ಕನ್ನಡಪ್ರಭ ವಾರ್ತೆ ಶಿಕಾರಿಪುರ
ಗ್ರಾಮದ ಕುಮಾರನಾಯ್ಕ ಎಂಬುವರ ತಾಯಿ ಗಂಗೀಬಾಯಿ ಮೃತಪಟ್ಟ ಹಿನ್ನಲೆಯಲ್ಲಿ ಶವ ದಹಿಸಲು ಅಂತ್ಯಕ್ರಿಯೆಗಾಗಿ ಸಿದ್ದತೆ ಕೈಗೊಳ್ಳುವಾಗ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ತೀವ್ರವಾಗಿ ಆಕ್ಷೇಪಿಸಿ ಅರಣ್ಯ ಇಲಾಖೆ ಜಾಗದಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದರು. ಗ್ರಾಮದ ಸ.ನಂ 95 ರಲ್ಲಿನ 5 ಎಕರೆ ಜಾಗವನ್ನು ಹಲವು ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳು ಸ್ಮಶಾನಕ್ಕಾಗಿ ಮಂಜೂರುಗೊಳಿಸಿದ್ದು, ಇದುವರೆಗೂ ನಿರ್ದಿಷ್ಟ ಜಾಗವನ್ನು ಕಂದಾಯ ಇಲಾಖೆ ಗುರುತಿಸದ ಕಾರಣ ಗ್ರಾಮಸ್ಥರು ರೊಚ್ಚಿಗೆದ್ದು ಶವ ದಹಿಸಲು ಜಾಗದ ಕೊರತೆಯಿಂದಾಗಿ ಶಿಕಾರಿಪುರ-ಹೊನ್ನಾಳಿ ಮುಖ್ಯರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ಶವ ದಹಿಸಲು ಅಗತ್ಯವಾದ ಕಟ್ಟಿಗೆ ರಾಶಿಯನ್ನು ಹಾಕಿ ಸಿದ್ದತೆ ಕೈಗೊಳ್ಳುವ ಮೂಲಕ ಅಧಿಕಾರಿಗಳನ್ನು ದಂಗು ಬಡಿಸಿದರು.
ಪರಿಸ್ಥಿತಿಯ ತೀವ್ರತೆ ಅರಿತು ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಮಂಜುಳಾ ಭಜಂತ್ರಿ, ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ್, ಸಿಪಿಐ ಮತ್ತಿತರರು ಗ್ರಾಮಸ್ಥರನ್ನು ಸಮಾಧಾನಿಸುವ ಪ್ರಯತ್ನ ನಡೆಸಿದರು. ಗ್ರಾಮದ ಸ.ನಂ 90 ರ 450 ಎಕರೆ ಜಾಗದಲ್ಲಿ 50 ಎಕರೆ ಒತ್ತುವರಿಯಾಗಿದ್ದು, ಪುನಃ ಜಾಗದ ಸರ್ವೆ ಕೈಗೊಂಡು ಗುರುತಿಸಿಕೊಡಲಾಗುವುದು ಇದೀಗ ನೀಲಗಿರಿ ಪ್ಲಾಂಟೇಶನ್ ಸಮೀಪದಲ್ಲಿ ಶವ ಸಂಸ್ಕಾರ ನಡೆಸುವಂತೆ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿದರು.ರಾಷ್ಟ್ರೀಯ ಗೋರ್ ಸೇನಾ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಾನಾಯ್ಕ ಮಾತನಾಡಿ, ಗ್ರಾಮದಲ್ಲಿ ಕನಿಷ್ಠ ಮೃತ ವ್ಯಕ್ತಿಯ ಅಂತ್ಯಕ್ರಿಯೆಗೆ ಸೂಕ್ತ ಜಾಗವಿಲ್ಲದೆ ಪರದಾಡುತ್ತಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳು ಮಂಜೂರುಗೊಳಿಸಿದ ಜಾಗವನ್ನು ಕೂಡಲೇ ನಿಗದಿಪಡಿಸಿಕೊಡಬೇಕು ತಪ್ಪಿದಲ್ಲಿ ಘಟನೆ ಪುನರಾವರ್ತನೆಯಾದಲ್ಲಿ ಅಧಿಕಾರಿಗಳು ಹೊಣೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಹಾಗೂ ಗ್ರಾಮಸ್ಥರ ಮದ್ಯೆ ಮಾತಿನ ಚಕಮಕಿಯಿಂದಾಗಿ ಕೆಲ ಕಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಯಿತು.ಗ್ರಾ.ಪಂ ಸದಸ್ಯ ರವಿಕುಮಾರ್, ಗಿರೀಶನಾಯ್ಕ, ಮಲ್ಲಿಕಾರ್ಜುನ, ಚನ್ನೇಶನಾಯ್ಕ, ಪೋಮ್ಯಾನಾಯ್ಕ, ಜಯಪ್ರಕಾಶ ನಾಯ್ಕ ಸಹಿತ ನೂರಾರು ಗ್ರಾಮಸ್ಥರು ಹಾಜರಿದ್ದರು.