ಅಂಧತ್ವವನ್ನು ಮೆಟ್ಟಿನಿಂತು ಸಾಧನೆ ತೋರಿದ ಲಕ್ಷ್ಮೀ

KannadaprabhaNewsNetwork |  
Published : May 12, 2024, 01:21 AM IST
ಲಕ್ಷ್ಮೀ ತೋರವತ. | Kannada Prabha

ಸಾರಾಂಶ

ಹುಟ್ಟಿನಿಂದಲೇ ಅಂಧಳಾಗಿರುವ ಲಕ್ಷ್ಮೀ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ತಾನೇ ಬರೆಯಲು ಸಾಧ್ಯವಿಲ್ಲ. ಓರ್ವ 9ನೇ ತರಗತಿಯ ವಿದ್ಯಾರ್ಥಿಯ ಸಹಾಯ ಪಡೆದು ಪರೀಕ್ಷೆ ಬರೆದು ಶೇ. 80ರಷ್ಟು ಅಂಕ ಪಡೆದು ಸಾಧನೆ ತೋರಿದ್ದಾಳೆ.

ಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಜೀವನದಲ್ಲಿ ಸಾಧಿಸುವ ಛಲ ಇದ್ದರೆ ಏನೆಲ್ಲ ಮಾಡಲು ಸಾಧ್ಯ ಎಂಬುದಕ್ಕೆ ಈ ಬಾಲಕಿ ಉತ್ತಮ ನಿದರ್ಶನ. ಹುಟ್ಟಿನಿಂದಲೇ ಪೂರ್ಣವಾಗಿ ಅಂಧಳಾಗಿರುವ ಬಾಲಕಿ ಲಕ್ಷ್ಮೀ ಈಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 80ರಷ್ಟು ಅಂಕ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ.

ಜಿಲ್ಲೆಯ ಧಾರವಾಡ ತಾಲೂಕಿನ ನಾಗನೂರ (ಹುಲ್ತಿಕೋಟಿ) ಗ್ರಾಮದ ಧನಗರಗೌಳಿ ಸಮಾಜದ ಬಡ ಕುಟುಂಬವಾಗಿರುವ ಸಾಕ್ರು ತೋರವತ ಹಾಗೂ ಜನಾಬಾಯಿ ತೋರವತರ ಪುತ್ರಿ ಲಕ್ಷ್ಮೀ. ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ ಅಂಧ ಮಕ್ಕಳ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ಈಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 495 (ಶೇ. 80) ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಹುಟ್ಟಿನಿಂದಲೇ ಅಂಧಳಾಗಿರುವ ಲಕ್ಷ್ಮೀ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ತಾನೇ ಬರೆಯಲು ಸಾಧ್ಯವಿಲ್ಲ. ಓರ್ವ 9ನೇ ತರಗತಿಯ ವಿದ್ಯಾರ್ಥಿಯ ಸಹಾಯ ಪಡೆದು ಪರೀಕ್ಷೆ ಬರೆದು ಸಾಧನೆ ತೋರಿದ್ದಾಳೆ.

ಬಡ ಕುಟುಂಬ:

ಲಕ್ಷ್ಮೀ ತಂದೆ ಸಾಕ್ರು ಹಾಗೂ ತಾಯಿ ಜನಾಬಾಯಿ ಕೂಲಿಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರಿಗೆ 4 ಮಕ್ಕಳು, ಮೊದಲನೆಯ ಮಗ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿ ತಂದೆಯೊಂದಿಗೆ ಕೂಲಿ ಕೆಲಸ ಮಾಡುತ್ತಿದ್ದಾನೆ. 2ನೆಯವಳಾದ ಲಕ್ಷ್ಮೀ ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ ಅಂಧ ಮಕ್ಕಳ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ್ದಾಳೆ. ಮೂರನೇ ಮಗಳು ಸಕ್ಕು 10ನೇ ತರಗತಿ ಓದುತ್ತಿದ್ದಾಳೆ. ನಾಲನೇ ಮಗ ಪುಂಡಲಿಕನೂ ಲಕ್ಷ್ಮೀಯಂತೆ ಅಂಧನಾಗಿದ್ದು, ಇವನೂ ಇದೇ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ ಅಂಧ ಮಕ್ಕಳ ಪ್ರೌಢಶಾಲೆಯಲ್ಲಿಯೇ 7ನೇ ತರಗತಿ ಓದುತ್ತಿದ್ದಾನೆ.

ಉನ್ನತ ಶಿಕ್ಷಣ ಪಡೆಯುವಾಸೆ:

ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿ ಹರ್ಷ ವ್ಯಕ್ತಪಡಿಸಿದ ಲಕ್ಷ್ಮೀ ಕನ್ನಡಪ್ರಭದೊಂದಿಗೆ ಮಾತನಾಡಿ, ಮುಂದೆ ಇನ್ನೂ ಹೆಚ್ಚಿನ ಶಿಕ್ಷಣ ಪಡೆಯುವ ಆಸೆಯಿದೆ. ತಂದೆ-ತಾಯಿ ಬಡವರಿದ್ದು, ನನ್ನ ಕಲಿಕೆಗೆ ಬೇಕಾದ ಹಣ ಅವರ ಬಳಿ ಇಲ್ಲ. ಹುಬ್ಬಳ್ಳಿಯಲ್ಲಿರುವಂತೆ ಬೇರೆ ಎಲ್ಲಿಯಾದರೂ ವಸತಿಯೊಂದಿಗೆ ಉಚಿತ ಶಿಕ್ಷಣ ನೀಡುವ ಸಂಸ್ಥೆಗಳಲ್ಲಿ ಪ್ರವೇಶ ಪಡೆದು ಇನ್ನೂ ಹೆಚ್ಚಿನ ಸಾಧನೆ ತೋರುವ ಹಂಬಲವಿದೆ. ಇದಕ್ಕೆ ನನ್ನ ತಂದೆ-ತಾಯಿಯೂ ಸಮ್ಮಿತಿ ಸೂಚಿಸಿದ್ದಾರೆ ಎಂದಳು.ಕಲಿಕೆಗೆ ನೆರವು

ನಾನಂತೂ ಕಲಿಯಲು ಆಗಲಿಲ್ಲ. ನನ್ನ ಮಗಳು ಅಂಧಳಾಗಿದ್ದರೂ ಕಲಿಕೆಯಲ್ಲಿ ಅವಳಿಗಿರುವ ಆಸಕ್ತಿ ನೋಡಿ ಸಂತಸವಾಗುತ್ತಿದೆ. ನಮಗೆ ಎಷ್ಟೇ ಬಡತನ ಬಂದರೂ ಅವಳ ಕಲಿಕೆಗೆ ಬೇಕಾದ ವ್ಯವಸ್ಥೆ ಕಲ್ಪಿಸುವೆ.

ಜನಾಬಾಯಿ ತೋರವತ, ಬಾಲಕಿ ಲಕ್ಷ್ಮೀ ತಾಯಿ

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ