ಕನ್ನಡಪ್ರಭ ವಾರ್ತೆ ಕೆ.ಆರ್. ಪೇಟೆ
ತಾಲೂಕಿನ ಶೀಳನೆರೆ ಹೋಬಳಿಯ ಮಲ್ಲಕೋನಹಳ್ಳಿ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಗ್ರಾಮದಿಂದ ಪ್ರಚಾರ ಆರಂಭಿಸಿದ ಸ್ಟಾರ್ ಚಂದ್ರು ಅನಂತರ ಬೂಕನಕೆರೆ ಹೋಬಳಿಯ ಐಚನಹಳ್ಳಿ, ಬೂಕನಕೆರೆ, ಬಲ್ಲೇನಹಳ್ಳಿ, ಗಂಜೀಗೆರೆ, ಬಳ್ಳೇಕೆರೆ, ಮಡುವಿನಕೋಡಿ, ಕಸಬಾ ಹೋಬಳಿಯ ಹರಿಹರಪುರ, ಬಂಡೀಹೊಳೆ, ಮಾಕವಳ್ಳಿ, ಕಿಕ್ಕೇರಿ ಹೋಬಳಿಯ ಚೌಡೇನಹಳ್ಳಿ, ದಬ್ಬೇಘಟ್ಟ, ಮಾದಾಪುರ, ಆನೆಗೊಳ, ಐಕನಹಳ್ಳಿ, ಲಕ್ಷ್ಮೀಪುರ ಮತ್ತು ಕಿಕ್ಕೇರಿ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ರೋಡ್ ಶೋ ಹಾಗೂ ಬಹಿರಂಗ ಸಭೆ ನಡೆಸಿ ಮತಯಾಚನೆ ಮಾಡಿದರು.
ಕೆಲವು ಗ್ರಾಪಂ ಕೇಂದ್ರಗಳಲ್ಲಿ ತೆರೆದ ವಾಹನದಿಂದ ಕೆಳಗಿಳಿದು ಮತದಾರರ ಕೈಕುಲುಕಿ ಮತಯಾಚಿಸಿದ ಅಭ್ಯರ್ಥಿ ಸ್ಟಾರ್ ಚಂದ್ರು ನಾನು ಜಿಲ್ಲೆಯ ಹೊರಗಿನ ಅಭ್ಯರ್ಥಿಯಲ್ಲ. ನಾಗಮಂಗಲ ತಾಲೂಕಿನ ಕನ್ನಘಟ್ಟ ಗ್ರಾಮದವನು. ನಾನು ಸಾಮಾನ್ಯ ರೈತನ ಮಗ. ಸ್ವಂತ ಪರಿಶ್ರಮದಿಂದ ಮೇಲೆ ಬಂದಿದ್ದೇನೆ. ನನಗೆ ನನ್ನದೇ ಆದ ಉದ್ದಿಮೆಯಿದೆ. ಸಾವಿರಾರು ಜನ ನಮ್ಮ ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ ಎಂದರು.ನನಗೆ ಹಣದ ಅವಶ್ಯಕತೆಯಿಲ್ಲ. ಹಣ ಮಾಡಲು ನಾನು ರಾಜಕೀಯಕ್ಕೆ ಬಂದಿಲ್ಲ. ಚುನಾವಣೆ ನನಗೆ ಹೊಸತಾದರೂ ರಾಜಕೀಯ ಹೊಸದಲ್ಲ. ಜಿಲ್ಲೆಯ ಜನರ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಜಿಲ್ಲೆಯ ಅಭಿವೃದ್ದಿಯ ಬಗ್ಗೆ ನನಗೆ ನನ್ನದೇ ಆದ ಕನಸುಗಳಿವೆ. ಉತ್ತಮ ಸಂಸದೀಯ ಪಟುವಾಗಿ ಕೆಲಸ ಮಾಡಿ ಕೇಂದ್ರ ಸರ್ಕಾರದಿಂದ ಜಿಲ್ಲೆಯ ಅಭಿವೃದ್ಧಿಗೆ ಬರಬಹುದಾದ ಎಲ್ಲಾ ಸವಲತ್ತುಗಳನ್ನು ತಂದು ಜಿಲ್ಲೆಯ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತೇನೆ ಎಂದು ಹೇಳಿದರು.
ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳಿಂದ ತೀವ್ರ ಬರಗಾಲದ ಸಂದರ್ಭದಲ್ಲಿ ಜನ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ, ಪ್ರತಿ ಕುಟುಂಬದ ಮಹಿಳೆಗೆ ವಾರ್ಷಿಕ 1 ಲಕ್ಷ ಸೇರಿದಂತೆ ನೀಡಿರುವ ಎಲ್ಲಾ ಗ್ಯಾರಂಟಿಗಳನ್ನೂ ಅನುಷ್ಠಾನಕ್ಕೆ ತರಲಿದೆ ಎಂದು ತಿಳಿಸಿದರು.
ತಾಲೂಕಿನ ಬಳ್ಳೇಕೆರೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಗ್ರಾಪಂನ ಬಿಜೆಪಿ ಕಾರ್ಯಕರ್ತರು ಹಾಗೂ ಹರಿಹರಪುರದಲ್ಲಿ ಬಿಜೆಪಿ ಮಹಿಳಾ ಉಪಾಧ್ಯಕ್ಷರು, ಸೇರಿದಂತೆ ಹಲವು ಮಹಿಳಾ ಕಾರ್ಯಕರ್ತೆಯರು ಕಾಂಗ್ರೆಸ್ ಗೆ ಸೇರ್ಪಡೆಯಾದರು. ಸ್ಟಾರ್ ಚಂದ್ರು ಅವರು ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.