ಕೆರೆ ಮಣ್ಣು: ಜಿಪಂ ಸಿಇಒ ಬಂಧನಕ್ಕೆ ಕೋರ್ಟ್‌ ಆದೇಶ

KannadaprabhaNewsNetwork |  
Published : Jan 08, 2024, 01:45 AM IST
7ಎಸ್‌ಎಂಜಿಕೆಪಿ02:   ಸ್ನೇಹಲ್‌ ಸುಧಾಕರ್‌, ಸಿಇಒ | Kannada Prabha

ಸಾರಾಂಶ

ಭೂಮಿಯ ಮೇಲಿನ ಪ್ರತಿಯೊಂದು ಸಂಪತ್ತನ್ನು ರಕ್ಷಿಸುವ, ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಯಾ ಪ್ರದೇಶಗಳ ಸರ್ಕಾರಗಳು ಕಣ್ಣಾಗವಲಿಟ್ಟಿವೆ. ಹಾಗಿದ್ದರೂ, ಅಕ್ರಮಗಳು ಸಂಪೂರ್ಣ ನಿಯಂತ್ರಣವಾಗಲು ಸಾಧ್ಯವಿಲ್ಲ ಅನ್ನೋದಕ್ಕೆ ಶಿವಮೊಗ್ಗದ ಒಂದು ಪ್ರಕರಣ ಸಾಕ್ಷಿಯಾಗಿದೆ. ತಾಲೂಕಿನ ಅಬ್ಬಲಗೆರೆಯ ಮುದ್ದಣ್ಣನ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರನ್ನೇ ಬಂಧಿಸಿ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ನ್ಯಾಯಾಲಯ (ಡಿ.13ರಂದು) ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ತಾಲೂಕಿನ ಅಬ್ಬಲಗೆರೆಯ ಮುದ್ದಣ್ಣನ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರನ್ನೇ ಬಂಧಿಸಿ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ನ್ಯಾಯಾಲಯ (ಡಿ.13ರಂದು) ಆದೇಶ ಹೊರಡಿಸಿರುವುದು ತಡವಾಗಿ ಬಹಿರಂಗವಾಗಿದೆ.

ಫೆಬ್ರವರಿ 16 ರಂದು ಜಿಪಂ ಸಿಇಒ ನ್ಯಾಯಾಲಯದ ಮುಂದೆ ಹಾಜರಾಗಿ ವರದಿಯನ್ನು ತಪ್ಪದೇ ಸಲ್ಲಿಸಬೇಕು. ಹಾಜರಾಗಲು ₹25,000 ಮುಚ್ಚಳಿಕೆ ಬರೆದುಕೊಟ್ಟರೆ ಅವರನ್ನು ಬಿಡುಗಡೆ ಮಾಡಬಹುದು ಹಾಗೂ ವಾರಂಟ್ ಹಿಂದಿರುಗಿಸಬಹುದು ಎಂದು ಆದೇಶದಲ್ಲಿ ಶಿವಮೊಗ್ಗ ಪೊಲೀಸರಿಗೆ ನಿರ್ದೇಶಿಸಲಾಗಿದೆ.

ತಾಲೂಕಿನ ಅಬ್ಬಲಗೆರೆ ಗ್ರಾಮದ ಮುದ್ದಣ್ಣನ ಕೆರೆಯಿಂದ ₹500 ಲೋಡು ಮಣ್ಣು ತೆಗೆಯಲು ಅನುಮತಿ ಪಡೆಯಲಾಗಿತ್ತು. ಆದರೆ, ಕಾನೂನು ಬಾಹಿರವಾಗಿ 15,004 ಲೋಡ್ ಮಣ್ಣು ತೆಗೆದು ಅಕ್ರಮವಾಗಿ ಸಾಗಿಸಲಾಗಿದೆ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ₹71.45 ಲಕ್ಷ ನಷ್ಟ ಉಂಟುಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ದಿನಪತ್ರಿಕೆ ಒಂದರಲ್ಲಿ ವರದಿ ಪ್ರಕಟವಾಗಿತ್ತು. ದಿನಪತ್ರಿಕೆ ವರದಿ ಆಧರಿಸಿ ಕರ್ನಾಟಕ ಭೂ ಕಬಳಿಕೆ ನಿಷೇಧ ನ್ಯಾಯಾಲಯದ ನ್ಯಾಯಿಕ ಸದಸ್ಯರು ಕರ್ನಾಟಕ ಭೂ ಕಬಳಿಕೆ ನಿಷೇಧ ಅನಿಯಮ 2011ರ ಕಲಂ 09ರ ಅಡಿ ವಿಶೇಷ ನ್ಯಾಯಾಲಯ ಸ್ವಯಂಪ್ರೇರಿತ ಪ್ರಕರಣ ಕೈಗೊಳ್ಳಬಹುದಾಗಿದೆ ಎಂದು 2023ರ ಆಗಸ್ಟ್‌ 19ರಂದು ವಿಷಯ ಮಂಡಿಸಿದ್ದರು. ಅನಂತರ ಅಕ್ಟೋಬರ್ 9ರಂದು ನ್ಯಾಯಾಲಯ ಆದೇಶ ಹೊರಡಿಸಿ, ನವೆಂಬರ್ 24ರಂದು ವಿವರವಾದ ವರದಿ ಸಲ್ಲಿಸುವಂತೆ ಜಿಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ ಅವರಿಗೆ ಸೂಚನೆ ನೀಡಿತ್ತು. ನ್ಯಾಯಾಲಯಕ್ಕೆ ಸಿಇಒ ಹಾಜರಾಗದ ಹಿನ್ನೆಲೆಯಲ್ಲಿ ಬಂಧನದ ಆದೇಶ ಹೊರಬಿದ್ದಿದೆ.

- - - ಕೋಟ್‌

ಕರ್ನಾಟಕ ಭೂ ಕಬಳಿಕೆ ನಿಷೇಧ ನ್ಯಾಯಾಲಯ ಆದೇಶ ಗಮನಕ್ಕೆ ಬಂದಿದೆ. ಈಗಾಗಲೇ ₹71.45 ಲಕ್ಷ ನಷ್ಟದ ಹಣ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ. ಫೆ.16ರೊಳಗೆ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ನೀಡಲು ಸೂಚನೆ ಕೊಟ್ಟಿದೆ. ಈ ಸಂಬಂಧ ನಿಗದಿತ ದಿನದಂದು ನ್ಯಾಯಾಲಯಕ್ಕೆ ವಿವರವಾದ ವರದಿ ಸಲ್ಲಿಸಲಾಗುವುದು

- ಸ್ನೇಹಲ್ ಸುಧಾಕರ ಲೋಖಂಡೆ, ಸಿಇಒ, ಜಿಲ್ಲಾ ಪಂಚಾಯಿತಿ, ಶಿವಮೊಗ್ಗ - - -

-7ಎಸ್‌ಎಂಜಿಕೆಪಿ02: ಸ್ನೇಹಲ್‌ ಸುಧಾಕರ್‌, ಸಿಇಒ

-7ಎಸ್‌ಎಂಜಿಕೆಪಿ07: ಕೋರ್ಟ್ ಡಿ.13ರಂದು ಹೊರಡಿಸಿರುವ ಆದೇಶದ ಪ್ರತಿ.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು