ಜಿ.ಸೋಮಶೇಖರ
ಕೊಟ್ಟೂರು: ನಾಲ್ಕೈದು ದಿನಗಳ ಹಿಂದೆ ಸಡಗರ ಸಂಭ್ರಮದೊಂದಿಗೆ ಪುನರ್ ಆರಂಭಗೊಂಡ ತಾಲೂಕಿನ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಸರ್ಕಾರ ಇದುವರೆಗೂ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿಲ್ಲ. ಸಹಜವಾಗಿಯೇ ತಾಲೂಕಿನಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದೆ.ಕೊಟ್ಟೂರು, ಕೂಡ್ಲಿಗಿ ತಾಲೂಕಿನಲ್ಲಿ 245 ಶಿಕ್ಷಕರ ಕೊರತೆ ಬಾಧಿಸುತ್ತಿದೆ. ತಕ್ಷಣವೇ 135 ಶಿಕ್ಷಕರು ಬೇಕಿದ್ದರೂ ಇದುವರೆಗೂ ಶಿಕ್ಷಣ ಇಲಾಖೆಯಿಂದ ಯಾವುದೇ ಸೂಚನೆ ವ್ಯಕ್ತವಾಗಿಲ್ಲ. ಜತೆಗೆ 228 ಶಾಲಾ ಕೊಠಡಿಗಳ ಅಗತ್ಯವಿದೆ. 350 ಕೊಠಡಿಗಳು ದುರಸ್ತಿಪಡಿಸಬೇಕಿದೆ. 80 ಬಿಸಿಯೂಟದ ಅಡುಗೆ ಕೊಠಡಿ, 115 ಶೌಚಾಲಯಗಳ ಕೊರತೆ ಎದ್ದು ಕಾಣುತ್ತಿದೆ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ತಾಲೂಕು ಶಿಕ್ಷಣ ಇಲಾಖೆಯಿಂದ ಪತ್ರ ಬರೆದಿದೆ. ಈ ಪತ್ರಕ್ಕೆ ಪೂರಕ ಉತ್ತರ ಇದುವರೆಗೂ ಬಂದಿಲ್ಲ. ಇಷ್ಟೆಲ್ಲ ನ್ಯೂನತೆ ಇದ್ದರೂ ಶಾಲಾ ಮಕ್ಕಳು ಹೊಸ ಶೈಕ್ಷಣಿಕ ವರ್ಷದ ಮೊದಲ ದಿನ ಲವಲವಿಕೆಯಿಂದ ಶಾಲಾ ಪ್ರವೇಶ ಮಾಡಿದ್ದಾರೆ. ಪಠ್ಯಪುಸ್ತಕ ಮತ್ತು ಸಮವಸ್ತ್ರಗಳು ಮಾತ್ರ ಈ ವಿದ್ಯಾರ್ಥಿಗಳಿಗೆ ದೊರೆತಿವೆ.ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಮಟ್ಟದ ಶೈಕ್ಷಣಿಕ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಹೆಚ್ಚಾಗಿ ಕಂಡುಬರಲು ಶಿಕ್ಷಕರ ಕೊರತೆ ಮತ್ತು ಕೊಠಡಿಗಳ ಕೊರತೆ ನೀಗಬೇಕಿದೆ. ಇದಾದಲ್ಲಿ ಈ ಶಾಲೆಗಳಲ್ಲಿ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆ ನಡೆಯುವಂತಾಗುತ್ತದೆ.
ಶಿಕ್ಷಕರ ಕೊರತೆ ನೀಗಿಸಲು ಪ್ರತಿವರ್ಷ ಅತಿಥಿ ಶಿಕ್ಷಕರ ನೇಮಕ ಆಗುತ್ತಿತ್ತು. ಆದರೆ ಶಾಲೆಗಳು ಆರಂಭಗೊಂಡರೂ ಈ ಬಾರಿ ಅತಿಥಿ ಶಿಕ್ಷಕರ ಪ್ರಕ್ರಿಯೆ ನಡೆದೇ ಇಲ್ಲ.ಎಲ್‌ಕೆಜಿ, ಯುಕೆಜಿ, ಆಂಗ್ಲ ಭಾಷಾ ತರಗತಿ ಆರಂಭಿಸಲಾಗಿದೆ. ಆದರೆ ಈ ತರಗತಿಗಳಿಗೆ ಸಂಬಂಧಿಸಿದ ಶಿಕ್ಷಕರು ಬರಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ, ಆಂಗ್ಲ ಮಾಧ್ಯಮ ಪ್ರಾರಂಭಿಸಿರುವುದು ಖಾಸಗಿ ಶಾಲೆಗಳನ್ನು ನಿದ್ದೆಗೆಡಿಸುವಂತೆ ಮಾಡಿದೆ. ಇದು ಮುಂಬರುವ ದಿನಗಳಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ಎದುರು ನೋಡಬೇಕಿದೆ.
ಈಗಾಗಲೇ ಶೇ.90 ಸಮವಸ್ತ್ರಗಳನ್ನು ಪ್ರತಿ ಶಾಲೆಗೆ ವಿತರಿಸಲಾಗಿದೆ. ಶೇ.60 ಪಠ್ಯಪುಸ್ತಕಗಳು ಶಾಲೆಗಳಿಗೆ ತಲುಪಿವೆ. ಶಿಕ್ಷಕರ ಕೊರತೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಸಂಬಂಧಪಟ್ಟವರು ಮುಂದಾದರೆ ಶೈಕ್ಷಣಿಕ ಪ್ರಗತಿ ಹೊಂದಲಿದೆ ಎನ್ನುತ್ತಾರೆ ಕೊಟ್ಟೂರು-ಕೂಡ್ಲಿಗಿ ಬಿಇಒ ಪದ್ಮನಾಭ ಕರ್ಣಂ.