ಎಚ್ಡಿಕೆ ಸ್ಪರ್ಧೆಯಿಂದ ಮಂಡ್ಯ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕ್ಷೇತ್ರವಾಗಿದೆ: ಎಂ.ಆರ್.ಕುಮಾರಸ್ವಾಮಿ

KannadaprabhaNewsNetwork | Published : Apr 8, 2024 1:00 AM

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದಲ್ಲಿ 3 ನೇ ಬಾರಿಗೆ ಪ್ರಧಾನಿ ಮಾಡಬೇಕು ಎಂಬ ಉದ್ದೇಶದಿಂದ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಜೆಡಿಎಸ್-ಬಿಜೆಪಿ ಸಂಬಂಧ ಹೊಸದೇನಲ್ಲ. 2006ರಲ್ಲಿಯೇ ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಸರಕಾರ ರಚನೆ ಮಾಡಿ ಕೆಲಸ ಮಾಡಿವೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವತ್ತ ಎಲ್ಲ ಜತೆಗೂಡಿ ಕೆಲಸ ಮಾಡಲಿ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆಯಿಂದ ಮಂಡ್ಯ ಲೋಕಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳೊಂದಾಗಿದ್ದು, ಮಂಡ್ಯ ಸೇರಿ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಂ.ಆರ್.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿ ಸಂಸದೆ ಸುಮಲತಾ ಬಿಜೆಪಿಗೆ ಸೇರ್ಪಡೆಗೊಂಡಿರುವುದು ಸ್ವಾಗತಾರ್ಹ. ಸುಮಲತಾ ಸೇರ್ಪಡೆ ನಿರ್ಧಾರ ತಡವಾದ ಪರಿಣಾಮ ಕ್ಷೇತ್ರ ಜೆಡಿಎಸ್ ಪಾಲಾಗಿದೆ ಎಂದರು.

ಸುಮಲತಾರಿಗೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿವೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವತ್ತ ಎಲ್ಲ ಜತೆಗೂಡಿ ಕೆಲಸ ಮಾಡಲಿ ಎಂದರು.

ಎಚ್.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಎರಡು ಬಾರಿ ಸಿಎಂ ಆಗಿ ಕೆಲಸ ಮಾಡಿದ್ದಾರೆ. ರೈತಪರ, ಜನಪರ ಯೋಜನೆ ಜಾರಿಗೊಳಿಸಿದ್ದಾರೆ. ಹಾಗಾಗಿ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದಲ್ಲಿ 3 ನೇ ಬಾರಿಗೆ ಪ್ರಧಾನಿ ಮಾಡಬೇಕು ಎಂಬ ಉದ್ದೇಶದಿಂದ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಜೆಡಿಎಸ್-ಬಿಜೆಪಿ ಸಂಬಂಧ ಹೊಸದೇನಲ್ಲ. 2006ರಲ್ಲಿಯೇ ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಸರಕಾರ ರಚನೆ ಮಾಡಿ ಕೆಲಸ ಮಾಡಿವೆ ಎಂದರು.

ಎಚ್.ಡಿ.ದೇವೇಗೌಡರ ಜಾತ್ಯತೀಯ ಮನೋಭಾವದಿಂದ ಸ್ವಲ್ಪ ತಡವಾಗಿತ್ತು. ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿಯಿಂದಾಗಿ ಎಚ್.ಡಿ.ದೇವೇಗೌಡರು ಒಪ್ಪಿ ಇದೀಗ ಜೆಡಿಎಸ್-ಬಿಜೆಪಿ ಮೈತ್ರಿಯಾಗಿವೆ. ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದೆ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ಮೂಲಕ ಮಂಡ್ಯ ಜಿಲ್ಲೆಗೆ ಬರ ತಂದಿದೆ. ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಿದ್ದರೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುತ್ತಿರಲಿಲ್ಲ. ಈಗ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರವನ್ನು ಸಹ ನೀಡಿದೆ ನಮ್ಮದು ರೈತ ವಿರೋಧಿ ಸಾಬೀತು ಮಾಡಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತದ ಹೊರತಾಗಿಯು ರೈತ ಸಂಘವು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವುದು ಸರಿಯಲ್ಲ . ದೆಹಲಿಯಲ್ಲಿ ನಡೆಯುತ್ತಿರುವ ಚಳವಳಿ ರೈತ ಚಳವಳಿಯಲ್ಲ. ಖಲಿಸ್ತಾನ್ ಪರವಾಗಿ ಹೋರಾಡುತ್ತಿರುವ ಚಳವಳಿಯಾಗಿದೆ. ರೈತ ಚಳವಳಿಯಾಗಿದ್ದರೆ ತ್ರಿವರ್ಣ ಧ್ವಜವನ್ನು ಕೆಳಗೆ ಇಳಿಸಿ ಖಲಿಸ್ತಾನ್ ಧ್ವಜ ಹಾರಿಸುತ್ತಿರಲಿಲ್ಲ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಕಡಬ ಪುಟ್ಟರಾಜು, ಬಿಂಡಹಳ್ಳಿ ಉದಯ್, ಎನ್.ಭಾಸ್ಕರ್, ಕಣಿವೆಮಹೇಶ್, ತಾಳಶಾಸನ ವಿಷಕಂಠ, ವೇಣುಗೋಪಾಲ್, ಜಯಣ್ಣಚಾರಿ ಸೇರಿದಂತೆ ಹಲವರು ಹಾಜರಿದ್ದರು.

Share this article