ನವಲಗುಂದ: ಇಲ್ಲಿನ ರಾಮಲಿಂಗ ಓಣಿಯಲ್ಲಿ ಪ್ರತಿಷ್ಠಾಪನೆಗೊಂಡ ರಾಮಲಿಂಗ ಕಾಮಣ್ಣನ ದರ್ಶನಕ್ಕಾಗಿ ಬುಧವಾರ ಲಕ್ಷಾಂತರ ಭಕ್ತರು ಆಗಮಿಸಿದ್ದರು.
ಶ್ರದ್ಧಾ, ಭಕ್ತಿಯ ಮೂಲಕ ಆಚರಣೆಗೆ ಪ್ರಸಿದ್ಧಿಯಾದ ಇಲ್ಲಿನ ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ರಾಮಲಿಂಗ ಕಾಮದೇವರ ದರ್ಶನ ಮಾ.11ರಿಂದ ಆರಂಭಗೊಂಡಿದ್ದು ಒಂದೇ ದಿನದಲ್ಲಿ ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದರು. ಭಕ್ತರ ಇಷ್ಟಾರ್ಥ ಈಡೇರಿಸುವ ಕಲ್ಪವೃಕ್ಷ ಎನಿಸಿರುವ ರಾಮಲಿಂಗ ಕಾಮಣ್ಣನ ದರ್ಶನಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಕಂಕಣ ಭಾಗ್ಯಕ್ಕಾಗಿ ಬೆಳ್ಳಿ ಬಾಸಿಂಗ, ಮಕ್ಕಳ ಭಾಗ್ಯಕ್ಕಾಗಿ ಬೆಳ್ಳಿ ತೊಟ್ಟಿಲು, ಆರೋಗ್ಯ ಭಾಗ್ಯಕ್ಕಾಗಿ ಬೆಳ್ಳಿ ಕುದುರೆ, ವಿದ್ಯಾಭ್ಯಾಸ ಹಾಗೂ ಅಭಿವೃದ್ಧಿಗಾಗಿ ಬೆಳ್ಳಿ ಪಾದುಕೆ ಅಥವಾ ಬೆಳ್ಳಿ ಹಸ್ತ ಪಡೆಯುವುದು ವಾಡಿಕೆ. ತಮ್ಮ ಮನೋಭಿಲಾಷೆ ಈಡೇರಿಕೆಗಾಗಿ ಇಲ್ಲಿಂದ ಹರಕೆ ರೂಪದಲ್ಲಿ ಪಡೆದ ಬೆಳ್ಳಿ ಪರಿಕರಗಳಿಗೆ ಪ್ರತಿಯಾಗಿ ಹರಕೆ ಈಡೇರಿದ ಬಳಿಕ ಮತ್ತೊಂದನ್ನು ಹರಕೆ ರೂಪದಲ್ಲಿ ಸಲ್ಲಿಸುತ್ತಾರೆ. ಹಲವು ಭಕ್ತರು ತಲಾಭಾರ ಹರಕೆಯನ್ನು ಪೂರೈಸುತ್ತಾರೆ.ಸೂಕ್ತ ವ್ಯವಸ್ಥೆ
ವರ್ಷದಿಂದ ವರ್ಷಕ್ಕೆ ಭಕ್ತರ ದಂಡು ಹೆಚ್ಚುತ್ತಿರುವುದರಿಂದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಟ್ರಸ್ಟ್‌ನವರು ಭಕ್ತರ ಅನುಕೂಲಕ್ಕಾಗಿ ಒಂದು ವಾರ ಮೊದಲೇ ಮೂಲ ಸೌಕರ್ಯಗಳ ಸಿದ್ಧತೆ ಮಾಡಿಕೊಂಡಿದ್ದಾರೆ. ಭಕ್ತ ಸಮೂಹಕ್ಕೆ ತಂಪು ಪಾನೀಯ, 24/7 ಪ್ರಸಾದ ಸೇವೆ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆಯೂ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದೆ. 24 ಗಂಟೆ ಕಾಲ ಭಕ್ತರ ದಂಡು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಮಾ. 15ರ ವರೆಗೆ 5ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುವ ಅಂದಾಜಿದೆ.ಇಷ್ಟಾರ್ಥ ಈಡೇರಿಕೆನವಲಗುಂದ ಪಟ್ಟಣದ ಶ್ರೀ ರಾಮಲಿಂಗ ಕಾಮಣ್ಣ ದೇವರು ಬೇಡಿದ ಭಕ್ತರಿಗೆ ಇಷ್ಟಾರ್ಥ ಈಡೇರಿಸುತ್ತಾ ಪ್ರಸಿದ್ಧಿ ಪಡೆದಿದೆ. ಸಂತಾನಹೀನರಿಗೆ ಸಂತಾನಭಾಗ್ಯ, ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸಿಗುತ್ತದೆ.
- ವಿಕಾಸ ತದ್ದೇವಾಡಿ, ನವಲಗುಂದ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷಲಕ್ಷಾಂತರ ಭಕ್ತರ ಆಗಮನ
ರಾಮಲಿಂಗ ಕಾಮಣ್ಣನಿಗೆ ದರ್ಶನಕ್ಕೆ ರಾಜ್ಯ ಅಲ್ಲದೇ ಅನ್ಯ ರಾಜ್ಯದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ತಮ್ಮ ಹರಕೆ ಹೊತ್ತು ಬೆಳ್ಳಿ ವಸ್ತು ತೆಗೆದುಕೊಂಡು ಹೋಗಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸುತ್ತಾರೆ.- ನವೀನ ಕೋನರಡ್ಡಿ, ಕಾಂಗ್ರೆಸ್ ಮುಖಂಡರುಹರಕೆ ಹೊರುವ ಸಂಪ್ರದಾಯ
ಪ್ರತಿಯೊಂದು ದೇವಸ್ಥಾನದಲ್ಲಿ ಒಬ್ಬ ಪೂಜಾರಿ ಅಥವಾ ಪುರೋಹಿತನಿರುತ್ತಾರೆ. ಆದರೆ, ರಾಮಲಿಂಗ ದೇವಸ್ಥಾನದಲ್ಲಿರುವ ಕಾಮಣ್ಣನಿಗೆ ಯಾವುದೇ ಪೂಜಾರಿ ಇಲ್ಲ. ಹೋಳಿ ಹುಣ್ಣಿಮೆ ಪೂಜಾ ವಿಧಿ - ವಿಧಾನದಲ್ಲೂ ಮಂತ್ರ ಘೋಷಣೆ, ಅರ್ಚನೆಯೂ ಇಲ್ಲ. ಭಕ್ತರೇ ಪೂಜೆ ಸಲ್ಲಿಸಿ ಹರಕೆ ಹೊರುವ ಸಂಪ್ರದಾಯ ಇಲ್ಲಿದೆ.ರಾಘು ಮೇಟಿ, ರಾಮಲಿಂಗ ಕಾಮಣ್ಣನ ಭಕ್ತರು.
ಕಲ್ಪವೃಕ್ಷರಾಮಲಿಂಗ ಕಾಮದೇವರು ಕೇವಲ ಬಣ್ಣ, ಓಕುಳಿ, ಹಲಗೆ ವಾದನಕ್ಕಷ್ಟೇ ಸೀಮಿತವಾಗಿಲ್ಲ. ಭಯ ಭಕ್ತಿಗೆ ಒಲಿವ, ಬೇಡಿದ್ದನ್ನು ದಯಪಾಲಿಸುವ ಮಹಿಮಾನ್ವಿತ ದೈವ. ಭಕ್ತಿಯಿಂದ ಭಜಿಸುವವರಿಗೆ ಈತ ಅಕ್ಷರಶಃ ಕಲ್ಪವೃಕ್ಷನಾಗಿದ್ದಾನೆ.
- ಪ್ರಕಾಶ ಗೊಂದಳೆ, ಗೊಂದಳೆ ಸಮಾಜದ ಮುಖಂಡರು