ಬಂದ್‌ಗೆ ಹಾವೇರಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ, ಎಂಇಎಸ್‌ ನಿಷೇಧಕ್ಕೆ ಆಗ್ರಹ

KannadaprabhaNewsNetwork | Published : Mar 23, 2025 1:33 AM

ಸಾರಾಂಶ

ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲಿನ ಮರಾಠಿಗರ ದೌರ್ಜನ್ಯ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಹಾವೇರಿ ಜಿಲ್ಲೆಯಲ್ಲಿ ಸ್ಪಂದನೆ ಸಿಕ್ಕಿಲ್ಲ. ಕೆಲವು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಬಿಟ್ಟರೆ, ವಾಹನ ಸಂಚಾರ, ಜನಜೀವನ, ವ್ಯಾಪಾರ ವಹಿವಾಟು ಎಂದಿನಂತಿದ್ದವು.

ಹಾವೇರಿ: ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲಿನ ಮರಾಠಿಗರ ದೌರ್ಜನ್ಯ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಕೆಲವು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಬಿಟ್ಟರೆ, ವಾಹನ ಸಂಚಾರ, ಜನಜೀವನ, ವ್ಯಾಪಾರ ವಹಿವಾಟು ಎಂದಿನಂತಿದ್ದವು.

ನಗರದಲ್ಲಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಘಟಕದವರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸುವ ಮೂಲಕ ಬಂದ್‌ಗೆ ಬೆಂಬಲ ನೀಡಿದರು. ಜಿಲ್ಲೆಯಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ವ್ಯಾಪಾರ ವಹಿವಾಟು ನಿತ್ಯದಂತೆ ನಡೆದವು. ಅಗತ್ಯ ಸೇವೆಗಳಾದ ಆಸ್ಪತ್ರೆ, ಔಷಧ ಮಳಿಗೆಗಳು, ಹೋಟೆಲ್, ಹಾಲು, ದಿನಸಿ, ತರಕಾರಿ, ಅಂಗಡಿ ಎಂದಿನಂತೆ ಕಾರ್ಯನಿರ್ವಹಿಸಿದವು. ಬಸ್‌ಗಳ ಸಂಚಾರ, ಸಾರ್ವಜನಿಕರ ಓಡಾಟ, ಆಟೋ ಸಂಚಾರ ಯಥಾಸ್ಥಿತಿಯಲ್ಲಿ ಇದ್ದವು. ನಾಲ್ಕನೇ ಶನಿವಾರವಾದ್ದರಿಂದ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳಿಗೆ ರಜೆ ಇದ್ದವು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕರೆಯಂತೆ ಜಿಲ್ಲೆಯ ಸಿನಿಮಾ ಮಂದಿರದಲ್ಲಿ ಬೆಳಗ್ಗೆಯ ಒಂದು ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು.

ಕರವೇ ಸ್ವಾಭಿಮಾನಿ ಸೇನೆ ಪ್ರತಿಭಟನೆ: ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಸುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಮುಖಂಡರು ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಿದರು. ಮೆರವಣಿಗೆ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿದ ಸಂಘಟನೆ ಕಾರ್ಯಕರ್ತರು, ಎಂಇಎಸ್‌ ಗೂಂಡಾಗಿರಿಯನ್ನು ಖಂಡಿಸಿದರು.

ಜಿಲ್ಲಾಧ್ಯಕ್ಷ ರಾಮು ತಳವಾರ ಮಾತನಾಡಿ, ಎಂಇಎಸ್ ಸಂಘಟನೆ ರಾಜ್ಯದಲ್ಲಿ ಅನೇಕ ದುಷ್ಕೃತ್ಯಗಳನ್ನು ನಡೆಸುತ್ತಾ ಬಂದಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ನಡುವೆ ಭಾಷೆ ವಿಚಾರವಾಗಿ ಕಂದಕ ಉಂಟು ಮಾಡಿದೆ. ಪದೇ ಪದೇ ಅಶಾಂತಿ ನಿರ್ಮಾಣವಾಗಲು ಕಾರಣವಾಗಿದೆ. ಇತ್ತೀಚೆಗೆ ಬೆಳಗಾವಿಯಲ್ಲಿ ಕಂಡಕ್ಟರ್‌ನ್ನು ಅಮಾನುಷವಾಗಿ ಥಳಿಸಿ ವಿವಾದ ಸೃಷ್ಟಿಸಿದ್ದರು. ಹೀಗೆ ರಾಜ್ಯದಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಎಂಇಎಸ್ ಸಂಘಟನೆಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಬೇಕು ಎಂದು ಒತ್ತಾಯಿಸಿದರು.

ಅಲ್ಲದೇ ಉತ್ತರ ಕರ್ನಾಟಕ ಭಾಗವು ಅಭಿವೃದ್ಧಿ ಕಾರ್ಯಗಳಿಂದ ತೀರಾ ಹಿಂದುಳಿದಿದ್ದು ಇಲ್ಲಿನ ನೀರಾವರಿ ಯೋಜನೆಗಳು, ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಿಗೆ ಆದ್ಯತೆ ನೀಡಿ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಮಾ ಪುರದ ಮಾತನಾಡಿ, ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗೆ ಕುಡಿಯುವ ನೀರಿನ ಜತೆಗೆ ಇಲ್ಲಿನ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಮೇಕೆದಾಟು ಯೋಜನೆಯ ನಿರ್ಮಾಣವು ತುಂಬಾ ಅಗತ್ಯವಾಗಿದ್ದು, ಈ ಕಾರ್ಯಕ್ಕೆ ರಾಜ್ಯ ಸರ್ಕಾರ ಕೂಡಲೇ ಚಾಲನೆ ನೀಡಿ ಬಹುದಿನಗಳ ಬೇಡಿಕೆಯಾದ ಮೇಕೆದಾಟು ಯೋಜನೆಯನ್ನು ಶೀಘ್ರವೇ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಪ್ರೇಮಾ ಮುದಿಗೌಡ್ರ, ವಿವಿಧ ತಾಲೂಕಾಧ್ಯಕ್ಷರಾದ ಮಂಜುನಾಥ ದಾನಪ್ಪನವರ, ವೀರೇಶ ಹಡಪದ, ಉಮೇಶ ಮುದಿಗೌಡ್ರ, ನಾಗರಾಜ ಎರಬಾಳ, ಸುರೇಶ ವನಹಳ್ಳಿ, ಮುಖಂಡರಾದ ಪ್ರವೀಣ ಕಾಗದ, ಬಸವಣ್ಣಯ್ಯ ಬಸಾಪುರಮಠ, ಶಿವಪ್ಪ ಬಳಲಕೊಪ್ಪ, ಗೀತಾ ದಂಡೆಮ್ಮನವರ, ರೇಣುಕಾ ಗಡಿಯಣ್ಣನವರ, ಬಸವರಾಜ ಬಸಾಪುರ, ಪಾರಮ್ಮ ಹಾವನೂರ, ಜ್ಯೋತಿ ಚೌಡದಾನಪುರ, ಸಾವಿತ್ರಿ ಹಾವೇರಿ ಉಪಸ್ಥಿತರಿದ್ದರು.

Share this article