ಅಶೋಕ ಡಿ. ಸೊರಟೂರ
ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್ ಹತ್ತಿರ ಕಳೆದ ಎರಡು ದಿನಗಳ ಹಿಂದೆ ಆರಂಭವಾಗಿರುವ ಇಂದಿರಾ ಕ್ಯಾಂಟೀನ್ ಬಡವರ, ಕೂಲಿ ಕಾರ್ಮಿಕರ ಹಾಗೂ ವಿದ್ಯಾರ್ಥಿಗಳ ಪಾಲಿಗೆ ಹಸಿವು ನೀಗಿಸುವ ಮೂಲಕ ಅನ್ನಪೂರ್ಣೆಯಾಗಿರುವುದು ಸುಳ್ಳಲ್ಲ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್‌ಗಳು ಖಂಡಿತವಾಗಿಯೂ ಬಡವರ ಹಸಿವು ನೀಗಿಸುವ ಕಾರ್ಯ ಮಾಡುತ್ತಿರುವುದು ಸ್ತ್ಯುತ್ಯಾರ್ಹ ಸಂಗತಿಯಾಗಿದೆ.ಕೇವಲ ₹ 5ಗೆ ಉಪಾಹಾರ, ₹ 10ಗೆ ಊಟ ನೀಡುವ ಮೂಲಕ ಬಡವರ ಕೂಲಿ ಕಾರ್ಮಿಕರ ಪಾಲಿಗೆ ವರದಾನವಾಗಿದೆ. ₹ 20 ನೀಡಿದಲ್ಲಿ ಎರಡು ಚಪಾತಿ ಅನ್ನ ಸಾಂಬಾರ ನೀಡುವ ಕಾರ್ಯದಲ್ಲಿ ಇಂದಿರಾ ಕ್ಯಾಂಟೀನ್ ಸಿಬ್ಬಂದಿ ನಿರತರಾಗಿದ್ದಾರೆ. ಬೆಳಗ್ಗೆ ಮಾಡಿದ ಉಪಹಾರ ಬೇಗನೆ ಖಾಲಿಯಾಗಿ ಹಲವರು ಉಪಹಾರ ಇಲ್ಲದೆ ವಾಪಸ್ ಹೋಗುತ್ತಿದ್ದಾರೆ.
ಪಟ್ಟಣಕ್ಕೆ ಬೇರೆ ಬೇರೆ ಗ್ರಾಮಗಳಿಂದ ಪಿಯು ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಬೆಳಗ್ಗೆ ಬೇಗನೆ ತಿಂಡಿ ತಿನ್ನದೆ ಬರುತ್ತಾರೆ. ಅವರಿಗೆ ಇಂದಿರಾ ಕ್ಯಾಂಟೀನ್ ಊಟ ಹಸಿದ ಹೊಟ್ಟೆ ತುಂಬಿಸುವ ಮೂಲಕ ಕಾರ್ಯ ಮಾಡುತ್ತಿರುವುದು ಕಂಡು ಬಂದಿತು.
ಈಗ ಆರಂಭಗೊಂಡಿರುವ ಇಂದಿರಾ ಕ್ಯಾಂಟೀನ್ ಇನ್ನಷ್ಟು ಹೆಚ್ಚು ಉಪಾಹಾರ ಹಾಗೂ ಊಟ ತಯಾರಿ ಮಾಡಿದಲ್ಲಿ ಹಸಿದ ಹೊಟ್ಟೆಯಿಂದ ವಾಪಾಸ್ ಹೋಗುವವರ ಸಂಖ್ಯೆ ಕಡಿಮೆಯಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎನ್ನುತ್ತಾರೆ ಸಾರ್ವಜನಿಕರು.ನಾವು ದೂರದ ಊರುಗಳಿಂದ ಇಲ್ಲಿಗೆ ಆಸ್ಪತ್ರೆಗೆ ಬಂದಿದ್ದೇವೆ. ಈಗ ಮಧ್ಯಾಹ್ನ ವೇಳೆಯಾಗಿದ್ದರಿಂದ ಊಟಕ್ಕೆ ಆಗಮಿಸಿದ್ದೇವೆ. ₹ 10 ಗಳಲ್ಲಿ ಊಟ ದೊರೆಯುತ್ತಿರುವುದು ಬಡವರ ಪಾಲಿಗೆ ಸಿಹಿ ಸಂಗತಿಯಾಗಿದೆ. ಊಟ ರುಚಿ ಕಟ್ಟಾಗಿದೆ. ಇದೆ ರೀತಿಯ ರುಚಿ ಮುಂದೆ ಇದ್ದಲ್ಲಿ, ಬಡವರು ಖಾನಾವಳಿ ಮರೆತು ಬಿಡುತ್ತಾರೆ ಎನ್ನುತ್ತಾರೆ ಸಂಕ್ಲಿಪುರ ಗ್ರಾಮಸ್ಥ ಈಶ್ವರಗೌಡ ಪಾಟೀಲ.ಇದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ನಿಜವಾಗಿಯೂ ಬಡವರ ಸ್ನೇಹಿಯಾಗಿದೆ. ರುಚಿ ಹಾಗೂ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗುವ ಮಾತಿಲ್ಲ. ಬಡವರು, ಕೂಲಿ ಕಾರ್ಮಿಕರು ಇದರ ಲಾಭ ಪಡೆದುಕೊಂಡಲ್ಲಿ ನಮ್ಮ ಶ್ರಮ ಸಾರ್ಥಕ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.