ಕನ್ನಡಪ್ರಭ ವಾರ್ತೆ ದಕ್ಷಿಣಕನ್ನಡ
ಶರನ್ನವರಾತ್ರಿಯ ಆರನೇ ದಿನ ಶನಿವಾರ ಲಲಿತಾ ಪಂಚಮಿಯಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗಿನಿಂದ ಕಿಕ್ಕಿರಿದ ಜನ ಸಂದಣಿ ಕಂಡು ಬಂತು. ಸುಮಾರು 50000ಕ್ಕೂ ಹೆಚ್ಚಿನ ಭಕ್ತರು ದೇವಳಕ್ಕೆ ಭೇಟಿ ನೀಡಿದರು. ಮಹಿಳೆಯರಿಗೆ ಮತ್ತು ಹೆಣ್ಣುಮಕ್ಕಳಿಗೆ ರಾತ್ರಿ ಅನ್ನಪ್ರಸಾದದ ವೇಳೆ ಶ್ರೀ ದೇವರ ಶೇಷವಸ್ತ್ರ ನೀಡಲಾಯಿತು.ಸುಮಾರು 30000 ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದ್ದು, ಮಹಿಳೆಯರಿಗೆ ಸಂಜೆ 6ರಿಂದ ರಾತ್ರಿ 11ರ ವರೆಗೆ ಸುಮಾರು 25000ಕ್ಕೂ ಹೆಚ್ಚು ಸೀರೆಗಳನ್ನು ವಿತರಿಸಲಾಯಿತು. ಬೆಂಗಳೂರಿನ ಉದ್ಯಮಿಯೋರ್ವರು ಲಲಿತಾ ಪಂಚಮಿಯಂದು ದೇವಳ ಒಳಾಂಗಣ ಮತ್ತು ಹೊರಾಂಗಣಕ್ಕೆ ಹೂವಿನ ಅಲಂಕಾರ ಮಾಡಿದ್ದು, ಕಣ್ಮನ ಸೆಳೆಯಿತು. ಭಕ್ತರ ಸರತಿ ಸಾಲಿನ ವ್ಯವಸ್ಥೆಗಾಗಿ ವಿಶೇಷವಾಗಿ ಬ್ಯಾರಿಕೇಡ್ ಹಾಗೂ ಏಣಿ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿತ್ತು. ವಾಹನಗಳ ನಿಲುಗಡೆಗೆ ಕಿನ್ನಿಗೋಳಿ ಗಿಡಿಗೆರೆ ಕಡೆಯಿಂದ ಬರುವ ಭಕ್ತರಿಗೆ ಕಟೀಲು ಪದವಿಪೂರ್ವ ಕಾಲೇಜು ಮೈದಾನ, ಸೌಂದರ್ಯ ಪ್ಯಾಲೇಸ್ ಬಳಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದೇವಳದ ಸರಸ್ವತಿ ಸದನದಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಭಜನೆ, ಸಂಜೆ ಸ್ವಾತಿ ರೈ ಅವರಿಂದ ಭಕ್ತಿಗಾಯನ, ಚಿರಶ್ರೀ ಕಾವೂರು ಅವರಿಂದ ಶಾಸ್ತ್ರೀಯ ಸಂಗೀತ, ಘಟೋತ್ಕಚ ಕಾಳಗ-ದ್ರೋಣಪರ್ವ ಯಕ್ಷಗಾನ ಪ್ರದರ್ಶನ, ದೇವಳದ ನೂತನ ನಾದ ಮಂಟಪದಲ್ಲಿ ಮಧುಮಿತ ರಾವ್ ಪುತ್ತೂರು ಮತ್ತು ಕೃಷ್ಣಗೋಪಾಲ್ ಪುಂಜಾಲುಕಟ್ಟೆ ಅವರಿಂದ ವೀಣಾವಾದನ ನಡೆಯಿತು. ಲಲಿತಾ ಪಂಚಮಿಯಂದು ಕೊಡೆತ್ತೂರು ಗ್ರಾಮಸ್ಥರ 61ನೇ ವರ್ಷದ ನವರಾತ್ರಿ ಮೆರವಣಿಗೆಯು ಹುಲಿ ವೇಷ ಸೇರಿದಂತೆ ವಿವಿಧ ವೇಷಗಳನ್ನು ಹರಕೆ ರೂಪದಲ್ಲಿ ಧರಿಸಿ ಕಟೀಲು ದೇವಳಕ್ಕೆ ರಾತ್ರಿ ಬಂದು ಸೇವೆ ಸಲ್ಲಿಸಿತು.