ಹೊಸಪೇಟೆ: ಲಾಡ್ ಎನ್ನುವುದು ಒಂದು ಪ್ರದೇಶದ ಹೆಸರು ಹೊರತು ಅದು ಜಾತಿ ಮತ್ತು ಸಮುದಾಯದ ಹೆಸರಲ್ಲ. ಈ ಸಮುದಾಯದಲ್ಲಿ ಎಲ್ಲ ಜಾತಿಯ ಜನಸಾಮಾನ್ಯರನ್ನು ಕಾಣಬಹುದು ಎಂದು ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಸಂಶೋಧನಾರ್ಥಿ ರಾಹುಲ್ ಎಸ್.ಎಂ. ಹೇಳಿದರು.
ರಾಜ್ಯದಲ್ಲಿ 8ರಿಂದ 10 ಸಾವಿರ ಜನಸಂಖ್ಯೆ ಜನರನ್ನು ಕಾಣಬಹುದು. ಲಾಡ್ ಸಮುದಾಯಕ್ಕೆ ತನ್ನದೇ ಚೌರಾಸಿ ಎನ್ನುವ ಭಾಷೆಯಿದ್ದು ಅದಕ್ಕೆ ಲಿಪಿ ಇಲ್ಲ. ಚೌರಾಸಿ ಎಂದರೆ 84 ಎಂದು ಅರ್ಥ, ಲಾಟರ್ ಪ್ರದೇಶವೂ ಬಂದರು ಪ್ರದೇಶವಾಗಿದ್ದು ಅಲ್ಲಿ ದೇಶ, ವಿದೇಶಗಳ ವ್ಯಾಪಾರಸ್ಥರು ವ್ಯಾಪಾರದ ದೃಷ್ಟಿಕೋನದಿಂದ ಈ ಭಾಷೆಯನ್ನು ಬಳಕೆ ಮಾಡುತ್ತಿದ್ದರು ಎಂದರು.
ಆದರೆ ಮರಾಠಿ ಸಮುದಾಯಕ್ಕೂ ಲಾಡ್ ಸಮುದಾಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಮರಾಠಿ ಸಮುದಾಯದಲ್ಲಿ 96 ಕುಳಿಗಳಿದ್ದು, ಅದರಲ್ಲಿ 80 ಕುಳಿ ಲಾಟ್ ಸಮುದಾಯದಾಗಿದೆ. ಮುಖ್ಯವಾಗಿ ಕರ್ನಾಟಕದಲ್ಲಿ ಲಾಡ್ ಸಮುದಾಯವು ಜಾತಿಯಾಗಿ ಪರಿಗಣಿಸಲಾಗಿದೆ. ಆದರೆ ಲಾಡ್ ಸಮುದಾಯವನ್ನು ಕೇವಲ ರಾಜಕೀಯ ಹಿನ್ನೆಲೆಯಲ್ಲಿ ನೋಡಲಾರದೆ ಅವರಲ್ಲಿರುವ ಸಾಂಸ್ಕೃತಿಕ ನೆಲೆಗಳಲ್ಲಿ ಕಾಣಬೇಕು ಎಂದು ತಿಳಿಸಿದರು.ಸಮಾಜಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಯರ‍್ರಿಸ್ವಾಮಿ ಈ., ಮಾತನಾಡಿ, ನಮ್ಮ ಅಧ್ಯಯನವು ಹೆಚ್ಚು ಸಮೀಕ್ಷೆಗಳಿಂದ ಕೂಡಿರಬೇಕು. ಹಾಗಾದರೆ ಮಾತ್ರ ನಮ್ಮ ಸಂಶೋಧನೆಯು ಹೆಚ್ಚು ಗುಣಮಟ್ಟದಿಂದ ಕೂಡಿರುತ್ತದೆ. ಮುಖ್ಯವಾಗಿ ಒಂದು ಜಾತಿಯನ್ನು ನೋಡುವ ಸಂದರ್ಭದಲ್ಲಿ ಹುಟ್ಟು, ವಿವಾಹ ಹಾಗೂ ಸಾವಿನ ಅಂಶಗಳಿಂದ ಅವರ ಜಾತಿಯನ್ನು ನಿರ್ಧಾರ ಮಾಡಬೇಕಾಗುತ್ತದೆ. ಇನ್ನೂ ಹೆಣ್ಣು ಮತ್ತು ಗಂಡು ಸಮಬಲ ಸಾಧಿಸಬೇಕಾದರೆ ಅವರ ಗೋತ್ರ ಬಹಳ ಮುಖ್ಯವಾಗುತ್ತದೆ. ಗೋತ್ರ ಇಲ್ಲದೆ ಜಾತಿಯನ್ನು ಪರಿಗಣಿಸಲು ಸಾಧ್ಯವೇ ಇಲ್ಲ. ಒಂದು ಸಮುದಾಯದ ಸಾಂಸ್ಕೃತಿಕ ನೆಲೆಗಟ್ಟನ್ನು ನೋಡುವ ಸಂದರ್ಭದಲ್ಲಿ ಗೋತ್ರ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದರು.
ಕನ್ನಡ ವಿವಿಯಲ್ಲಿ ನಡೆದ ಸಮಾಜಮುಖಿ ತಿಂಗಳ ಮಾತು-4ರ ಕಾರ್ಯಕ್ರಮದಲ್ಲಿ ಕರ್ನಾಟಕ ಲಾಡ್ ಸಮುದಾಯದ ಸಾಂಸ್ಕೃತಿಕ ನೆಲೆಗಳು ಎಂಬ ವಿಷಯ ಕುರಿತು ಸಂಶೋಧನಾರ್ಥಿ ರಾಹುಲ್ ಎಸ್.ಎಂ. ಮಾತನಾಡಿದರು.