ತೆರಿಗೆ ವಸೂಲಿಯಲ್ಲಿ ಜಿಲ್ಲೆಗೆ ಲಕ್ಷ್ಮೇಶ್ವರ ತಾಲೂಕು ಫಸ್ಟ್

KannadaprabhaNewsNetwork |  
Published : Mar 18, 2025, 12:31 AM IST
ಪೊಟೋ-ಸಮೀಪದ ಮಾಡಳ್ಳಿ ಗ್ರಾಮದಲ್ಲಿ ಕರವಸೂಲಿ ಕಾರ್ಯದಲ್ಲಿ ಗ್ರಾಪಂ ಪಿಡಿಓ ಜೊತೆಯಲ್ಲಿ ಇಓ ಕೃಷ್ಣಪ್ಪ ಧರ್ಮರ ಪಾಲ್ಗೊಂಡಿರುವುದು.  | Kannada Prabha

ಸಾರಾಂಶ

ಲಕ್ಷ್ಮೇಶ್ವರ ತಾಲೂಕಿನ 14 ಗ್ರಾಪಂಗಳಲ್ಲಿ ತೆರಿಗೆ ವಸೂಲಾತಿಯ ವಿಶೇಷ ಅಭಿಯಾನದ ಫಲವಾಗಿ 10 ಗ್ರಾಪಂಗಳು ಶೇ. 100ರಷ್ಟು ಸಾಧನೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ ಶೇ. 102.01 ಸಾಧನೆ ಮಾಡಿ ಮೊದಲ ಸ್ಥಾನದಲ್ಲಿವೆ ಎಂದು ತಾಪಂ ಇಒ ಕೃಷ್ಣಪ್ಪ ಧರ್ಮರ ಹೇಳಿದರು.

ಲಕ್ಷ್ಮೇಶ್ವರ: ತಾಲೂಕಿನ 14 ಗ್ರಾಪಂಗಳಲ್ಲಿ ತೆರಿಗೆ ವಸೂಲಾತಿಯ ವಿಶೇಷ ಅಭಿಯಾನದ ಫಲವಾಗಿ 10 ಗ್ರಾಪಂಗಳು ಶೇ. 100ರಷ್ಟು ಸಾಧನೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ ಶೇ. 102.01 ಸಾಧನೆ ಮಾಡಿ ಮೊದಲ ಸ್ಥಾನದಲ್ಲಿವೆ ಎಂದು ತಾಪಂ ಇಒ ಕೃಷ್ಣಪ್ಪ ಧರ್ಮರ ಹೇಳಿದರು.

ಈ ಕುರಿತು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ತೀರದ ತಲೆ ನೋವಾಗಿದ್ದ ಗ್ರಾಪಂ ತೆರಿಗೆ ಬಾಕಿ ವಸೂಲಾತಿ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಜಿಲ್ಲೆಯ 7 ತಾಲೂಕುಗಳಲ್ಲಿ ಗ್ರಾಪಂ ತೆರಿಗೆ ವಸೂಲಿಯಲ್ಲಿ ಲಕ್ಷ್ಮೇಶ್ವರ ತಾಲೂಕು ಶೇ. 102.01ರಷ್ಟು ಸಾಧನೆ ಮಾಡಿ ಜಿಲ್ಲೆಗೆ ಮೊದಲ ಸ್ಥಾನದಲ್ಲಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಪ್ರಸಕ್ತ ಸಾಲಿನ ಗುರಿ ₹149.25 ಕೋಟಿ ಇದ್ದು, ₹152.25 ಕೋಟಿ ಸಂಗ್ರಹವಾಗಿದೆ ಎಂದು ಹೇಳಿದರು.

ವಿಶೇಷ ಅಭಿಯಾನದ ಫಲ: ಹಲವಾರು ವರ್ಷಗಳಿಂದ ಗ್ರಾಪಂ ತೆರಿಗೆ ವಸೂಲಾತಿ ತೀವ್ರ ಮಂದಗತಿಯಲ್ಲಿ ಸಾಗಿತ್ತು. ವಿಶೇಷ ಅಭಿಯಾನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಮೂರು ಹಂತಗಳಲ್ಲಿ ನಡೆದ ವಿಶೇಷ ಅಭಿಯಾನದಲ್ಲಿ ಗ್ರಾಪಂ ಅಧಿಕಾರಿ, ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಜನರ ಮನವೊಲಿಸಿ ತೆರಿಗೆ ವಸೂಲಿ ಮಾಡಿದ್ದಾರೆ. ಇದರಿಂದಾಗಿ ಗ್ರಾಪಂಗಳ ಆರ್ಥಿಕ ಬಲ ಹೆಚ್ಚಾಗತೊಡಗಿದೆ. ತಾಲೂಕಿನ 14 ಗ್ರಾಪಂಗಳಲ್ಲಿ ಕರ ವಸೂಲಿ ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಸಾಧಿಸಲು ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕರ ವಸೂಲಿಗಾರರು ಗ್ರಾಪಂಗಳಲ್ಲಿ ಸಭೆ ನಡೆಸಿ, ಶೇ.100ರಷ್ಟು ಕಡ್ಡಾಯ ಕರ ವಸೂಲಿ ಪ್ರಗತಿ ಸಾಧಿಸಲು ಕರ ವಸೂಲಿ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಮನೆ- ಮನೆಗೆ ಭೇಟಿ ಮತ್ತು ಜಾಥಾ ಕಾರ್ಯಕ್ರಮ ಮೂಲಕ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿತ್ತು. ಅದರಂತೆ ಕರ ವಸೂಲಿಗಾರರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಎರಡು ಹಂತಗಳಲ್ಲಿ ಮನೆ ಮನೆಗೆ ತೆರಳಿ ಕರ ವಸೂಲಿ ಮಾಡುತ್ತ ಬಂದಿದ್ದರು. ಇದರ ಬಗ್ಗೆ ಸಾರ್ವಜನಿಕರು ಸಹ ಸ್ಪಂದಿಸುತ್ತಿದ್ದರು. ಇದರಿಂದ ಗುರಿ ಸಾಧನೆಯಾಗಲಿದೆ ಎಂಬ ಆಶಭಾವನೆಯಿತ್ತು. ಅದು ಈಗ ಸಾಕಾರವಾಗಿದೆ ಎನ್ನುತ್ತಾರೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ.

ಗ್ರಾಮಸ್ಥರಿಗೆ ಗ್ರಾಪಂ ಕರ ಪರಿಷ್ಕರಣೆ ಬಗ್ಗೆ ಮತ್ತು ಕರ ವಸೂಲಾತಿ ಬಗ್ಗೆ ಪ್ರಕಟಣೆ ಮೂಲಕ ತಿಳಿಯಪಡಿಸಲಾಗಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ತೆರಿಗೆ ವಿಧಿಸುವುದು, ತೆರಿಗೆ ಪರಿಷ್ಕರಿಸುವುದು ಮತ್ತು ತೆರಿಗೆ ವಸೂಲಿ ಮಾಡುವ ಸರ್ಕಾರದ ನಿಯಮ ಹಾಗೂ ಸುತ್ತೋಲೆಗಳ ಬಗ್ಗೆ ಮನವರಿಕೆ ಮಾಡಿಡಲಾಗಿತ್ತು ಎನ್ನುತ್ತಾರೆ ಯಳವತ್ತಿ ಪಿಡಿಒ ಮತ್ತು ಸಹಾಯಕ ನಿರ್ದೇಶಕಿ (ಪಂ.ರಾ.) ಸವಿತಾ ಹುನಗುಂದ.

ಶೇ. 100ರಷ್ಟು ಸಾಧನೆ ಮಾಡಿದ ಗ್ರಾಪಂಗಳು: ತಾಲೂಕಿನ 14 ಗ್ರಾಪಂಗಳ ಪೈಕಿ ರಾಮಗಿರಿ ಶೇ. 144.21, ಅಡರಕಟ್ಟಿ ಶೇ. 138.92, ಬಟ್ಟೂರ ಶೇ. 123.89, ಪು. ಬಡ್ನಿ ಶೇ. 114.55, ಸೂರಣಗಿ ಶೇ. 112.12, ಯಳವತ್ತಿ ಶೇ. 107.25, ಶಿಗ್ಲಿ ಶೇ. 103.10, ಹುಲ್ಲೂರ ಶೇ. 102.95, ದೊಡ್ಡೂರು ಶೇ. 101.69, ಮಾಡಳ್ಳಿ ಶೇ. 100.94 ಈ 10 ಗ್ರಾಮ ಪಂಚಾಯಿತಿಗಳು ಪ್ರಸ್ತುತ ವರ್ಷದ ಬೇಡಿಕೆಗೂ ಮೀರಿ ಸಾಧನೆ ಮಾಡಿವೆ ಎಂದು ಅವರು ಹೇಳಿದರು.ಗ್ರಾಪಂಗಳು ಆರ್ಥಿಕವಾಗಿ ಸದೃಢವಾಗಲು ಕರ ವಸೂಲಾತಿ ಅತ್ಯವಶ್ಯ. ಈ ನಿಟ್ಟಿನಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿಯ ಎಲ್ಲ ಸಿಬ್ಬಂದಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕಡ್ಡಾಯವಾಗಿ ಕರ ವಸೂಲಿ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ಇದರಿಂದ ಪ್ರಸಕ್ತ ಸಾಲಿನ ಕರ ವಸೂಲಾತಿಯಲ್ಲಿ ಲಕ್ಷ್ಮೇಶ್ವರ ತಾಪಂ ಶೇ. 102.01 ಪ್ರಗತಿ ಸಾಧ್ಯವಾಗಿದೆ. ಬಾಕಿ ಇರುವ ತೆರಿಗೆಯನ್ನು ಸಹ ಪಾವತಿ ಮಾಡಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಲು ಕೋರಿದೆ ಎಂದು ತಾಪಂ ಇಒ ಕೃಷ್ಣಪ್ಪ ಧರ್ಮರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!