ಕನ್ನಡಪ್ರಭ ವಾರ್ತೆ ಕೊರಟಗೆರೆ
ಶಿವನು ಲಿಂಗ ಸ್ವರೂಪವಾಗಿ ಧರೆಗೆ ಉದ್ಭವವಾದ ದಿನವನ್ನು ಮಹಾಶಿವರಾತ್ರಿ ಹಬ್ಬವನ್ನಾಗಿ ಆಚರಿಸಲಾಗುತ್ತಿದ್ದು, ಶಿವರಾತ್ರಿ ದಿನದಂದು ಉಪವಾಸ ಮತ್ತು ಜಾಗರಣೆಯ ವ್ರತವನ್ನು ಮಾಡಿ ಹಿಂದು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ ಎಂದು ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಪಟ್ಟಣದ ಪ್ರಸಿದ್ಧ ಶ್ರೀ ಗಂಗಾಧರೇಶ್ವರಸ್ವಾಮಿ ಬೆಟ್ಟದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ರಣಬೈರೇಗೌಡ ಯುವಕ ಸಂಘ ಮತ್ತು ಫ್ರೆಂಡ್ಸ್ ಗ್ರೂಪ್ ಸೇವಾ ಸಮಿತಿ ಸಹಯೋಗದಲ್ಲಿ ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೂ ಧರ್ಮದಲ್ಲಿ ಒಂದೊಂದು ಹಬ್ಬವೂ ವಿಶಿಷ್ಟತೆಯನ್ನು ಹೊಂದಿದ್ದು, ಶಿವರಾತ್ರಿ ಹಬ್ಬದಂದು ಪಟ್ಟಣದ ಗಂಗಾಧರೇಶ್ವರಸ್ವಾಮಿ ಬೆಟ್ಟದಲ್ಲಿ ೨೫ ವರ್ಷಗಳಿಂದ ಸತತವಾಗಿ ಲಕ್ಷದೀಪೋತ್ಸವ ನಡೆಯುತ್ತಿದೆ. ಗಂಗಾಧರೇಶ್ವರ ದೇವಾಲಯ ಐತಿಹಾಸಿಕ ಹಾಗೂ ಪುರಾಣ ಹಿನ್ನೆಲೆ ಹೊಂದಿದ್ದು, ಈ ದೇವಾಲಯ ನಿರ್ಮಿಸಿ ಸಾವಿರಾರು ವರ್ಷಗಳಾಗಿದ್ದು, ಪ್ರಸ್ತುತ ಶಿಥಿಲಗೊಳ್ಳುತ್ತಿರುವ ಈ ದೇವಾಲಯವನ್ನು ಮುಂಬರುವ ದಿನಗಳಲ್ಲಿ ಜೀರ್ಣೋದ್ಧಾರ ಮಾಡಲಾಗುವುದು ಎಂದು ತಿಳಿಸಿದರು.ಗಂಗಾಧರೇಶ್ವರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ವಿ.ಪುರುಷೋತ್ತಮ ಮಾತನಾಡಿ, ಗಂಗಾಧರೇಶ್ವರ ದೇವಾಲಯ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದ್ದರೂ ಗಂಗಾಧರೇಶ್ವರನ ಧಾರ್ಮಿಕ ಕಾರ್ಯಕ್ರಮಗಳಿಗೆ ಸರ್ಕಾರ ಮತ್ತು ಇಲಾಖೆಯಿಂದ ಯಾವುದೇ ಆರ್ಥಿಕ ನೆರವು ಸಿಕ್ಕಿಲ್ಲ, ಇದು ಮುಂದಿನ ದಿನಗಳಲ್ಲಿ ಬದಲಾಗಬೇಕು ಎಂದರು.
ರಣಬೈರೇಗೌಡ ಯುವಕ ಸಂಘದ ಅಧ್ಯಕ್ಷ ಕೆ.ವಿ.ಮಂಜುನಾಥ್ ಮಾತನಾಡಿ, ಇತ್ತೀಚೆಗೆ ಯುವಕರಲ್ಲಿ ಧಾರ್ಮಿಕ ಆಚರಣೆಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ, ನಮ್ಮ ಸಂಘವು ೨೫ ವರ್ಷಗಳ ಕಾಲದಿಂದ ಹಲವಾರು ಏಳು ಬೀಳುಗಳ ಮಧ್ಯೆ ದೀಪೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಗಂಗಾಧರೇಶ್ವರ ದೇವಾಲಯದ ಅಭಿವೃದ್ಧಿಗೆ ದುಡಿಯುತ್ತಿದೆ ಎಂದು ತಿಳಿಸಿದರು.ಫ್ರೆಂಡ್ಸ್ ಗ್ರೂಪ್ ಸೇವಾಸಮಿತಿ ಅಧ್ಯಕ್ಷ ರವಿಕುಮಾರ್, ರಣಬೈರೇಗೌಡ ಸಮಿತಿಯ ಖಜಾಂಚಿ ಕೆ.ಬಿ.ಲೋಕೇಶ್, ಮಲ್ಲಣ್ಣ, ಎಚ್.ಎಲ್.ನಾರಾಯಣ್, ಗಂಗಾಧರ, ಪದ್ಮನಾಬ್, ನಟರಾಜ್, ಅನುಪ್ರಸಾದ್, ಅಕ್ಷಯ್, ರಂಗಧಾಮಯ್ಯ ಸೇರಿ ಇತರರು ಹಾಜರಿದ್ದರು.