ಪಪಂ ಅಧ್ಯಕ್ಷೆಯಾಗಿ ಲಕ್ಷ್ಮಿಮಲ್ಲು ಅವಿರೋಧ ಆಯ್ಕೆ

KannadaprabhaNewsNetwork |  
Published : Sep 05, 2024, 12:33 AM IST
ಪಪಂ ಅಧ್ಯಕ್ಷೆಯಾಗಿ ಲಕ್ಷ್ಮಿಮಲ್ಲು, ಉಪಾಧ್ಯಕ್ಷೆಯಾಗಿ ಶಾಂತಮ್ಮ ನಿಂಗರಾಜು ಅವಿರೋಧ ಆಯ್ಕೆ | Kannada Prabha

ಸಾರಾಂಶ

ಯಳಂದೂರು ಪಟ್ಟಣ ಪಂಚಾಯಿತಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಲಕ್ಷ್ಮಿಮಲ್ಲು ಉಪಾಧ್ಯಕ್ಷರಾಗಿ ಶಾಂತಮ್ಮ ನಿಂಗರಾಜು ಅವರಿಗೆ ಶಾಶಕ ಎ.ಆರ್.ಕೃಷ್ಣಮೂರ್ತಿ ಶುಭಾಶಯ ಕೋರಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ೧೦ನೇ ವಾರ್ಡಿನ ಸದಸ್ಯೆ ಲಕ್ಷ್ಮಿಮಲ್ಲು ಹಾಗೂ ಉಪಾಧ್ಯಕ್ಷೆಯಾಗಿ ೧೧ ನೇ ವಾರ್ಡಿನ ಸದಸ್ಯೆ ಶಾಂತಮ್ಮ ನಿಂಗರಾಜು ಅವಿರೋಧವಾಗಿ ಆಯ್ಕೆಯಾದರು.

ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಿಮಲ್ಲು ಹಾಗೂ ಬಿಸಿಎ ಮಹಿಳಾ ಸ್ಥಾನಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಶಾಂತಮ್ಮ ನಿಂಗರಾಜು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಒಂದೊಂದು ಸ್ಥಾನಕ್ಕೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಜಯಪ್ರಕಾಶ್ ಇವರಿಬ್ಬರ ಆಯ್ಕೆಯನ್ನು ಘೋಷಿಸಿದರು.ಪಪಂನಲ್ಲಿ ಒಟ್ಟು ೧೧ ಸದಸ್ಯರಿದ್ದು ಒಬ್ಬರು ಮೃತಪಟ್ಟಿದ್ದಾರೆ. ಇನ್ನುಳಿದ ೧೦ ಸದಸ್ಯರಲ್ಲಿ ೯ ಮಂದಿ ಕಾಂಗ್ರೆಸ್ ಪಕ್ಷದ ಶಾಸಕರೇ ಆಗಿದ್ದಾರೆ. ಈ ನಡುವೆ ಈ ಚುನಾವಣಾ ಪ್ರಕ್ರಿಯೆಯಲ್ಲಿ ಶಾಸಕರೂ ಭಾಗವಹಿಸುವ ಅವಕಾಶವಿದ್ದು ಪ್ರಕ್ರಿಯೆ ಆರಂಭಗೊಂಡ ನಂತರ ಶಾಸಕ ಎ.ಆರ್. ಕೃಷ್ಣಮೂರ್ತಿ ಕೂಡ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮಾದರಿ ಪಟ್ಟಣಕ್ಕೆ ನನ್ನ ಸಹಕಾರ: ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಗೆ ಶುಭಾಶಯ ಕೋರಿದ ಶಾಸಕರು, ಕೊಳ್ಳೇಗಾಲ ನಗರ ಸಭೆ ಹಾಗೂ ಯಳಂದೂರು ಪಪಂಗೆ ವಿಶೇಷವಾಗಿ ೫ ಕೋಟಿ ರು. ಅನುದಾನವನ್ನು ತರಲಾಗಿದ್ದು ಪ್ರತಿ ವಾರ್ಡಿಗೂ ೫ ಲಕ್ಷ ರು. ಅನುದಾನ ಹಂಚಲಾಗಿದೆ. ಅದಲ್ಲದೆ ಪಟ್ಟಣದಲ್ಲಿ ಹೊಸದಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಶಿಕ್ಷಕರ ಭವನ ಹಾಗೂ ಪತ್ರಿಕಾ ಭವನಕ್ಕೂ ಜಾಗ ಗುರುತಿಸಲಾಗಿದ್ದು ಈಗಾಗಲೇ ಟೌನ್ ಪ್ಲಾನಿಂಗ್ ಮಾಡಿಲಾಗಿದೆ. ಇದರೊಂದಿಗೆ ಪಟ್ಟಣದಲ್ಲಿ ಕುಡಿಯುವ ನೀರಿಗೆ ೬.೫ ಕೋಟಿ ರು. ವೆಚ್ಚದಲ್ಲಿ ಹೊಸದಾಗಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಹಾಗೂ ಹೊಸ ಸಂಪರ್ಕವನ್ನು ಕಲ್ಪಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಇದರೊಂದಿಗೆ ಪಟ್ಟಣ ಪಂಚಾಯಿತಿಗೆ ಮೂರು ಗ್ರಾಪಂಗಳ ಕೆಲವು ಸರ್ವೇ ನಂ.ಗಳನ್ನು ಸೇರಿಸಲು ಯೋಜನೆಯನ್ನು ರೂಪಿಸಲಾಗಿದೆ. ಜೊತೆಗೆ ಪಟ್ಟಣದಲ್ಲಿ ೧೦೦ ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ೩೫ ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ. ಯಳಂದೂರು ಪಟ್ಟಣ ಚಿಕ್ಕದಾಗಿದ್ದು ಇದನ್ನು ಮಾದರಿ ಮಾಡಲು ನಾನು ನಿಮ್ಮೊಂದಿಗಿದ್ದು ಎಲ್ಲರೂ ಇದರ ಅಭಿವೃದ್ಧಿಗೆ ಶ್ರಮಿಸೋಣ ಎಂದು ಕರೆ ನೀಡಿದರು.ಮೂಲ ಸಮಸ್ಯೆ ನಿವಾರಣೆಗೆ ಒತ್ತು:

ನೂತನ ಅಧ್ಯಕ್ಷೆ ಲಕ್ಷ್ಮಿಮಲ್ಲು ಮಾತನಾಡಿ, ಪಟ್ಟಣ ಪಂಚಾಯಿತಿಯ ಇತರೆ ಸದಸ್ಯರ ಸಹಯೋಗದೊಂದಿಗೆ ಇಲ್ಲಿನ ಮೂಲ ಸಮಸ್ಯೆಗಳ ನಿವಾರಣೆಗೆ ಒತ್ತು ನೀಡುತ್ತೇನೆ. ಇದರೊಂದಿಗೆ ಶಾಸಕರು ಪಟ್ಟಣಕ್ಕೆ ಹೊಸ ಯೋಜನೆಗಳನ್ನು ತರಲು ಉತ್ಸುಕರಾಗಿದ್ದು ಈ ಯೋಜನೆಗಳನ್ನು ಜಾರಿಗೆ ತರಲು ತಮ್ಮ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ. ಪಟ್ಟಣಕ್ಕೆ ಇನ್ನಷ್ಟು ಜನಪರ ಕೆಲಸಗಳನ್ನು ಮಾಡಲು ನನ್ನ ಅವಧಿಯಲ್ಲಿ ಸಂಪೂರ್ಣವಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.ಪಪಂ ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಮಹದೇವನಾಯಕ, ಸವಿತಾ ಬಸವರಾಜು, ಮಂಜು, ಪ್ರಭಾವತಿ ರಾಜಶೇಖರ್, ಬಿ.ರವಿ, ಸುಶೀಲಾಪ್ರಕಾಶ್, ನಾಮನಿರ್ದೇಶಿತ ಸದಸ್ಯರಾದ ಮುನವ್ವರ್ ಬೇಗ್, ಲಿಂಗರಾಜಮೂರ್ತಿ ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ತೋಟೇಶ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಜೆ. ಶ್ರೀನಿವಾಸ್, ನಂಜುಂಡಸ್ವಾಮಿ, ಕೊಂಡೇಗೌಡ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಜ್ಞಾನವನ್ನು ಓಡಿಸಿ ಜ್ಞಾನ ಬೆಳಗುವ ಗುರುವಿಗೆ ಗುಲಾಮರಾಗಿ: ಡಿ.ನಾರಾಯಣಪ್ಪ
ತೋಟಗಾರಿಕೆ ವಿವಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ