ದಾವಣಗೆರೆ: ವೈದ್ಯಕೀಯ ಕ್ಷೇತ್ರದಲ್ಲೂ ಮಹಿಳೆಯರು ಛಾಪು ಮೂಡಿಸುತ್ತಿದ್ದು, ಸಮಾಜವೂ ಇಂತಹ ಸಾಧನೆಗೆ ಪ್ರೋತ್ಸಾಹ, ಸಹಕಾರ ನೀಡಬೇಕು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್- ಕರ್ನಾಟಕದ ರಾಜ್ಯಾಧ್ಯಕ್ಷ ಡಾ.ವೀರಭದ್ರಪ್ಪ ವಿ. ಚಿನಿವಾಲರ್ ಹೇಳಿದರು.
ನಗರದ ಐಎಂಎ ಭವನದಲ್ಲಿ ಭಾನುವಾರ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮಹಿಳಾ ವೈದ್ಯರ ವಿಭಾಗ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪ್ರಗತಿ-2025 ಏಳನೇ ರಾಜ್ಯಮಟ್ಟದ ಮಹಿಳಾ ವೈದ್ಯರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳಾ ವೈದ್ಯರಿಗೆ ಸಮಾಜವೂ ಪ್ರೋತ್ಸಾಹ, ಸಹಕಾರ ನೀಡುವ ಮೂಲಕ ಸಾಧನೆ ಕಾರಣವಾಗಬೇಕು ಎಂದರು.ದೇಶದ ಮೊದಲ ಮಹಿಳಾ ವೈದ್ಯೆ ಆನಂದಿ ಗೋಪಾಲ ಜೋಷಿ ತಮ್ಮ ಪತಿಯ ಸಹಕಾರದಿಂದ ಅಮೇರಿಕದಲ್ಲಿ 1886ರಲ್ಲಿ ವೈದ್ಯಕೀಯ ಪದವಿ ಪಡೆದು, ಮಹಾರಾಷ್ಟ್ರದ ಕೊಲ್ಲಾಪುರದ ಮಿಷನರಿ ಆಸ್ಪತ್ರೆಯಲ್ಲಿ ಸೇವೆ ಮಾಡಿದ್ದರು. ದೇಶದ ಮೊದಲ ಮಹಿಳಾ ವೈದ್ಯೆಯಾಗಿ ಇತಿಹಾಸದಲ್ಲಿ ದಾಖಲಾಗಿರುವ ಅವರು, ಟಿಬಿ ಕಾಯಿಲೆಯಿಂದ 21ನೇ ವಯಸ್ಸಿಗೆ ಇಹಲೋಕ ತ್ಯಜಿಸಿದರು. ಸಮಾಜಕ್ಕೆ ತಮ್ಮದೇ ಸೇವೆ ಸಲ್ಲಿಸುತ್ತಿರುವ ಮಹಿಳಾ ವೈದ್ಯೆಯರಿಗೆ ಪ್ರೇರಣೆ, ಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.
ಐಎಂಎ ಜಿಲ್ಲಾಧ್ಯಕ್ಷ ಡಾ. ಬಿ.ಎಂ. ಹರ್ಷ ಮಾತನಾಡಿ, ಮಹಿಳಾ ವೈದ್ಯೆಯರ ವೈಯಕ್ತಿಕ ಹಾಗೂ ವೃತ್ತಿ ಬದುಕಿನ ಹಿತಕಾಯುವ ಸಲುವಾಗಿ ಮಹಿಳಾ ವಿಭಾಗ ಆರಂಭಿಸಲಾಗಿದೆ ಎಂದರು.ಐಎಂಎ ಮಹಿಳಾ ಜಿಲ್ಲಾಧ್ಯಕ್ಷೆ ಡಾ.ರಜನಿ ಮಾತನಾಡಿ, ಐಎಂಎ ಮಹಿಳಾ ಘಟಕ ಈಚೆಗಷ್ಟೇ ಆರಂಭವಾಗಿದೆ. ಸದಸ್ಯರ ಹಿತಾಸಕ್ತಿ ಕಾಯುವ ಜೊತೆಗೆ ಐಎಂಎ ನಡೆ ಹಳ್ಳಿಯ ಕಡೆ, ಐಎಂಎ ನಡೆ ಶಾಲೆಯ ಕಡೆ, ಐಎಂಎ ನಡೆ ಸೈನಿಕರ ಕಡೆ, ಐಎಂಎ ನಡೆ ಜೀವ ಉಳಿಸುವ ಕಡೆ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮ ಮೂಲಕ ಸಮಾಜ ಸೇವೆಗೆ ತೊಡಗಿದೆ ಎಂದು ಹೇಳಿದರು.
ಮಹಿಳಾ ವೈದ್ಯರಿಗೆ ಇರುವ ಸವಾಲು, ವೈದ್ಯೆಯರ ಸಾಧನೆಗಳು, ಆರೋಗ್ಯ ಕಾಪಾಡಿಕೊಳ್ಳುವ ವಿಧಾನ, ಹಣಕಾಸಿನ ನಿರ್ವಹಣೆ, ಮಹಿಳಾ ಸಬಲೀಕರಣ, ಹಲವಾರು ವಿಷಯಗಳ ಬಗ್ಗೆ ವಿಚಾರ ಸಂಕಿರಣ, ಗೋಷ್ಠಿ ನಡೆದವು. ಕರ್ನಾಟಕ ಪ್ರೊಫೆಶನಲ್ ಪ್ರೊಟೆಕ್ಷನ್ ಸ್ಕೀಮ್‌ನ ಆನ್‌ಲೈನ್ ನೋಂದಣಿ ಪೋರ್ಟಲ್‌ಗೆ ಚಾಲನೆ ನೀಡಲಾಯಿತು. ಹಿರಿಯ ಮಹಿಳಾ ವೈದ್ಯೆಯರಿಗೆ ಸನ್ಮಾನಿಸಲಾಯಿತು.ಐಎಂಎ ರಾಜ್ಯ ಉಪಾಧ್ಯಕ್ಷ ಡಾ.ಮಾಳವೇಗೌಡ, ಡಾ.ಶ್ವೇತಾ ರಾಮು, ಡಾ.ಹರೀಶ ಬೆಳವಂತಬೆಟ್ಟು, ಡಾ. ಎನ್.ಎಸ್. ಚೈತಾಲಿ, ಡಾ.ವಾಣಿ ಕೋರಿ, ಡಾ. ಕೆ.ಎನ್. ಮಧುಸೂದನ, ಡಾ.ಶಾಂತಿ, ಡಾ.ರೇಣು, ಡಾ.ಛಾಯಾ, ಡಾ.ಶೋಭಾ ಧನಂಜಯ, ಡಾ.ಸೀಮಾ ಬಿಜ್ಜರಗಿ ಇತರರು ಇದ್ದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸುವ ಮೂಲಕ ಲಿಂಗ ತಾರತಮ್ಯ ತೊಡೆದು ಹಾಕಲು ಪ್ರಯತ್ನಿಸಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲೂ ಮಹಿಳೆಯರ ಪಾತ್ರ ಅಸಾಧಾರಣವಾಗಿತ್ತು. ಶಿಕ್ಷ, ಸಾಹಿತ್ಯ, ರಾಜಕೀಯ, ವಿಜ್ಞಾನ, ತಂತ್ರಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ತಮ್ಮ ಸಾಧನೆಯ ಛಾಪು ಮೂಡಿಸುತ್ತಿದ್ದಾರೆ- ಡಾ.ವೀರಭದ್ರಪ್ಪ ಚಿನಿವಾಲರ, ರಾಜ್ಯಾಧ್ಯಕ್ಷ