ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನ ತಳಕು ಹೋಬಳಿಯ ಬೇಡರೆಡ್ಡಿ ಹಳ್ಳಿ ಗ್ರಾಪಂ ತಳಕು ವೆಂಕಟೇಶ್ವರ ಟ್ರೇಡರ್ಸ್ ನವರು ಸರಬರಾಜು ಮಾಡಿದ ವಸ್ತುಗಳಿಗೆ 7.47 ಲಕ್ಷ ರು.ನೀಡಬೇಕಿದ್ದು, ಹಣ ನೀಡದೆ ನಿರ್ಲಕ್ಷ್ಯ ವಹಿಸಿದ ಬಗ್ಗೆ ರೈತ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮತ್ತು ಕುಟುಂಬ ಗ್ರಾಪಂ ಕಾರ್ಯಾಲಯದ ಮುಂದೆ ವಿಷದ ಬಾಟಲಿ ಇಟ್ಟು ಪ್ರತಿಭಟನೆ ನಡೆಸಿದ ಸುದ್ದಿಯ ಬಗ್ಗೆ ಹಾಲಿ ಸದಸ್ಯ ಹಿಂದಿನ ಅಧ್ಯಕ್ಷ ನಾಗೇಶರೆಡ್ಡಿ ಸ್ವಷ್ಟನೆ ನೀಡಿದ್ದಾರೆ.ನಗರದ ಪ್ರವಾಸಿ ಮಂದಿರದಲ್ಲಿ ಹಾಲಿ ಅಧ್ಯಕ್ಷ ಅರುಣ್‌ಕುಮಾರ್ ಹಾಗೂ ಸದಸ್ಯರೊಂದಿಗೆ ಮಾತನಾಡಿದ ಅವರು, ಗ್ರಾಪಂ ನಿಂದ ಕೇವಲ 2 ಲಕ್ಷ ರು. ಮಾತ್ರ ಪಾವತಿಸಬೇಕಿದ್ದು, ಕಳೆದ ಎಂಟು ತಿಂಗಳಿಂದ ಅವರು ಕಚೇರಿಗೂ ಆಗಮಿಸದೆ, ಬಿಲ್ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಗ್ರಾಪಂ ಆಡಳಿತಕ್ಕೆ ಯಾವುದೇ ಮಾಹಿತಿ ನೀಡದೆ ದೀಡಿರ್ ಮಂಗಳವಾರ ಕಚೇರಿ ಆವರಣದಲ್ಲಿ ವಿಷದ ಬಾಟಲ್ ಇಟ್ಟು ಬೆದರಿಸುವ ತಂತ್ರಮಾಡಿದ್ದಾರೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ಕೆಲಸ ಮಾಡದಂತೆ ಅಡ್ಡಿಪಡಿಸಿದ್ದಾರೆ. ಇದರಿಂದ ಗ್ರಾಮ ಪಂಚಾಯಿತಿಗೆ ಬರುವ ಸಾರ್ವಜನಿಕರಿಗೆ ಹಲವಾರು ರೀತಿಯ ತೊಂದರೆ ಎದುರಾಗಿವೆ. ಈ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ನೀಡಲಾಗಿದೆ ಎಂದರು.
ಈ ಬಗ್ಗೆ ಈಗಾಗಲೇ ಇಒ ಸೂಚನೆ ಮೇರೆಗೆ ಚರ್ಚೆ ನಡೆಸಿದ್ದು, ಮುಂದಿನ ಗ್ರಾಪಂ ಸಭೆಯಲ್ಲಿ ಅವರು ನೀಡಿದ ವಸ್ತುಗಳು ಹಾಗೂ ಬಿಲ್‌ಗಳ ಪರಿಶೀಲನೆ ನಡೆಸಿ ಹಣವನ್ನು ಪಾವತಿ ಮಾಡಲಾಗುವುದು ಎಂದು ಹೇಳಿದರು.ಈ ವೇಳೆ ಅಧ್ಯಕ್ಷ ಅರುಣ್‌ಕುಮಾರ್, ಸದಸ್ಯರಾದ ಶಿವಕುಮಾರ್, ವೇಣುಗೋಪಾಲರೆಡ್ಡಿ, ಜಯಲಕ್ಷ್ಮಿ, ಉಮೇಶ್, ನಾಗೇಶ್ ಕುಮಾರ್, ಬಿ.ಒ.ತಿಮ್ಮಯ್ಯ, ಶಿಲ್ಪ, ಶ್ರುತಿ, ಪದ್ಮ, ತ್ರಿವೇಣಿ ಮುಂತಾದವರು ಉಪಸ್ಥಿತರಿದ್ದರು.