ಕನ್ನಡಪ್ರಭ ವಾರ್ತೆ ಬೆಳಗಾವಿ
ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಇಂದಿನಿಂದಲೇ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗಾವಿ ನಗರದಲ್ಲಿ ಸುಮಾರು 80 ಸಾವಿರ ಮನೆಗಳಿಗೆ ಕೇಸರಿ ಬಣ್ಣದ ಧ್ವಜ ವಿತರಿಸಲಾಗುತ್ತಿದೆ. ಅಲ್ಲದೇ ರಾಮನ ಮೂರ್ತಿ ಪ್ರತಿಷ್ಠಾಪನೆ ದಿನವೇ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಮನೆ ಮನೆಗೆ ಲಾಡು ಮತ್ತು ರಾಮನ ಧ್ವಜ ನೀಡಲಾಗುವುದು ಎಂದು ಶಾಸಕ ಅಭಯ ಪಾಟೀಲ ಹೇಳಿದರು.ಈ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ 80 ಸಾವಿರ ಲಾಡು ತಯಾರಾಗುತ್ತಿದ್ದು ಕ್ಷೇತ್ರದ 80 ಸಾವಿರ ಕುಟುಂಬಗಳಿಗೆ ಲಾಡು ತಲುಪಲಿದೆ. ಈ ಲಾಡುವನ್ನು ಹೊರ ರಾಜ್ಯವಾದ ರಾಜಸ್ಥಾನ ಕಾರ್ಮಿಕರಿಂದ ತಯಾರಿಸಲಾಗುತ್ತಿದೆ. ಜ.22 ರಂದು ಮನೆ ಮನೆಗೆ ಲಾಡು ನೀಡಲು ಭರ್ಜರಿ ತಯಾರಿ ನಡೆಸಿದ್ದು ಒಂದೊಂದು ಬಾಕ್ಸ್‌ನಲ್ಲಿ 5 ಲಾಡುಗಳನ್ನು ಹಾಕಿ ಪ್ಯಾಕ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಇವತ್ತು ಹೊಸೂರು ಬಸವಣ್ಣ ಗಲ್ಲಿಯಲ್ಲಿ ಆಕಾಶ ಬುಟ್ಟಿಯಲ್ಲಿ ರಾಮನ ಬಾಲ್ಯದಿಂದ ಪಟ್ಟಾಭಿಷೇಕದವರೆಗೆ 100 ಚಿತ್ರಗಳ ಪ್ರದರ್ಶನವನ್ನು ಸಂಜೆ 7 ರಿಂದ ರಾತ್ರಿ 10 ಗಂಟೆಯವರೆಗೆ ಹಮ್ಮಿಕೊಂಡಿದ್ದೇವೆ. ಸುಮಾರು 10 ಸಾವಿರ ರಾಮನ ಭಕ್ತರ ಕೈಮೇಲೆ ರಾಮನ ರೇಖಾಚಿತ್ರವನ್ನು ಬಿಡಿಸುವಂತ ಕಾರ್ಯಕ್ರಮ ಸೋಮವಾರ ಪ್ರಾರಂಭವಾಗಲಿದೆ. ಇವತ್ತಿನಿಂದ ಸುಮಾರು 80 ಸಾವಿರ ಕುಟುಂಬಗಳಿಗೆ ಲಾಡು ಪ್ರಸಾದ ಹಂಚುವ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಕೆಲವೊಂದು ವಾರ್ಡ್‌ಗಳಲ್ಲಿ ನಗರ ಸೇವಕರು ವಾರ್ಡ್‌ಗಳ ಅಲಂಕಾರ ಮಾಡುವುದು ಮತ್ತು ಕೇಸರಿ ಧ್ವಜಗಳ ವಿತರಣೆ ಮಾಡುತ್ತಿದ್ದಾರೆ. ದಕ್ಷಿಣ ಮತ ಕ್ಷೇತ್ರದಲ್ಲಿ ದೀಪಾವಳಿವನ್ನು ಮತ್ತೊಮ್ಮೆ ಆಚರಣೆ ಮಾಡಲಾಗುತ್ತದೆ. ಇಡೀ ದೇಶದಲ್ಲಿ ಇದು ವಿನೂತನ ಹೊಸ ಯೋಜನೆ ಭಾರತೀಯರು ಎಲ್ಲರು ಈ ರೀತಿ ಕಾರ್ಯಕ್ರಮ ಮಾಡಬೇಕು ಎಂದು ಕೋರಿದರು.