ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ವಿಜೃಂಭಣೆಯ ಲಕ್ಷ ದೀಪೋತ್ಸವ,

KannadaprabhaNewsNetwork | Published : Nov 17, 2024 1:20 AM

ಸಾರಾಂಶ

ಶೃಂಗೇರಿ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶುಕ್ರವಾರ ಲಕ್ಷದೀಪೋತ್ಸವ ಕಾರ್ಯಕ್ರಮ ವಿೃಂಭಣೆಯಿಂದ ನಡೆಯಿತು. ಜಗದ್ಗುರು ಶ್ರೀ ಭಾರತೀ ತೀರ್ಥರು ದೀಪ ಬೆಳಗಿಸುವ ಮೂಲಕ ಕಾರ್ತಿಕ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿದರು.

ತುಂಗೆಯಲ್ಲಿ ತೆಪ್ಪೋತ್ಸವ, ತುಂಗಾರತಿ, ಧಾರ್ಮಿಕ, ಸಾಂಸ್ಕೃತಿಕ ವೈಭವ

ಕನ್ನಡಪ್ರಭ ವಾರ್ತೆ, ಶೃಂಗೇರಿ

ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶುಕ್ರವಾರ ಲಕ್ಷದೀಪೋತ್ಸವ ಕಾರ್ಯಕ್ರಮ ವಿೃಂಭಣೆಯಿಂದ ನಡೆಯಿತು. ಜಗದ್ಗುರು ಶ್ರೀ ಭಾರತೀ ತೀರ್ಥರು ದೀಪ ಬೆಳಗಿಸುವ ಮೂಲಕ ಕಾರ್ತಿಕ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿದರು.

ದೀಪೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಸಾಂಪ್ರದಾಯಿಕವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ರುದ್ರಯಾಗ ನಡೆಯಿತು. ಪಟ್ಟಣದ ಬೆಟ್ಟದ ಶ್ರೀ ಮಲಹಾನಿಕರೇಶ್ವರ ಸನ್ನಿಧಿಯಲ್ಲಿ ಶ್ರೀ ಭವಾನಿ ಅಮ್ಮನವರಿಗೆ, ಶ್ರೀ ಮಲಹಾನಿಕರೇಶ್ವರ ಸ್ವಾಮಿ ಸನ್ನಿದಿಯಲ್ಲಿ ವಿಶೇಷ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು.

ದೀಪೋತ್ಸವದ ಅಂಗವಾಗಿ ಪ್ರತಿ ದಿನ ರಾತ್ರಿ ತುಂಗಾನದಿಯಲ್ಲಿ ಶ್ರೀ ಭವಾನಿ ಮಲಹಾನಿಕರೇಶ್ವರ, ಶ್ರೀ ಶಾರದಾಂಬೆ, ಶ್ರೀ ಶಂಕರಾಚಾರ್ಯ,ಶ್ರೀ ವಿದ್ಯಾಶಂಕಶಂಕರ ಸ್ವಾಮಿ,ಶ್ರೀ ಜನಾರ್ದನ ಸ್ವಾಮಿಗೆ ಐದು ದಿನಗಳ ಕಾಲ ತುಂಗಾರತಿ ಹಾಗೂ ತೆಪ್ಪೋತ್ಸವ ಕಾರ್ಯಕ್ರಮ ನಡೆಯಿತು.

ದೀಪೋತ್ಸವದ ಪ್ರಯುಕ್ತ ಶ್ರೀಮಠದ ಸುತ್ತಮುತ್ತ, ಬೆಟ್ಟದ ಶ್ರೀ ಮಲಹಾನಿಕರೇಶ್ವರ ದೇಗುಲದ ಸುತ್ತಮುತ್ತ ವಿದ್ಯುತ್‌ ದೀಪಗಳಿಂದ ಅಲಂಕಾರ, ರಂಗೋಲಿ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ರಸ್ತೆ ಇಕ್ಕೆಲಗಳಲ್ಲಿ ಸಾಲು ಸಾಲು ಹಣತೆಗಳು, ತಳಿರು ತೋರಣಗಳು, ವಿದ್ಯುತ್ ದೀಪಗಳ ಅಲಂಕಾರ ವಿಶೇಷ ಮೆರಗು ನೀಡಿತು. ಬೆಟ್ಟದ ಶ್ರೀ ಮಲಹಾನಿಕರೇಶ್ವರ ದೇವಾಲಯದ ಸನ್ನಿದಿಯಿಂದ ಶ್ರೀಮಠದವರೆಗೂ ಸಹಸ್ರ ಸಹಸ್ರ ಹಣತೆಗಳನ್ನು ಬೆಳಗಿಸಲಾಗಿತ್ತು.

ಬೆಟ್ಟದ ಶ್ರೀ ಮಲಹಾನಿಕರೇಶ್ವರ ಸ್ವಾಮಿ ಸನ್ನಿದಿಯಲ್ಲಿ ಶ್ರೀ ಮಲಹಾನಿಕರೇಶ್ವರ ಸ್ವಾಮಿಗೆ ಬಿಲ್ವಾರ್ಚನೆ ಹಾಗೂ ಪರಕಾಳಿ ದಹನ ಧಾರ್ಮಿಕ ಕಾರ್ಯಕ್ರಮ ನೆರವೇರಿತು.ಶ್ರೀಮಠದ ಸಮೀಪದ ತುಂಗಾ ನದಿ ದಡದಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸ ಲಾಗಿತ್ತು. ರಾತ್ರಿ ವಿಶೇಷವಾಗಿ ತುಂಗಾ ನದಿಯಲ್ಲಿ ತೆಪ್ಪೋತ್ಸವ, ತುಂಗಾರತಿ ನಡೆಯಿತು.

ಶ್ರೀಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ನಾಟ್ಯವೈಭವ ವಿಧುಷಿ ದೀಪ್ತಿ ಹೆಗ್ಡೆ ಮತ್ತು ತಂಡದವರಿಂದ ನಾಟ್ಯ ವೈಭವ, ಹೊನ್ನವನಳ್ಳಿ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾತಂಡ ದವರಿಂದ ಪೌರಾಣಿಕ ಯಕ್ಷಗಾನ ಪ್ರಸಂಗ ನಡೆಯಿತು. ಗುರುವಾರ ರಾತ್ರಿ ಬಾರಿ ಮಳೆ ಸುರಿದಿದ್ದರೂ ಶುಕ್ರವಾರ ಮಳೆರಾಯ ದೀಪೋತ್ಸವ, ಧಾರ್ಮಿಕ ಕಾರ್ಯಕ್ರಮಗಳಿಂದ ಬಲುದೂರ ಉಳಿದಿದ್ದದಿಂದ ಉತ್ಸವಾದಿಗಳಲ್ಲಿ ಹೆಚ್ಚಿನ ಜನ ಪಾಲ್ಗೊಂಡು ಸಂಭ್ರಮಿಸಿದರು.

16 ಶ್ರೀ ಚಿತ್ರ 1-

ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಲಕ್ಷದೀಪೋತ್ಸವ ವಿಜೃಂಭಣೆಯಿಂದ ನಡೆಯಿತು.

16 ಶ್ರೀ ಚಿತ್ರ 2-

ಶೃಂಗೇರಿ ತುಂಗಾನದಿಯಲ್ಲಿ ತೆಪೋತ್ಸವ, ತುಂಗಾರತಿ ನಡೆಯಿತು.

Share this article