ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು/ಬೆಳಗಾವಿ/ಬೆಂಗಳೂರು
ಸಿ.ಟಿ. ರವಿ ಅವರಿಗೆ ಏನೂ ಆಗಿಲ್ಲ, ತಲೆಗೆ ಗಾಯವಾಗಿ ಎಷ್ಟು ಹೊಲಿಗೆ ಬಿದ್ದಿದೆ ಎಂದು ಲಕ್ಷ್ಮೀ ಹೆಬ್ಬಾಳರ್ ಕೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಅವರೇನು ವೈದ್ಯರಲ್ಲ. ಗಾಯ, ರಕ್ತ ಜಗತ್ತೇ ನೋಡಿದೆ ಎಂದು ತಿರುಗೇಟು ನೀಡಿದ್ದಾರೆ.ಸೋಮವಾರ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಲೆಗೆ ಗಾಯದ ಬಳಿಕವೂ 3-4 ಗಂಟೆ ಚಿಕಿತ್ಸೆ ಕೊಡಿಸಲಿಲ್ಲ. ಪಕ್ಕೆ, ಬೆನ್ನಿನಲ್ಲಿ 3-4 ಗುರುತುಗಳು ಇನ್ನೂ ಇವೆ. ಓರ್ವ ಶಾಸಕನಿಗೆ ಸುತ್ತಾಡಿಸಿದ್ದು, ಹಿಂಸೆ ಕೊಟ್ಡಿದ್ದನ್ನು ಆ ಮಹಾತಾಯಿ ಹೇಗೆ ಒಪ್ಪಿಕೊಳ್ತಾರೆ. ತಪ್ಪು ಮುಚ್ಚಿಕೊಳ್ಳಲು ಆ ತಾಯಿ ಸುಳ್ಳುಗಳ ಸರಮಾಲೆ ಹೆಣೆದಿದ್ದಾರೆ ಎಂದರು.
ಕಾಂಗ್ರೆಸ್ಸಿಗರು ತುರ್ತು ಪರಿಸ್ಥಿತಿ ಮನಸ್ಥಿತಿಯಿಂದ ಹೊರಗೆ ಬರಬೇಕು. ಬೆಳಗಾವಿ ರಿಪಬ್ಲಿಕ್ ಆಗಲು ಜನ ಒಪ್ಪಲ್ಲ. ನಾವು ಅವಕಾಶ ಕೊಡಲ್ಲ. ನನ್ನ ಮೇಲೆ ದೈಹಿಕ ಹಲ್ಲೆ ಸಂಬಂಧ ಪರಿಷತ್ ಸದಸ್ಯರಾದ ಕಿಶೋರ್, ಅರುಣ್ ದೂರು ನೀಡಿದ್ದಾರೆ. ಏನು ಕ್ರಮ ಕೈಗೊಳ್ಳುತ್ತಾರೆ ನೋಡೋಣ. ಖಾನಾಪುರದಲ್ಲಿ ನಾನು ದೂರು ನೀಡಿದ್ದೇನೆ. ಈವರೆಗೂ ಎಫ್ಐಆರ್ ಪ್ರತಿ ಕೊಟ್ಟಿಲ್ಲ ಎಂದು ತಿಳಿಸಿದರು.ಅವಾಚ್ಯ ಶಬ್ಧ ಬಳಕೆ ಬಗ್ಗೆ ಪ್ರಧಾನಿ ಮೋದಿಗೆ ದೂರು ನೀಡುವುದಾಗಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿ ಬಿಜೆಪಿಯವರು ಎಲ್ಲರೂ ದುಷ್ಯಾಸನರಾದರೆ ಅವರ ಬಳಿ ಏಕೆ ನ್ಯಾಯ ಕೇಳುತ್ತಾರೆ ಎಂದರು.
ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಬೇಲೂರು ಕ್ಷೇತ್ರದ ಶಾಸಕ ಸುರೇಶ್ ಇತರರು ಸಿ.ಟಿ. ರವಿ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ತಲೆಕೆಟ್ಟಿಲ್ಲ: ರವಿ ಪತ್ನಿ ಪಲ್ಲವಿ ಸಿ.ಟಿ.ರವಿ ಒಳ್ಳೆ ಡ್ರಾಮಾ ಮಾಸ್ಟರ್ ಎಂಬ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಸಿ.ಟಿ. ರವಿ ಅವರ ಪತ್ನಿ ಪಲ್ಲವಿ ಅವರು ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಹಾಳಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆಳವಾಗಿ ಹೋಲ್ ಆಗಿದೆ. ಕೂದಲಿನ ಮೇಲೆ ಸ್ಟಿಕ್ಕರ್ ನಿಲ್ಲಲ್ಲ ಅಂತ, ಬ್ಯಾಂಡೇಜ್ ಹಾಕಿದ್ದಾರೆ. ಮ್ಯಾನ್ ಹ್ಯಾಂಡ್ಲಿಂಗ್ ಮಾಡಿ ಸುತ್ತಾಡಿಸಿರೋದ್ರಿಂದ ಜ್ವರ ಬಂದಿದೆ ಎಂದರು.ಸಿ.ಟಿ.ರವಿಗೆ ಸಂಸ್ಕಾರ ಇಲ್ಲ, ಅಕ್ಕ ತಂಗಿ, ಅಮ್ಮ ಹೆಂಡ್ತಿ ಇಲ್ವಾ ಎಂದಿದ್ದಕ್ಕೆ ಪ್ರತಿಕ್ರಿಯಿಸಿ, ಎಲ್ಲರೂ ಇದ್ದಾರೆ. ಅಮ್ಮ ಇಲ್ಲದಿದ್ರೆ ಭೂಮಿಗೆ ಬರೋದಾದ್ರು ಹೇಗೆ?, ಸಿ.ಟಿ.ರವಿಗೆ ಅವರದ್ದೇ ಆದ ಸಂಸ್ಕಾರ ಇದೆ ಎಂದು ಹೇಳಿದರು.ಸುರಕ್ಷತೆ ದೃಷ್ಟಿಯಿಂದ ರವಿ ಸ್ಥಳಾಂತರ: ಬೆಳಗಾವಿ ಪೊಲೀಸ್ ಆಯುಕ್ತ ಸ್ಪಷ್ಟನೆಸಿ.ಟಿ.ರವಿಯವರ ಸುರಕ್ಷತೆ ದೃಷ್ಟಿಯಿಂದ ಠಾಣೆಯಿಂದ ಠಾಣೆಗೆ ಸ್ಥಳಾಂತರ ಮಾಡಿದೆವು ಎಂದು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದರು. ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ವಾಹನವನ್ನು ಕೆಲ ವಾಹನಗಳು ಫಾಲೋ ಮಾಡುತ್ತಿದ್ದವು. ತನಿಖಾಧಿಕಾರಿಯೇ ರವಿ ಅವರ ಜೊತೆಗೆ ಇದ್ದರು. ಹಿರೇಬಾಗೆವಾಡಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆದರೆ, ಭದ್ರತೆ ದೃಷ್ಟಿಯಿಂದ ಬೇರೆಡೆಗೆ ಸ್ಥಳಾಂತರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.ಸಿ.ಟಿ.ರವಿ ಮೇಲೆ ಹಲ್ಲೆ ಯತ್ನ ಆರೋಪ ಪ್ರಕರಣ ಕುರಿತು ಕಾರ್ಯದರ್ಶಿಯಿಂದ ನಮಗೆ ದೂರು ಬಂದ ಹಿನ್ನೆಲೆಯಲ್ಲಿ 10 ಮಂದಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ಹಲ್ಲೆಗೆ ಯತ್ನಿಸಿದ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗುವುದು ಎಂದು ತಿಳಿಸಿದರು.ಕಾಂಗ್ರೆಸ್ಸಿಗರು ಬಿಡುಗಡೆ ಮಾಡಿರೋ ವಿಡಿಯೋಗೆ ಬೆಲೆ ಇಲ್ಲ: ರವಿಕುಮಾರ್
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ನೀಡಿರುವ ಹೇಳಿಕೆ ಸಂಬಂಧಿಸಿ ಕಾಂಗ್ರೆಸ್ಸಿಗರು ಬಿಡುಗಡೆ ಮಾಡಿದ ವಿಡಿಯೋಗೆ ಯಾವುದೇ ಬೆಲೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ. ಸೋಮವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿ, ಸಭಾಪತಿ ಬಸವರಾಜ ಹೊರಟ್ಟಿ ಈಗಾಗಲೇ ಸ್ಪಷ್ಟನೆ ನೀಡಿದ್ದು, ಆ ರೀತಿಯ ವಿಡಿಯೋ ದಾಖಲೆ ನಮ್ಮ ಬಳಿ ಇಲ್ಲ ಎಂದಿದ್ದಾರೆ. ಹೀಗಾಗಿ ಕಾಂಗ್ರೆಸ್‌ನವರು ಬಿಡುಗಡೆ ಮಾಡುವ ವಿಡಿಯೋಗೆ ಯಾವುದೇ ಆಧಾರವೂ ಇಲ್ಲ, ಬೆಲೆಯೂ ಇಲ್ಲ ಎಂದು ತಿಳಿಸಿದರು.ಹೈಕೋರ್ಟ್ ಸಿ.ಟಿ.ರವಿ ಅವರನ್ನು ಕೂಡಲೇ ಬಿಡುಗಡೆ ಮಾಡಲು ಹೇಳಿರುವುದರಿಂದ ನಮಗೆ ಅರ್ಧ ಜಯ ಲಭಿಸಿದೆ. ಬಂಧನ ಬಳಿಕ ಸಿ.ಟಿ.ರವಿ ಅವರನ್ನು ಅಷ್ಟೆಲ್ಲ ಓಡಾಡಿಸಿದ್ದು ಯಾಕೆ? ಕಾಡಿನಲ್ಲಿ, ಕಬ್ಬಿನ ಗದ್ದೆಯಲ್ಲಿ, ಧಾರವಾಡ, ಗದಗ, ಚಿಕ್ಕೋಡಿ ಜಿಲ್ಲೆ, ಬಾಗಲಕೋಟೆ ಜಿಲ್ಲೆ ಗಡಿ ಭಾಗದಲ್ಲಿ ತಿರುಗಾಡಿಸಲಾಗಿದೆ. ಈ ರೀತಿ ನಾಲ್ಕೈದು ಜಿಲ್ಲೆಗಳಲ್ಲಿ ಕರೆದುಕೊಂಡು ಹೋಗಿ ರಾತ್ರಿಯೆಲ್ಲ ಊಟ, ನೀರು ನೀಡದೆ, ನಿದ್ರೆ ಇಲ್ಲದಂತೆ ಅತ್ಯಂತ ವಿಚಿತ್ರ ಹಿಂಸೆ ಕೊಟ್ಟಿದ್ದಾರೆ. ತಲೆಗೆ ಪೆಟ್ಟಾದರೂ ಚಿಕಿತ್ಸೆ ನೀಡಿಲ್ಲ. ಇಂಥ ಚಿತ್ರಹಿಂಸೆ ಕೊಟ್ಟಿರುವುದು ಯಾಕೆ? ಎಂದು ಕಿಡಿಕಾರಿದರು.ಸಿ.ಟಿ.ರವಿ ಅವರ ಮೇಲೆ ಹಲ್ಲೆ ಮಾಡಲು ನೂರಾರು ಜನ ಸುವರ್ಣಸೌಧದೊಳಗೆ ಹೇಗೆ ಬಂದರು? ಒಳಗಡೆ ಬರಲು ಕಾರಣ ಯಾರು? ಯಾರ ಪತ್ರದೊಂದಿಗೆ ಒಳಗಡೆ ಬಂದಿದ್ದಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.