ರಾಜ್ಯದಲ್ಲಿ 2.5 ಲಕ್ಷ ಹುದ್ದೆ ಖಾಲಿ: ಜೈಕುಮಾರ್‌

KannadaprabhaNewsNetwork | Published : Nov 25, 2024 1:02 AM

ರಾಜ್ಯದಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ ಇವೆ.

ಹೊಸಪೇಟೆ: ರಾಜ್ಯ ಸರ್ಕಾರಿ ನೌಕರರ ಸಮಸ್ಯೆಗಳ ಬಗ್ಗೆ ತಿಳಿದು ಅವುಗಳ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ರೂಪುರೇಷೆಗಳನ್ನು ತಯಾರಿಸಲು ಮತ್ತು ಸಂಘಟನೆ ಬಲಪಡಿಸಲು ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ ಎಂದು ಅಖಿಲ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಎಚ್.ಎಸ್. ಜೈಕುಮಾರ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ ಇವೆ. ಸರ್ಕಾರಿ ಶಾಲೆಗಳು ಮುಚ್ಚಿ ಹೋಗುವ ಸ್ಥಿತಿಯಲ್ಲಿವೆ. 35 ಸಾವಿರ ಶಿಕ್ಷಕರ ಹುದ್ದೆ ಖಾಲಿಯಿದೆ. ಕಾಲೇಜು ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ ಹುದ್ದೆ ಖಾಲಿ ಇವೆ. ಇದರಿಂದ ಶಾಲಾ ಮತ್ತು ಕಾಲೇಜು ಶಿಕ್ಷಣ ದುಸ್ಥಿತಿಗೆ ಬಂದಿದೆ. ಶಿಕ್ಷಣ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೊರ ಗುತ್ತಿಗೆ ನೌಕರರಿಂದಲೇ ಕೆಲಸ ಮಾಡಿಸುವುದರಿಂದ ಗುಣಮಟ್ಟ ಕಳೆದುಕೊಳ್ಳುತ್ತಿದೆ ಎಂದರು.

ಸರ್ಕಾರ ಅಧಿಕಾರಕ್ಕೆ ಬಂದ ವರ್ಷದಲ್ಲೇ ನೇಮಕಾತಿ ಮಾಡುವುದಾಗಿ ಹೇಳಿತ್ತು. ಈವರೆಗೆ ಮಾಡಲಿಲ್ಲ. ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಒತ್ತೆ ಇಟ್ಟಿದೆ. ನಮ್ಮ ಪಿಂಚಣಿ ಕಾರ್ಪೋರೇಟ್ ಸಂಸ್ಥೆಗಳಿಗೆ ಹೋಗುತ್ತಿದೆ. ಹಳೇ ನಿಶ್ಚಿತ ಪಿಂಚಣಿ ಜಾರಿಗೊಳಿಸಬೇಕು. ಸರ್ಕಾರವೇ ಲೂಟಿ ಮಾಡಲು ಹೊರಗುತ್ತಿಗೆ ಸಂಸ್ಥೆಗಳಿಗೆ ನೀಡುತ್ತಿದೆ ಎಂದರು.

ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಬಾರದು. ಬಲ ಪಡಿಸಬೇಕು. ಸರ್ಕಾರಿ ಸೇವೆ ಖಾಸಗೀಕರಣ ಮಾಡಬಾರದು. ಹೊರಗುತ್ತಿಗೆ ರದ್ದು ಮಾಡಬೇಕು. ಹತ್ತಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಕುಮಾರ್ ಮಾತನಾಡಿ, ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಯುವಕರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರ ನೇಮಕಾತಿ ಮಾಡದೇ ಲೂಟಿಯಲ್ಲಿ ತೊಡಗಿದೆ. ಹೊರಗುತ್ತಿಗೆ ಪದ್ದತಿಯಲ್ಲಿ ಬಹಳ ಭ್ರಷ್ಟಾಚಾರ ನಡೆಯುತ್ತಿದೆ. ಇದರಲ್ಲಿ ನೌಕರರ ಅರ್ಧ ಹಣ ಗುತ್ತಿಗೆ ಏಜೆನ್ಸಿಯವರ ಜೇಬಿಗೆ ಹೋಗುತ್ತಿದೆ. ಗುತ್ತಿಗೆ ನೌಕರರನ್ನು ತಮ್ಮ ಹಕ್ಕು ಕೇಳದಂತೆ ದೌರ್ಜನ್ಯ ಮಾಡಲಾಗುತ್ತಿದೆ. ಒಂದು ವೇಳೆ ಕೇಳಿದರೆ ಕೆಲಸದಿಂದ ತೆಗೆದುಹಾಕುತ್ತಾರೆ ಎಂದು ಆರೋಪಿಸಿದರು.

ಪ್ರಧಾನ ಕಾರ್ಯದರ್ಶಿ ಶೋಭಾ ಲೋಕನಾಗಣ್ಣ ಮಾತನಾಡಿದರು.

ಬಳಿಕ ನಗರದ ಅಮರಾವತಿ ಅತಿಥಿಗೃಹದಲ್ಲಿ ಕಲಬುರಗಿ ವಿಭಾಗೀಯ ಮಟ್ಟದ ಕಾರ್ಯಾಗಾರ ನಡೆಯಿತು.

ಸಂಘದ ರಂಗನಾಥ ಹವಾಲ್ದಾರ್, ಪ್ರಕಾಶ್ ಬಿಸೆರೊಟ್ಟಿ, ಡಾ.ವಿ.ಜಿ.ಆವಟಿ, ಜಿಲ್ಲಾಧ್ಯಕ್ಷ ನಾಗರಾಜ್ ಪತ್ತಾರ

ಮತ್ತಿತರರಿದ್ದರು.ಹೊಸಪೇಟೆಯ ಪತ್ರಿಕಾಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಎಚ್.ಎಸ್. ಜೈಕುಮಾರ್ ಮಾತನಾಡಿದರು.