ಹೊಳೆಆಲೂರು: ಬಡವರ ಮಕ್ಕಳನ್ನು ತಮ್ಮ ಮಕ್ಕಳಂತೆ ಭಾವಿಸಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ, ಉಚಿತ ಶಿಕ್ಷಣ ನೀಡುವುದಾಗಿ ಹೇಳಿದ ಲಿಂಗಬಸವೇಶ್ವರ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಶ್ಲಾಘಿಸಿದರು.ಸಮೀಪದ ಮೆಣಸಗಿ ಗ್ರಾಮದ ಲಿಂಗಬಸವೇಶ್ವರ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪಪೂ ಮಹಾವಿದ್ಯಾಲಯದ 19ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೇವಲ ಪಠ್ಯ ಶಿಕ್ಷಣವಷ್ಟೇ ಮಕ್ಕಳಿಗೆ ಸಿಗಬಾರದು. ಅವರ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾದ ಶಿಕ್ಷಣವನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡಬೇಕಿದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ಸಮಾಜದಲ್ಲಿ ಹೇಗೆ ಬಾಳಬೇಕೆಂಬುದರ ಮಾನವೀಯ ಮೌಲ್ಯಗಳನ್ನು ಮತ್ತು ಆದರ್ಶಗಳನ್ನು ಮಕ್ಕಳಲ್ಲಿ ಬೆಳೆಸಬೇಕಿದೆ. ಪ್ರತಿಯೊಬ್ಬ ಶಿಕ್ಷಕರು ನಿಸ್ವಾರ್ಥದಿಂದ ಕೆಲಸ ಮಾಡಿದರೆ ಖಂಡಿತ ಸಮಾಜ ಗುರುತಿಸುತ್ತದೆ ಎಂದರು.

ಈ ವೇಳೆ ಶಾಸಕರನ್ನು ಲಿಂಗಬಸವೇಶ್ವರ ಸಂಸ್ಥೆಯಿಂದ ಮೊದಲ ಬಾರಿಗೆ ನೀಡುತ್ತಿರುವ ಲಿಂಗವಸವ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾತೃವಂದನ ಹೆಸರಿನಲ್ಲಿ ಗ್ರಾಮಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ಕೊಣ್ಣೂರ ಕಲಾ ತಂಡ, ಎಸ್‌ಪಿಬಿ ಮೆಲೋಡಿಜ್ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಸಾನ್ನಿಧ್ಯವನ್ನು ಭೈರನಹಟ್ಟಿಯ ಶಾಂತಲಿಂಗ ಸ್ವಾಮಿಗಳು ವಹಿಸಿದ್ದರು. ನೇತೃತ್ವವನ್ನು ಗೌರವ ಅಧ್ಯಕ್ಷೆ ರತ್ನಮ್ಮ ತಾಯಿ ಹಿರೇಮಠ ಹಾಗೂ ಅಧ್ಯಕ್ಷತೆಯನ್ನು ಕಾಲೇಜು ಸಂಸ್ಥಾಪಕ ಆಶೋಕಜ್ಜ ಹಿರೇಮಠ ವಹಿಸಿದ್ದರು. ಕಾಲೇಜು ಉಪಾಧ್ಯಕ್ಷ ರವೀಂದ್ರ ಹಿರೇಮಠ, ನರಗುಂದ ಮಾಜಿ ಸಚಿವ ಬಿ.ಆರ್. ಯಾವಗಲ್, ಉಮೇಶಗೌಡ ಪಾಟೀಲ, ಸದಾನಂದ ಭಟ್, ದೀಪಕ್ ಸಿ.ಎಚ್., ಸಂಗಮೇಶ ಕೊಳ್ಳಿ, ಸಿದ್ದು ಕೊಣ್ಣೂರ, ಡಾ. ಅರುಂಧತಿ ಕುಲಕರ್ಣಿ, ಎಸ್.ವೈ. ಮುಲ್ಕಿಪಾಟೀಲ, ಶ್ರೀನಿವಾಸ ದೇಶಪಾಂಡೆ, ಅರ್ಜುನ ಕಾಂಬೋಗಿ, ಶಿವಕುಮಾರ ನೀಲಗುಂದ ಸೇರಿದಂತೆ ಅನೇಕರು ಇದ್ದರು.