒಮ್ಮತ ಮೂಡದ್ದರಿಂದ ಅವಿರೋಧ ಆಯ್ಕೆ ನಡೆಯದೇ ನಾಮಪತ್ರ ಸಲ್ಲಿಕೆ ಮಾಡಲಾಯಿತು.

ಬಣಗಳ ತಿಕ್ಕಾಟ:

ಬಿಡಿಸಿಸಿ ಬ್ಯಾಂಕ್‌ನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಹತ್ತು ಜನ ನಿರ್ದೇಶಕರು ಗೆಲುವು ಸಾಧಿಸಿದ್ದಾರೆ. ಆದರೆ, ಬಣಗಳ ತಿಕ್ಕಾಟ, ಒಳರಾಜಕಾರಣ ನುಸುಳಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಒಮ್ಮತ ಮೂಡದ್ದರಿಂದ ಎರಡು ಬಣಗಳಾಗಿ ನಾಮಪತ್ರ ಸಲ್ಲಿಕೆ ಮಾಡಲಾಗಿದೆ.

ಕೆ. ತಿಪ್ಪೇಸ್ವಾಮಿ ಜತೆಗೆ ಬಿಜೆಪಿ ಬೆಂಬಲಿತ ನಿರ್ದೇಶಕರು ಗುರುತಿಸಿಕೊಂಡಿದ್ದು, ಅತ್ತ ಚೊಕ್ಕಬಸವನಗೌಡರು ಕೂಡ ನಾಮಪತ್ರ ಸಲ್ಲಿಸಿ ಅಖಾಡಕ್ಕೆ ಇಳಿದಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಕಾಂಗ್ರೆಸ್‌ ಪಕ್ಷದ ವರಿಷ್ಠರು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಕೋರಂ ಕೊರತೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

ಯಾರು ಮತದಾರರು?

ಬಿಡಿಸಿಸಿ ಬ್ಯಾಂಕ್‌ನ 14 ಚುನಾಯಿತ ನಿರ್ದೇಶಕರು, ಸಹಕಾರ ಇಲಾಖೆಯ ಉಪನಿಬಂಧಕರು ಮತ್ತು ಅಪೆಕ್ಸ್‌ ಬ್ಯಾಂಕ್‌ ನಾಮನಿರ್ದೇಶಿತ ಸದಸ್ಯರೊಬ್ಬರು ಕೂಡ ಚುನಾವಣೆಯಲ್ಲಿ ಮತದಾನ ಮಾಡಬಹುದು. ಇದರೊಂದಿಗೆ 16 ಜನ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಈ ಮಧ್ಯೆ ಅಪೆಕ್ಸ್‌ ಬ್ಯಾಂಕ್‌ ನಾಮನಿರ್ದೇಶಿತ ಸದಸ್ಯ ಜಗದೀಶ್‌, ಸಹಕಾರ ಇಲಾಖೆಯ ಉಪನಿಬಂಧಕ ಕೇಸರಿಮಠ ಹೊಸಪೇಟೆಯಲ್ಲೆ ಇದ್ದರೂ ಸಭೆಗೆ ಬಂದಿಲ್ಲ. ಸರ್ಕಾರದ ಒತ್ತಡದಿಂದ ಇವರಿಬ್ಬರು ಸಭೆಗೆ ಹಾಜರಾಗಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಜಗದೀಶ್‌ ಅವರು ನಗರದ ರೈಲ್ವೆ ನಿಲ್ದಾಣದ ಸಮೀಪದ ಹೋಟೆಲ್‌ಯೊಂದರಲ್ಲಿ ನ. 7ರಂದೇ ವಾಸ್ತವ್ಯ ಹೂಡಿದ್ದು, ಸಭೆಯಿಂದ ದೂರ ಉಳಿದಿದ್ದಾರೆ ಎಂದು ಕೆ. ತಿಪ್ಪೇಸ್ವಾಮಿ ಬಣದ ನಿರ್ದೇಶಕರೊಬ್ಬರು ದೂರಿದರು.

ವರಿಷ್ಠರ ಗಮನಕ್ಕೆ: ಬಿಡಿಸಿಸಿ ಬ್ಯಾಂಕ್‌ನಲ್ಲಿ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರೇ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ, ಕಾಂಗ್ರೆಸ್‌ನ ಕೆಲ ನಿರ್ದೇಶಕರು ಕೆ. ತಿಪ್ಪೇಸ್ವಾಮಿ ಅವರ ಜತೆಗೆ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್‌ನವರು ಚೊಕ್ಕಬಸವನಗೌಡರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಕೋರಂ ಕೊರತೆಯಿಂದ ಚುನಾವಣೆ ಮುಂದೂಡಿಕೆಯಾಗಿದೆ. ಪಕ್ಷದ ವರಿಷ್ಠರ ಗಮನಕ್ಕೆ ಎಲ್ಲ ಬೆಳವಣಿಗೆ ತರಲಾಗಿದೆ ಎನ್ನುತ್ತಾರೆ ಕೆಎಂಎಫ್‌ ಅಧ್ಯಕ್ಷ ಎಸ್‌. ಭೀಮಾನಾಯ್ಕ.ಒತ್ತಡ ಇಲ್ಲ:

ಕಾನೂನು ಪ್ರಕಾರ ಸರ್ಕಾರದ ಪ್ರತಿನಿಧಿಗಳು ಭಾಗಿಯಾಗಬೇಕಿತ್ತು. ಯಾರ ಒತ್ತಡದಿಂದ ಭಾಗಿಯಾಗಿಲ್ಲ ಎಂಬುದು ಗೊತ್ತಿಲ್ಲ. ಸಹಕಾರ ಕ್ಷೇತ್ರದಲ್ಲಿ ಯಾವುದೇ ಪಕ್ಷ ಇಲ್ಲ, ಜಾತಿ ಇಲ್ಲ. ನಾವೆಲ್ಲ ಪಕ್ಷಾತೀತವಾಗಿ ಸಹಕಾರಿಗಳಾಗಿ ಜತೆಯಾಗಿದ್ದೇವೆ ಎನ್ನುತ್ತಾರೆ ಕೆ. ತಿಪ್ಪೇಸ್ವಾಮಿ.ಶೀಘ್ರ ದಿನಾಂಕ ನಿಗದಿ:

ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಕೋರಂ ಕೊರತೆ ಹಿನ್ನೆಲೆ ಮುಂದೂಡಲಾಗಿದೆ. ಶೀಘ್ರ ದಿನಾಂಕ ನಿಗದಿಗೊಳಿಸಲಾಗುವುದು. ಈಗ ನಾಮಪತ್ರ ಸಲ್ಲಿಸಿದವರನ್ನೇ ಮುಂದಿನ ಸಭೆಯಲ್ಲಿ ಪರಿಗಣಿಸಲಾಗುವುದು. ಹೊಸದಾಗಿ ನಾಮಪತ್ರ ಸಲ್ಲಿಸಲು ಬರುವುದಿಲ್ಲ ಎನ್ನುತ್ತಾರೆ ಚುನಾವಣಾಧಿಕಾರಿ ವಿಶ್ವಜಿತ್‌ ಮೆಹತಾ.

Share this article