ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿನಲ್ಲಿ ದಿನಪತ್ರಿಕೆಗಳ ಮಹತ್ವ ಕುರಿತು ವಿಶೇಷ ಉಪನ್ಯಾಸ
ಕನ್ನಡಪ್ರಭ ವಾರ್ತೆ ಬಳ್ಳಾರಿದಿನಪತ್ರಿಕೆಗಳು ಜಗತ್ತಿನ ನಿತ್ಯದ ಆಗುಹೋಗು ಮತ್ತು ಪ್ರಮುಖ ವಿಚಾರಗಳನ್ನು ತಿಳಿಸುವ ಜ್ಞಾನದ ಕಣಜಗಳಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿಗೆ ದಾರಿ ದೀಪವಾಗಿವೆ ಎಂದು ಕುರುಗೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ತಿಪ್ಪೇರುದ್ರ ಸಂಡೂರು ಅಭಿಪ್ರಾಯಪಟ್ಟರು.
ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ ) ಕಾಲೇಜಿನ ಸಭಾಂಗಣದಲ್ಲಿ ಪ್ರೇರಣಾಕೋಶ, ಉದ್ಯೋಗ ಭರವಸೆ ಕೋಶ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶಗಳ ವತಿಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿನಲ್ಲಿ ದಿನಪತ್ರಿಕೆಗಳ ಮಹತ್ವ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳುವ ಹಲವು ಬಗೆಯ ವಿಷಯ, ಪ್ರಚಲಿತ ವಿದ್ಯಮಾನ ಮತ್ತು ಸುತ್ತಮುತ್ತಲು ನಡೆಯುವ ಸಂಗತಿಗಳೊಂದಿಗೆ ಸಮೀಕರಿಸಿ ಪುನರ್ ಮನನ ಮಾಡಿಕೊಳ್ಳಬೇಕು. ಪತ್ರಿಕೆಗಳಲ್ಲಿ ಪ್ರಕಟವಾಗುವ ಮುಖ್ಯ ಅಂಶಗಳನ್ನು ಟಿಪ್ಪಣಿ ಮಾಡಿಕೊಳ್ಳಬೇಕು. ಬಹಳ ಮುಖ್ಯವಾಗಿ ಆಳವಾದ ಜ್ಞಾನ, ವಿಷಯ ಗ್ರಹಿಕೆ, ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಲು ಸಕಾರಾತ್ಮಕ ಗುಣ ಬೆಳೆಸಿಕೊಳ್ಳಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೇರಣಾ ಘಟಕದ ಸಂಚಾಲಕ ಎಂ. ಕಲ್ಯಾಣಬಸವ, ಸರ್ಕಾರಿ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮಾಜದ ಸಾಧಕರಿಂದ ಪ್ರೇರಣೆ ದೊರೆಯಲಿ ಎನ್ನುವ ಕಾರಣಕ್ಕೆ ಇಲಾಖೆ ರೂಪಿಸಿದ ಕಾರ್ಯಕ್ರಮ ಇದಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಪ್ರಹ್ಲಾದ ಚೌದ್ರಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗೆ ತಮ್ಮನ್ನು ತಾವು ತೀವ್ರವಾಗಿ ಒಡ್ಡಿಕೊಳ್ಳಬೇಕು. ದಿನಪತ್ರಿಕೆಗಳ ನಿರಂತರ ಓದು, ಮಾಹಿತಿ ಸಂಗ್ರಹ, ಏಕಾಗ್ರತೆ, ಶ್ರದ್ಧೆ, ಪರಿಶ್ರಮ, ಆತ್ಮವಿಶ್ವಾಸ, ಗುರಿ ಇದ್ದರೆ ಯಶಸ್ಸು ಖಂಡಿತ ಸಾಧ್ಯ ಎಂದರು.
ವೇದಿಕೆ ಮೇಲೆ ಕನ್ನಡ ವಿಭಾಗದ ಮುಖ್ಯಸ್ಥ ಡಾ. ದಸ್ತಗೀರ್ ಸಾಬ್ ದಿನ್ನಿ, ಪ್ರೇರಣಾ ಕೋಶದ ಸಹ ಸಂಚಾಲಕ ಡಾ.ಸಲಿಹಾ ಇದ್ದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕಿ ಡಾ. ಪಲ್ಲವಿ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.