ಜಲ ಸಾಕ್ಷರತೆ ಕೊರತೆಯಿಂದ ನೀರಿನ ಸಮಸ್ಯೆ ಸೃಷ್ಟಿ

KannadaprabhaNewsNetwork |  
Published : Apr 08, 2024, 01:00 AM IST
7ಡಿಡಬ್ಲೂಡಿ4,5ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ದಿಗಾಗಿ ಜಿಲ್ಲಾ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಭೆ.  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಪ್ರತಿ ಗ್ರಾಮಕ್ಕೆ ಒಂದು ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತದಿಂದ ಒಂದು ಗ್ರಾಮ-ಒಂದು ಕೆರೆ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲಿ ಈ ಯೋಜನೆಯನ್ನು ಗ್ರಾಮಸ್ಥರ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ಆರಂಭಿಸಲಾಗುವುದು.

ಧಾರವಾಡ:

ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳಿದ್ದರೂ ನೀರಿನ ಸಮಸ್ಯೆ ಉಂಟಾಗುತ್ತಿದೆ. ಅಂರ್ತಜಲಮಟ್ಟ ಕುಸಿಯುತ್ತಿದೆ. ಕೊಳವೆಬಾವಿಗಳು ಬತ್ತುತ್ತಿವೆ. ಇದಕ್ಕೆ ಕಾರಣ ನಮ್ಮಲ್ಲಿ ಜಲಸಾಕ್ಷರತೆ ಕಡಿಮೆ ಇರುವುದು. ಆದ್ದರಿಂದ ಜಿಲ್ಲೆಯಲ್ಲಿ ಜಲ ಸಂರಕ್ಷಣದ ಆಂದೋಲನವನ್ನು ಒಂದು ಗ್ರಾಮ ಒಂದು ಕೆರೆ ಯೋಜನೆ ಮೂಲಕ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಜಿಲ್ಲಾ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಭೆ ಜರುಗಿಸಿದ ಅವರು, ಜಿಲ್ಲೆಯಲ್ಲಿ 1206 ಕೆರೆಗಳಿವೆ. ಪ್ರತಿ ವರ್ಷ ಹೀಗೆ ವಿವಿಧ ಇಲಾಖೆಗಳಿಂದ ಹೂಳೆತ್ತುವ ಕಾಮಗಾರಿ, ಬಂಡು ಕಟ್ಟುವ ಕಾಮಗಾರಿ, ಪಿಚ್ಚಿಂಗ್ ವರ್ಕ ಮಾಡಲಾಗುತ್ತದೆ. ಆದರೆ, ಅದರ ಪ್ರತಿಫಲ ಅಷ್ಟಾಗಿ ಕಾಣುತ್ತಿಲ್ಲ. ವಿವಿಧ ಇಲಾಖೆಗಳಲ್ಲಿನ ಪರಸ್ಪರ ಸಮನ್ವಯದ ಕೊರತೆ ಮತ್ತು ಸಮಗ್ರ ಅಭಿವೃದ್ಧಿ ಕುರಿತು ಆಲೋಚನೆ ಇಲ್ಲದಿರುವುದು, ಕೆರೆಗಳ ಅಭಿವೃದ್ಧಿಗೆ ಹಿನ್ನಡೆ ಆಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಪ್ರತಿ ಗ್ರಾಮಕ್ಕೆ ಒಂದು ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತದಿಂದ ಒಂದು ಗ್ರಾಮ-ಒಂದು ಕೆರೆ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲಿ ಈ ಯೋಜನೆಯನ್ನು ಗ್ರಾಮಸ್ಥರ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ಆರಂಭಿಸಲಾಗುವುದು. ಜಿಲ್ಲೆಯ 1206 ಕೆರೆಗಳನ್ನು ಹಂತ-ಹಂತವಾಗಿ ಈ ಯೋಜನೆಗೆ ಒಳಪಡಿಸಲಾಗುವುದು. ಮೊದಲ ಹಂತದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್ಯ ಹಾಗೂ ಸಣ್ಣ ನಿರಾವರಿ ಇಲಾಖೆಯ ಕೆರೆಗಳನ್ನು ತೆಗೆದುಕೊಳ್ಳಲಾಗುವುದು. ಜಿಪಂ ಉಪಕಾರ್ಯದರ್ಶಿಗಳು ಈ ಕುರಿತು ಸ್ಪಷ್ಟವಾದ ಮಾಹಿತಿ ಮತ್ತು ನೀಲನಕ್ಷೆಯೊಂದಿಗೆ ಮುಂದಿನ ಸಭೆಯೊಳಗಾಗಿ ಕ್ರಿಯಾಯೋಜನೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಈಗಾಗಲೇ ಜಿಲ್ಲೆಯ ಎಲ್ಲ ಕೆರೆಗಳನ್ನು ಭೂಮಾಪನ ಇಲಾಖೆಯಿಂದ ಸರ್ವೆ ಮಾಡಲಾಗಿದೆ. ಕೆರೆ ಜಮೀನು ಅತಿಕ್ರಮಣವಾಗಿದ್ದಲ್ಲಿ ಅದನ್ನು ಸಹ ಗುರುತಿಸಲಾಗಿದೆ. ಕೆರೆ ಸರ್ವೆ ಮಾಡಿ, ಬಾನಕಂ ಗುರುತು ಕಲ್ಲುಗಳನ್ನು ಕೆರೆಯ ಸುತ್ತಲೂ ಹಾಕಿದ್ದರೂ ಕೆಲವರು ಅಂತಹ ಸರ್ವೆ ಕಲ್ಲುಗಳನ್ನು ಮತ್ತೆ ಕಿತ್ತು ಹಾಕಿ, ಕೆರೆ ಭೂಮಿ ಒತ್ತುವರಿ ಮಾಡಿದ್ದು ಕಂಡುಬಂದಿದೆ. ಕೆರೆ ಮಾಲೀಕತ್ವ ಹೊಂದಿರುವ ಇಲಾಖೆ ಅಧಿಕಾರಿಗಳು ಇದನ್ನು ಪರಿಶೀಲಿಸಿ, ಗುರುತು ಕಲ್ಲುಗಳನ್ನು ಕಿತ್ತುಹಾಕಿ ಕೆರೆ ಒತ್ತುವರಿ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ನಿಷ್ಕಾಳಜಿ ತೋರಿದಲ್ಲಿ ಅಂತಹ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಒಂದು ಗ್ರಾಮ ಒಂದು ಕೆರೆ ಯೋಜನೆಯಡಿ ಆಯ್ಕೆ ಮಾಡುವ ಕೆರೆ ಹೂಳೆತ್ತುವ, ಸುತ್ತಲೂ ವಾಕಿಂಗ್ ಪಥ ಮಾಡುವ, ಹೂವು, ನೆರಳಿನ ಗಿಡ ನೇಡುವ, ವಿಶ್ರಾಂತಿಗೆ ಆಸನ, ಕುಡಿಯುವ ನೀರು ಕಲ್ಪಿಸಲಾಗುತ್ತದೆ. ಅನುಕೂಲ ಮತ್ತು ಸಾಧ್ಯತೆ ಪರಿಶೀಲಿಸಿ ಅಲ್ಲಿ ಬೋಟಿಂಗ್, ಜಲಕ್ರೀಡೆಗಳಿಗೆ ಪಿಪಿಪಿ ಮಾದರಿಯಲ್ಲಿ ವ್ಯವಸ್ಥೆ ಮಾಡುವ ವಿಚಾರವಿದೆ. ಆಯಾ ಗ್ರಾಮಗಳ ಜನರ ಆಸಕ್ತಿ ಮತ್ತು ಕೆರೆ ಮಾಲೀಕತ್ವವಿರುವ ಇಲಾಖೆಗಳ ಇಚ್ಛಾಶಕ್ತಿಯು ಈ ಅಭಿವೃದ್ಧಿ ಕಾರ್ಯಗಳನ್ನು ಅವಲಂಭಿಸಿದೆ ಎಂದರು.

ಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ, ಕೆಲಗೇರಿ ಕೆರೆ, ಉಣಕಲ್ಲ ಕೆರೆ ಸೇರಿದಂತೆ ಅನೇಕ ಕೆರೆಗಳ ಬಗ್ಗೆ ಸಾರ್ವಜನಿಕರಿಂದ ತಮ್ಮ ಪ್ರಾಧಿಕಾರಕ್ಕೂ ಮತ್ತು ರಾಜ್ಯ ಉಚ್ಚ ನ್ಯಾಯಾಲಯಕ್ಕೂ ದೂರುಗಳು ಸಲ್ಲಿಕೆಯಾಗಿವೆ. ಈ ಕುರಿತು ಸಂಬಂಧಿಸಿದ ಇಲಾಖೆಗಳಿಗೆ ಪತ್ರ ಬರೆದು ಸೂಕ್ತ ಕ್ರಮವಹಿಸಿ, ವರದಿ ಸಲ್ಲಿಸಲು ತಿಳಿಸಲಾಗಿದೆ. ಕೆರೆ ಒತ್ತುವರಿ ಮಾಡುವವರ, ಕೆರೆಗಳಿಗೆ ಚರಂಡಿ ನೀರು, ಕಲ್ಮಷ ನೀರು ಬಿಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಿ, ಕೆರೆಗಳ ರಕ್ಷಣೆ ಆಗಬೇಕು ಎಂದು ಹೇಳಿದರು.

ಜಿಪಂ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ ಮಾತನಾಡಿದರು. ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಭೂದಾಖಲೆಗಳ ಇಲಾಖೆ ಉಪ ನಿರ್ದೇಶಕ ಮೋಹನ ಶಿವಣ್ಣನವರ, ಪಾಲಿಕೆ ಅಧೀಕ್ಷಕ ಅಭಿಯಂತರ ತಿಮ್ಮಪ್ಪ ಮತ್ತಿತರರು ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ