ಕನ್ನಡಪ್ರಭ ವಾರ್ತೆ ಕೆಜಿಎಫ್ ತಾಲೂಕಿನಾದ್ಯಂತ ೩೧೫ ಕೆರೆಗಳಿದ್ದು, ಈಗಾಗಲೇ ೧೧೮ ಕೆರೆಗಳ ಸರ್ವೇ ಮಾಡಲಾಗಿದೆ. ಇವುಗಳಲ್ಲಿ ೭೬ ಕೆರೆಗಳ ಒತ್ತುವರಿಯನ್ನು ತೆರವು ಮಾಡಿಸಲಾಗಿದೆ. ಮುಂದಿನ ೪ ದಿನಗಳಲ್ಲಿ ೧೦೦ ಕೆರೆಗಳನ್ನು ಸರ್ವೇ ಮಾಡಿ, ಅದರಲ್ಲೇನಾದರೂ ಒತ್ತುವರಿಯಾಗಿರುವುದು ಕಂಡುಬಂದಲ್ಲಿ ಒತ್ತುವರಿಯನ್ನು ಮುಲಾಜಿಲ್ಲದೇ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು. ತಾಲೂಕಿನಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮೀಕ್ಷೆ ಒಳಗೊಂಡಂತೆ ಕಂದಾಯ ಇಲಾಖೆಯಲ್ಲಿ ದಾಖಲೆಗಳ ಡಿಜಿಟಲೀಕರಣ ಹಾಗೂ ಭೂಮಿ ತಂತ್ರಾಂಶದ ಕುರಿತ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸುವ ನಿಟ್ಟಿನಲ್ಲಿ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಒಳಗೊಂಡಂತೆ ಅಧಿಕಾರಿಗಳ ಸಭೆಯನ್ನು ನಡೆಸಿದರು. ಅಕ್ರಮ ಗಣಿಗಾರಿಕೆಗೆ ಬ್ರೇಕ್
ನಗರದ ಕೆಲವು ಖಾಸಗಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಮೊತ್ತದ ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆ ಮತ್ತು ಸಮವಸ್ತ್ರ, ಪಠ್ಯ ಪುಸ್ತಕ, ನೋಟ್‌ಪುಸ್ತಕಗಳನ್ನು ಶಾಲೆಯಲ್ಲಿಯೇ ಖರೀದಿ ಮಾಡುತ್ತಿರುವುದರ ಬಗ್ಗೆ ನಿಖರವಾಗಿ ದೂರು ನೀಡಿದಲ್ಲಿ ಸಂಬಂಧಪಟ್ಟ ಬಿಇಒ ಮತ್ತು ಡಿಡಿಪಿಐ ರವರಿಂದ ವರದಿ ಬಂದಲ್ಲಿ ಅಂತಹ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸುವುದು ಸೇರಿದಂತೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗವೇಣಿ, ಶಿರಸ್ತೇದಾರ್ ಮಂಜುನಾಥ್, ಕಂದಾಯ ನಿರೀಕ್ಷಕ ಮುನಿವೆಂಕಟಸ್ವಾಮಿ, ಚಂದ್ರಮೋಹನ್ ಮೊದಲಾದವರು ಇದ್ದರು.