ಅರಣ್ಯೀಕರಣಕ್ಕೆ ಸಜ್ಜುಗೊಂಡ ಲಕ್ಷ ಸಸಿಗಳು

KannadaprabhaNewsNetwork |  
Published : Jun 03, 2024, 12:33 AM ISTUpdated : Jun 03, 2024, 01:00 PM IST
ಪೋಟೊ2ಕೆಎಸಟಿ2: ಕುಷ್ಟಗಿ ತಾಲೂಕಿನ ಗುಡಿ ಕಲಕೇರಿಯ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಸಾಮಾಜಿಕ ಅರಣ್ಯ ವಲಯದ ಸಸ್ಯಪಾಲನಾ ಕ್ಷೇತ್ರದಲ್ಲಿ ಬೆಳೆಸಲಾದ ಸಾವಿರಾರು ಸಸಿಗಳು. | Kannada Prabha

ಸಾರಾಂಶ

ಅರಣ್ಯ ಇಲಾಖೆಯ ಸಾಮಾಜಿಕ ವಲಯ ಹಾಗೂ ಪ್ರಾದೇಶಿಕ ವಲಯವು ತಾಲೂಕಿನಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಸಸಿಗಳನ್ನು ಬೆಳೆಸುವ ಮೂಲಕ ಅರಣ್ಯ ಸಂಪತ್ತು ಹೆಚ್ಚಿಸಲು ಮುಂದಾಗಿದೆ.

 ಕುಷ್ಟಗಿ : ಅರಣ್ಯ ಇಲಾಖೆಯ ಸಾಮಾಜಿಕ ವಲಯ ಹಾಗೂ ಪ್ರಾದೇಶಿಕ ವಲಯವು ತಾಲೂಕಿನಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಸಸಿಗಳನ್ನು ಬೆಳೆಸುವ ಮೂಲಕ ಅರಣ್ಯ ಸಂಪತ್ತು ಹೆಚ್ಚಿಸಲು ಮುಂದಾಗಿದೆ.

ಮುಂಗಾರು ಪೂರ್ವ ಮಳೆ ಸುರಿಯುತ್ತಿದ್ದಂತೆ ಕೃಷಿ ಚಟುವಟಿಕೆ ಆರಂಭಗೊಂಡಿದ್ದು ಒಂದು ಕಡೆಯಾದರೆ ಮತ್ತೊಂದು ಕಡೆ ಅರಣ್ಯ ಇಲಾಖೆಯು ಸಸಿಗಳನ್ನು ನೆಡುವ ಮೂಲಕ ಹಸಿರು ಹೆಚ್ಚಿಸಲು ಮುಂದಾಗುತ್ತಿದೆ. ನರ್ಸರಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗಿದೆ.

ತಾಲೂಕಿನ ಗುಡಿಕಲಕೇರಿಯ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸ್ಥಾಪಿಸಲಾಗಿರುವ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ 63,030 ಹಾಗೂ ಸಾಮಾಜಿಕ ಅರಣ್ಯ ವಲಯದ ಸಸ್ಯಪಾಲನಾ ಕ್ಷೇತ್ರದಲ್ಲಿ 55,000 ಸಸಿಗಳನ್ನು ಬೆಳೆಸಲಾಗಿದೆ. ರೈತರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಜತೆಗೆ ರಸ್ತೆಯ ಬದಿಯಲ್ಲಿ, ಗುಡ್ಡಗಳಲ್ಲಿ ಗಿಡ ಬೆಳೆಸುವ ಗುರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಕಿಕೊಂಡಿದ್ದಾರೆ.

ಯಾವ್ಯಾವ ಸಸಿಗಳು?:

ಪೇರಲ, ಬಿದಿರು, ನೇರಳೆ, ನಿಂಬೆ, ಮಾವು, ರಕ್ತಚಂದನ, ಮಹಾಗನಿ, ಕರಿಬೇವು, ಅರಳಿ, ಬಸರಿ, ಹೊಂಗೆ, ಬೇವು, ತಪಾಸಿ, ಸೀತಾಫಲ, ಬಸವನಪಾದ, ಅಶೋಕ, ಹುಣಸೆ, ಶ್ರೀಗಂಧ, ಬದಾಮಿ, ಬಿಲ್ವಪತ್ರೆ ಮತ್ತಿತರ ಸಸಿಗಳನ್ನು ಬೆಳೆಸಲಾಗಿದೆ.

ಈ ವರ್ಷ ಉಚಿತವಿಲ್ಲ:

ಈ ವರ್ಷ ನರೇಗಾ ಯೋಜನೆಯಲ್ಲಿ ಇರುವ ಆಗ್ರೋ ಫಾರೆಸ್ಟರಿ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಕೃಷಿ ಅರಣ್ಯ ನೆಡುತೋಪಿನ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಲು ಅನುಮತಿ ನೀಡದ ಕಾರಣ ಈ ವರ್ಷ ಸರ್ಕಾರಿ ಕಚೇರಿಗಳಿಗೆ ಹೊರತುಪಡಿಸಿ ಉಳಿದ ಎಲ್ಲರೂ ಸರ್ಕಾರ ನಿರ್ಧಾರ ಮಾಡಿದ ರಿಯಾಯಿತಿ ದರದಲ್ಲಿ ಸಸಿ ಖರೀದಿ ಮಾಡಬೇಕಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷ ನಮ್ಮ ಸಾಮಾಜಿಕ ವಲಯದಲ್ಲಿ ಸುಮಾರು 55 ಸಾವಿರ ಸಸಿ ಬೆಳೆಸಲಾಗಿದ್ದು, ಈ ಸಸಿಗಳನ್ನು ಸರ್ಕಾರಿ ಕಾರ್ಯಾಲಯ ಹೊರತುಪಡಿಸಿ ಉಚಿತವಾಗಿ ಕೊಡುವುದಿಲ್ಲ. ಸಸಿ ಬೇಕಾದವರು ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದು. ಸಸಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರಸ್ತೆಯ ಬದಿಗಳಲ್ಲಿ ನೆಡಲಾಗುತ್ತದೆ. ನಾಗರಿಕರು ಪರಿಸರ ಕಾಪಾಡುವ ಕೆಲಸ ಮಾಡಬೇಕು ಎಂದು ಕುಷ್ಟಗಿ ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ಸತೀಶ್ ಲುಕ್ಕ ತಿಳಿಸಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...