85ಲಕ್ಷ ರು. ಉಳಿತಾಯ ಬಜೆಟ್‌ ಮಂಡನೆ

KannadaprabhaNewsNetwork | Published : Mar 22, 2025 2:01 AM

ಸಾರಾಂಶ

ಹೊಸದುರ್ಗದ ಪುರಸಭೆಯಲ್ಲಿ ಅಧ್ಯಕ್ಷೆ ರಾಜೇಶ್ವರಿ ಆನಂದ್‌ ಶುಕ್ರವಾರ ಬಜೆಟ್‌ ಮಂಡನೆ ಮಾಡಿದರು.

ಪುರಸಭೆ ಆದಾಯದಲ್ಲಿ ಸದಸ್ಯರ ಗೌರವಧನ, ಸಭಾವೆಚ್ಚ, ಅಧ್ಯಯನದ ಪ್ರವಾಸಗಳಿಗಾಗಿ 46.50 ಲಕ್ಷ ನಿಗಧಿ: ರಾಜೇಶ್ವರಿಕನ್ನಡಪ್ರಭ ವಾರ್ತೆ ಹೊಸದುರ್ಗ

ಪಟ್ಟಣದ ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಆನಂದ್‌ ಅವರು 85 ಲಕ್ಷ ರು. ಉಳಿತಾಯ ಬಜೆಟ್‌ಅನ್ನು ಶುಕ್ರವಾರ ಪುರಸಭೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಂಡಿಸಿದರು.

ಹೊಸದುರ್ಗ ಪಟ್ಟಣದ ಆಭಿವೃದ್ಧಿ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ಸರಬರಾಜು, ಬೀದಿ ದೀಪಗಳ ನಿರ್ವಹಣೆ, ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿ 2025-26ನೇ ಸಾಲಿನ ನೀರೀಕ್ಷಿತ ಅನುದಾನ 30,05,84000 ರು. ಆಯವ್ಯಯ ಪಟ್ಟಿಯನ್ನು ತಯಾರಿಸಿ ಓದುವ ಮೂಲಕ ಅನುಮೋದನೆ ನೀಡುವಂತೆ ಸದಸ್ಯರನ್ನು ಕೋರಿದರು.

2025-26ನೇ ಆಯವ್ಯಯದಲ್ಲಿ ಪುರಸಭೆಯ ಸ್ವಂತ ಆದಾಯದಲ್ಲಿ ಸದಸ್ಯರ ಗೌರವಧನ, ಸಭಾವೆಚ್ಚ, ಅಧ್ಯಯನದ ಪ್ರವಾಸಗಳಿಗಾಗಿ 46.50 ಲಕ್ಷ ರು. ನಿಗಧಿಪಡಿಸಲಾಗಿದೆ.

ಸಿಬ್ಬಂದಿ ಶಾಖೆಯ ವೆಚ್ಚಗಳಿಗೆ 61 ಲಕ್ಷ ರು, ತಾಂತ್ರಿಕ ಶಾಖೆಯ ವೆಚ್ಚಗಳಿಗೆ 50 ಲಕ್ಷ, ಬೀದಿ ದೀಪಗಳ ನಿರ್ವಹಣೆಗೆ 30 ಲಕ್ಷ ರು. ಹಾಗೂ ಹೊಸದಾಗಿ ವಿದ್ಯುತ್‌ ಕಂಬಗಳ ಅಳವಡಿಕೆಗಾಗಿ 8 ಲಕ್ಷ ರು, ಕುಡಿಯುವ ನೀರಿನ ಸರಬರಾಜಿಗೆ 71 ಲಕ್ಷ ರು, ಆರೋಗ್ಯ ಶಾಖೆಯ ಮೇಲಿನ ವ್ಯಚ್ಚಗಳಿಗೆ 2.10 ಕೋಟಿ ರು, ಬಡತನ ನಿರ್ಮೂಲನಾ ಶಾಖೆಯ ವ್ಯಚ್ಚಗಳಿಗಾಗಿ 6.44 ಕೋಟಿ ರು. ಅನುದಾನವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದಿಂದ ಬರುವ ಎಸ್‌ಎಪ್‌ಸಿ ಅನುದಾನದಲ್ಲಿ ಸಿಬ್ಬಂದಿ ವೇತನಕ್ಕೆ 3.33 ಕೋಟ ರು, ಬೀದಿ ದೀಪ ವಿದ್ಯುತ್‌ ಶುಲ್ಕಕ್ಕಾಗಿ 1.12 ಕೋಟಿ, ಕುಡಿಯುವ ನೀರಿನ ವಿದ್ಯುತ್‌ ಶುಲ್ಕಕ್ಕಾಗಿ 89 ಲಕ್ಷ ರು. ಹಂಚಿಕೆಯಾಗಿದೆ. ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನದಲ್ಲಿ ಬಡತನದ ಕಲ್ಯಾಣನಿಧಿ, ವಿಕಲಚೇತನರ ಕಲ್ಯಾಣ ನಿಧಿ ಸೇರಿದಂತೆ ಕ್ರೀಡೆಗೆ ಒಟ್ಟು 8 ಲಕ್ಷ ಮೀಸಲಿಡಲಾಗಿದೆ. ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ 10 ಕೋಟಿ ನೀರೀಕ್ಷಿಸಲಾಗಿದ್ದು ಕಾಂಕ್ರೀಟ್‌ ರಸ್ತೆ, ಚರಂಡಿ ಸೇರಿದಂತೆ ಮುಲಭೂತ ಸೌಕರ್ಯಗಳಿಗೆ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ತಿಳಿಸಿದರು.

ನಗರೋತ್ಥಾನ ಯೋಜನೆಯಲ್ಲಿಯೂ 10 ಕೋಟಿ ಅನುದಾನವನ್ನು ನೀರೀಕ್ಷಲಾಗಿದೆ. ಪುರಸಭೆಯ ಐಡಿಎಸ್ ಎಂಟಿ ಯೋಜನೆ ಮತ್ತು ಎಸ್‌ಎಫ್‌ಸಿ ಮುಕ್ತ ನಿಧಿಯಿಂದ ಹೊಸದಾಗಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ 1 ಕೋಟಿ ಅನುದಾನ ನಿಗದಿ ಪಡಿಸಲಾಗಿದೆ.

ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆಯಲ್ಲಿ ಪಟ್ಟಣಕ್ಕೆ 1.66 ಕೋಟಿ ಹಂಚಿಕೆಯಾಗಿದ್ದು ಇದರಲ್ಲಿ ಸರ್ಕಾರದ ಮಾರ್ಗ ಸೂಚಿಯಂತೆ ಶೇ.60 ರಷ್ಟು ಅನುದಾನವನ್ನು ರಸ್ತೆ ಚರಂಡಿ ಉದ್ಯಾನವನ ನಿರ್ಮಾಣ, ಶೇ.40 ರಷ್ಟು ಅನುದಾನವನ್ನು ಘನತ್ಯಾಜ್ಯ ವಿಲೇವಾರಿ ನಿರ್ವಹಣೆಗೆ ವಿನಿಯೋಗಿಸಲಾಗುವುದು ಎಂದು ತಿಳಿಸಿದರು.

ಬಜೆಟ್‌ ಸಭೆಯಲ್ಲಿ ಉಪಾಧ್ಯಕ್ಷೆ ಗೀತಾ ಆಸಂದಿ, ಮುಖ್ಯಾಧಿಕಾರಿ ತಿಮ್ಮರಾಜು, ಪುರಸಭಾ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.

Share this article