ಕನ್ನಡಪ್ರಭ ವಾರ್ತೆ ಗದಗ
ಸೋಮವಾರ ಬೆಳಗ್ಗೆ ಉತ್ಖನನ ಕಾರ್ಯ ಆರಂಭವಾದ ಕೆಲವೇ ಸಮಯದಲ್ಲಿ ಆಯುಧ ಮಾದರಿಯ ವಿಶಿಷ್ಟ ಕಲ್ಲೊಂದು ಪತ್ತೆಯಾಗಿದೆ. ಅಂಡಾಕಾರದಲ್ಲಿದ್ದು, ಒಂದು ಭಾಗ ಮೊನಚಾಗಿರುವ ಈ ಕಲ್ಲು ಶಿಲಾಯುಗದಲ್ಲಿ ಮಾನವರು ಬಳಸುತ್ತಿದ್ದ ಆಯುಧದಂತಿದೆ. ಇದರೊಂದಿಗೆ ಭಾನುವಾರ ಸಂಜೆ ಉತ್ಖನನ ಮುಗಿಸುವ ವೇಳೆ ಒಂದೂವರೆ ಅಡಿ ಆಳದಲ್ಲಿ ಪುರಾತನ ಕಾಲದ ಲೋಹದ ಗಂಟೆಯೂ ಲಭ್ಯವಾಗಿದೆ.
ಕೂಲಿ ಹೆಚ್ಚಳಕ್ಕೆ ಆಗ್ರಹ:ಈ ಮಧ್ಯೆ, ಉತ್ಖನನಕ್ಕೆ ಬರುವ ಕಾರ್ಮಿಕರು ಕೂಲಿ ಹೆಚ್ಚಳಕ್ಕೆ ಆಗ್ರಹಿಸಿ ಬೇಡಿಕೆ ಮಂಡಿಸಿದರು. ಸದ್ಯ ನೀಡಲಾಗುತ್ತಿರುವ ₹374 ಕೂಲಿ ಸಾಲದು, ಇದನ್ನು ₹600ಕ್ಕೆ ಹೆಚ್ಚಿಸಬೇಕು ಎಂದು ಕಾರ್ಮಿಕರು ಆಗ್ರಹಿಸಿದರು. ದಿನಕ್ಕೆ 8 ಗಂಟೆ ಕಠಿಣ ಕೆಲಸ ಮಾಡುತ್ತಿದ್ದು, ಈಗಿನ ದರ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂದು ಕಾರ್ಮಿಕರು ಮೇಲ್ವಿಚಾರಕರ ಬಳಿ ಅಳಲು ತೋಡಿಕೊಂಡರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ, ಉತ್ಖನನ ಕಾರ್ಯ ಮುಂದುವರಿಯಿತು. ಇದರಿಂದಾಗಿ ಬೆಳಗ್ಗೆ ಕೆಲಸ ಪ್ರಾರಂಭಿಸುವುದು ತಡವಾಯಿತು.
ಕಿತ್ತೂರು ಚೆನ್ನಮ್ಮನ ಮಗ ನಾನು ಎಂದ ಕಾವಿಧಾರಿ: ಹೈಡ್ರಾಮಾ! ಇದೇ ವೇಳೆ, ಉತ್ಖನನ ಸ್ಥಳದಲ್ಲಿ ಹೈಡ್ರಾಮಾ ಸೃಷ್ಟಿಸಿದ್ದ ಕಾವಿಧಾರಿ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಓಡಿಸಿದ ಘಟನೆಯೂ ನಡೆದಿದೆ. ತಾನು ಕಿತ್ತೂರು ಚೆನ್ನಮ್ಮನ ಮಗನೆಂದು ಹೇಳಿಕೊಂಡ ಆ ವ್ಯಕ್ತಿ, ಇಲ್ಲಿ 100 ಕೆಜಿ ಚಿನ್ನದ ಮೂರ್ತಿಯಿದೆ, ಅದನ್ನು ಹೊರತೆಗೆದರೆ ಜಗತ್ತಿಗೆ ಮಳೆಯಾಗುವುದಿಲ್ಲ ಎಂದು ಹೇಳುತ್ತಾ ಒಂದೇ ಕಾಲಿನಲ್ಲಿ ನಿಂತು ವಿಚಿತ್ರ ವರ್ತನೆ ತೋರಿದ್ದಾನೆ. ಆತನ ಚಿತ್ರ, ವಿಚಿತ್ರವಾದ ಮಾತುಗಳಿಂದ ರೊಚ್ಚಿಗೆದ್ದ ಸ್ಥಳೀಯರು ಸರಿಯಾದ ಎಚ್ಚರಿಕೆ ನೀಡುತ್ತಿದ್ದಂತೆ ಆ ವ್ಯಕ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇದರಿಂದಲೂ ಕೆಲಕಾಲ ಗೊಂದಲ ಸೃಷ್ಟಿಯಾಗಿತ್ತು.ಕೋಟ್...ಉತ್ಖನನ ಕಾರ್ಯದಲ್ಲಿ ಯಾವುದೇ ಗೊಂದಲಗಳಿಲ್ಲ. ಉತ್ಖನನ ಕಾರ್ಯ ಸಹಜವಾಗಿಯೇ ನಡೆಯುತ್ತಿದೆ. ಸಿಕ್ಕಿರುವ ಎಲ್ಲ ವಸ್ತುಗಳನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳು ಸಂರಕ್ಷಿಸಿ, ಪರಿಶೀಲಿಸುತ್ತಿದ್ದಾರೆ.
- ಸಿದ್ದಲಿಂಗೇಶ್ವರ ಪಾಟೀಲ. ಜಿಪಂ ಮಾಜಿ ಅಧ್ಯಕ್ಷ, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ.