ಸಾವಯವ ಕೃಷಿಯತ್ತ ಮುಖ ಮಾಡಿ: ಮಹಿಮಾ ಸಲಹೆ

KannadaprabhaNewsNetwork | Published : Mar 18, 2025 12:31 AM

ಸಾರಾಂಶ

ದಾಬಸ್‍ಪೇಟೆ: ಆಧುನಿಕತೆಯ ಪರಿಣಾಮದಿಂದಾಗಿ ರೈತರು ರಾಸಾಯನಿಕ ವಸ್ತುಗಳ ಬಳಕೆಯಿಂದ ವಿಷಯುಕ್ತ ಆಹಾರ ಬೆಳೆಯುವ ಸ್ಥಿತಿ ಎದುರಾಗಿದೆ. ಪರಿಸರದೊಂದಿಗೆ ಸಾವಯವ ಕೃಷಿಯತ್ತ ರೈತರು ಮುಖ ಮಾಡಬೇಕು ಎಂದು ಮಾಜಿ ಶಾಸಕ ಹಾಗೂ ಸರ್ವೋದಯ ಸಮುದಾಯ ಮುಖ್ಯಸ್ಥ ಮಹಿಮಾ ಜೆ ಪಟೇಲ್ ತಿಳಿಸಿದರು.

ದಾಬಸ್‍ಪೇಟೆ: ಆಧುನಿಕತೆಯ ಪರಿಣಾಮದಿಂದಾಗಿ ರೈತರು ರಾಸಾಯನಿಕ ವಸ್ತುಗಳ ಬಳಕೆಯಿಂದ ವಿಷಯುಕ್ತ ಆಹಾರ ಬೆಳೆಯುವ ಸ್ಥಿತಿ ಎದುರಾಗಿದೆ. ಪರಿಸರದೊಂದಿಗೆ ಸಾವಯವ ಕೃಷಿಯತ್ತ ರೈತರು ಮುಖ ಮಾಡಬೇಕು ಎಂದು ಮಾಜಿ ಶಾಸಕ ಹಾಗೂ ಸರ್ವೋದಯ ಸಮುದಾಯ ಮುಖ್ಯಸ್ಥ ಮಹಿಮಾ ಜೆ ಪಟೇಲ್ ತಿಳಿಸಿದರು.

ತ್ಯಾಮಗೊಂಡ್ಲು ಹೋಬಳಿಯ ಕೋಡಿಗೇಹಳ್ಳಿ ಗ್ರಾಮದ ಶ್ರೀ ಸದ್ಗುರು ಲಕ್ಷಣ ಸ್ವಾಮೀಜಿ ಮಹಾರಾಜರ ಆಶ್ರಮದಲ್ಲಿ ಸರ್ವೋದಯ ಸಮುದಾಯ ಕರ್ನಾಟಕ ಹಾಗೂ ಕೊಡಿಗೇಹಳ್ಳಿ, ಬಳ್ಳಗೆರೆ ಹಾಗೂ ಕೆಂಚನಪುರ ರೈತ ಹಿತರಕ್ಷಣಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೃಷಿ-ಪರಿಸರ ಹೊಸ ದಿಕ್ಕಿನೆಡೆಗೆ ಚಿಂತನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿನ ಪರಿಸರ, ಕೃಷಿ ಆರೋಗ್ಯ, ಶಿಕ್ಷಣ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಗಳಾಬೇಕು. ಪರಿಸರ ನಾಶದಿಂದ, ಕೃಷಿ ಭೂಮಿಯಲ್ಲಿ ಕೈಗಾರಿಕೆಗಳ ಸ್ಥಾಪನೆಯಿಂದ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಕೃಷಿಯನ್ನು ಸಹ ಕೈಗಾರಿಕೆಗಳ ರೀತಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಗಳು ಜಾರಿಗೆ ಬರಬೇಕು ಎಂದರು.

ಸಾವಯುವ ಕೃಷಿಗೆ ಉತ್ತೇಜನ ನೀಡಿ:ಕೃಷಿಯಲ್ಲಿ ಸಾವಯುವ ಪದ್ಧತಿಯನ್ನು ಅನುಸರಿಸಿದರೇ ಆಹಾರ ತಿನ್ನಲು ಯೋಗ್ಯವಾಗುತ್ತದೆ. ರಾಸಾಯನಿಕಗಳನ್ನು ಬಳಸಿ ವಿಷವನ್ನು ಜನರಿಗೆ ನೀಡುವ ಸ್ಥಿತಿ ಹೆಚ್ಚಾಗುತ್ತಿದೆ. ಆದ್ದರಿಂದ ರೈತರು ಸಾವಯುವ ಹಾಗೂ ಸಹಜ ಕೃಷಿಯತ್ತ ಹೆಚ್ಚು ಒಲವು ತೋರಬೇಕು ಮತ್ತು ತಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಾವಯುವ ಕೃಷಿ ಸಾಧಕ ಬಸವರಾಜು ಬಿ.ಸಂತೇಶಿವರ ಮಾತನಾಡಿ, ರೈತರು ಕೃಷಿ ಭೂಮಿಯನ್ನು ಪದೇಪದೇ ಉಳುಮೆ ಮಾಡುವುದು ಕಡಿಮೆ ಮಾಡಬೇಕು. ಒಂದೇ ಭೂ ಪ್ರದೇಶದಲ್ಲಿ ಸಮಗ್ರ ಕೃಷಿಗೆ ಆದ್ಯತೆ ನೀಡಬೇಕು. ಇದರಿಂದ ಒಂದು ಬೆಳೆಗೆ ಬರುವ ರೋಗ ಮತ್ತೊಂದು ಬೆಳೆಯಿಂದ ತಡೆಯಲು ಸಾಧ್ಯ. ತಮ್ಮ ಕೃಷಿ ಭೂಮಿಯಲ್ಲಿ ಎರೆಹುಳು ಇದ್ದರೆ ಅದು ಸಾವಯುವ ಭೂಮಿಯಾಗಿರುತ್ತದೆ. ಗ್ರಾಮೀಣ ಭಾಗದಲ್ಲಿ ರೈತರು ಒಂದೆಡೆ ಸೇರಿ ಸಾವಯವ ಕೃಷಿಬಗ್ಗೆ ಚರ್ಚೆ ಹಾಗೂ ಬಿತ್ತನೆ ಬೀಜಗಳ ವಿನಮಯ ಮಾಡಿಕೊಳ್ಳಬೇಕು ಎಂದರು.

ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರಾದ ಆಂಜನೇಯರೆಡ್ಡಿ, ಪರಿಸರ ಹಾಗೂ ನೀರಾವರಿ ವಿಷಯವಾಗಿ ಮಾತನಾಡಿದರು. ಶ್ರೀ ಲಕ್ಷ್ಮಣ ಸ್ವಾಮೀಜಿ ಮಹಾರಾಜರ ಆಶ್ರಮದ ಶ್ರೀ ಮೋಹನ್‍ರಾಮ್ ಸ್ವಾಮೀಜಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ .ಎಸ್.ಜಿ.ಸಿದ್ದರಾಮಯ್ಯು, ಡಾ.ಎಚ್.ಎಂ.ಸೋಮಶೇಖರಪ್ಪ, ಎನ್.ವಿ.ಪ್ರಕಾಶ್ ಅರಸು, ವಿಶ್ರಾಂತ ಪ್ರಾಂಶುಪಾಲರಾದ ಎಂ.ಪಿ.ನೆಗಳೂರು, ಸಿ.ಆರ್.ಸ್ವಾಮಿ, ಕೃಷಿಕ ಸಮಾಜದ ಅಧ್ಯಕ್ಷ ಚಿನ್ನೇಗೌಡ, ಉಪಾಧ್ಯಕ್ಷ ಗಿರೀಶ್, ಶಾಂತಲ ರೈತ ಉತ್ಪಾದಕ ಕೇಂದ್ರ ಅಧ್ಯಕ್ಷ ಕೊಡಿಗೇಹಳ್ಳಿ ಮಂಜುನಾಥ್, ಡಾ.ಬೈರೇಗೌಡ, ರಾಜಣ್ಯ ಪ್ರಕಾಶ್.ರಾಮಕೃಷ್ಣನ್ನ ವಾಸುದೇವಮೂರ್ತಿ ಭಾಗವಹಿಸಿದ್ದರು.

ಪೋಟೋ 2 :

ಕೋಡಿಗೇಹಳ್ಳಿಯ ಶ್ರೀ ಸದ್ಗುರು ಲಕ್ಷಣ ಸ್ವಾಮೀಜಿ ಮಹಾರಾಜರ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಕೃಷಿ-ಪರಿಸರ ಹೊಸ ದಿಕ್ಕಿನೆಡೆಗೆ ಚಿಂತನೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಾಗೂ ಸರ್ವೋದಯ ಸಮುದಾಯ ಮುಖ್ಯಸ್ಥ ಮಹಿಮಾ ಜೆ ಪಟೇಲ್ ಮಾತನಾಡಿದರು.

Share this article