ಕನಕಗಿರಿ, ಹುಲಿಹೈದರ್ ಮತ್ತು ನವಲಿ ಹೋಬಳಿಗಳ ರೈತರಲ್ಲಿ ಆತಂಕ
ರಾಮಮೂರ್ತಿ ನವಲಿ
ಕನ್ನಡಪ್ರಭ ವಾರ್ತೆ ಗಂಗಾವತಿರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದೆ. ಪಕ್ಕದಲ್ಲೇ ತುಂಗಭದ್ರಾ ಅಣೆಕಟ್ಟೆ ತುಂಬಿ, ಹೊಳೆಗೆ ನೀರು ಹರಿಸಲಾಗುತ್ತಿದೆ. ಆದರೆ ಕನಕಗಿರಿ ವ್ಯಾಪ್ತಿಯಲ್ಲಿ ಮಳೆ ಕೊರತೆಯಿಂದ ರೈತರು ಬೆಳೆದ ಬೆಳೆ ಈಗ ಬಾಡುತ್ತಿವೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ.
ಅಖಂಡ ಗಂಗಾವತಿ ತಾಲೂಕಿನಲ್ಲಿ ಬರುವ ಕನಕಗಿರಿ, ಹುಲಿಹೈದರ್ ಮತ್ತು ನವಲಿ ಹೋಬಳಿಗಳಲ್ಲಿ ಸರಿಯಾದ ಮಳೆಯಾಗಿಲ್ಲ, ಇದರಿಂದ ಬೆಳೆದ ಬೆಳೆಗಳು ದಿನದಿಂದ ದಿನಕ್ಕೆ ಬಾಡುತ್ತಿವೆ.
ಕನಕಗಿರಿ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಮೂರು ಹೋಬಳಿಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಮಳೆಯ ಅಭಾವ ಉಂಟಾಗಿದೆ. ಬಿತ್ತನೆಗೆ ಮೊದಲು ಸಮರ್ಪಕ ಮಳೆಯಾಗಿತ್ತು. ನಂತರ ಮಳೆ ಇಲ್ಲದೆ ಇರುವುದರಿಂದ ರೈತರು ಸಾಕಷ್ಟು ಪ್ರಮಾಣದಲ್ಲಿ ಬೀಜ ಮತ್ತು ಗೊಬ್ಬರ ಖರೀದಿಸಿ ವೆಚ್ಚ ಮಾಡಿರುವುದು ನಷ್ಟ ಅನುಭವಿಸಿದಂತಾಗುತ್ತಿದೆ ಎಂಬುದು ರೈತರು ಅಳಲಾಗಿದೆ. ಕಳೆದ 20 ದಿನಗಳಿಂದ ಮಳೆಯಾಗದೆ ಇರುವುದಕ್ಕೆ ತೊಗರಿ, ಸೂರ್ಯಕಾಂತಿ, ಸಜ್ಜೆ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿವೆ.
ರಾಜ್ಯದಲ್ಲಿ ಭಾರಿ ಮಳೆಯಾಗಿ ಹಳ್ಳ, ಕೊಳ್ಳ ಸೇರಿದಂತೆ ಜಲಾಶಯಗಳು ಭರ್ತಿಯಾಗಿವರ. ಆದರೆ ಕನಕಗಿರಿ ವ್ಯಾಪ್ತಿಯಲ್ಲಿ ಮಳೆಯ ಕೊರತೆಯಿಂದಾಗಿ ಬೆಳೆಗಳು ನಷ್ಟವಾಗುವ ಹಂತದಲ್ಲಿವೆ.
ಅಖಂಡ ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮೂರು ಹೋಬಳಿಗಳಾದ ಕನಕಗಿರಿ, ಹುಲಿಹೈದರ್ ಮತ್ತು ನವಲಿ ಹೋಬಳಿಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು ತಿಳಿಸಿದ್ದಾರೆ.
ಈ ಮೂರು ಹೋಬಳಿಗಳಲ್ಲಿ ಬೆಳೆಗಳು ಮಳೆ ಕೊರತೆಯಿಂದ ಹಾನಿಯಾಗುತ್ತಿಲ್ಲ. ಗಾಳಿ ಬೀಸಿದ ಪರಿಣಾಮವಾಗಿ ಬಾಗುತ್ತಿವೆ. ಇದರಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಇನ್ನು ಮಳೆ ಬರುವ ಅವಕಾಶ ಇದ್ದು, ರೈತರು ಯಾವುದೇ ಕಾರಣಕ್ಕೆ ಭಯಪಡಬೇಕಾಗಿಲ್ಲ ಎಂದು ಪಟ್ಟದಕಲ್ಲು ತಿಳಿಸಿದ್ದಾರೆ.