ದೊಡ್ಡಬಳ್ಳಾಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾದೀನ ಪ್ರಕ್ರಿಯೆ ಜಾರಿಯಲ್ಲಿದ್ದು, ಅವೈಜ್ಞಾನಿಕ ಬೆಲೆ ನಿಗದಿ ಹಾಗೂ ಅಧಿಕಾರಿಗಳ ರೈತ ವಿರೋಧಿ ಧೋರಣೆ ವಿರುದ್ಧ ಆಕ್ರೋಶ ತಾರಕಕ್ಕೇರಿದೆ.
ಕೊನಘಟ್ಟ, ಕೋಡಿಹಳ್ಳಿ, ನಾಗದೇನಹಳ್ಳಿ ಮತ್ತು ಆದಿನಾರಾಯಣ ಹೊಸಹಳ್ಳಿ ಗ್ರಾಮಗಳ ರೈತರು ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ 8ನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ಸ್ಥಳಕ್ಕೆ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಭೇಟಿ ನೀಡಿ, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.ಈ ವೇಳೆ ಮಾತನಾಡಿದ ಸ್ಥಳೀಯ ಮುಖಂಡ ಹಾಗೂ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಕೈಗಾರಿಕೆ ಸೇರಿದಂತೆ ಇತರೆ ಉದ್ದೇಶಗಳಿಗೆ ಸರ್ಕಾರ ರೈತರ ಕೃಷಿ ಭೂಮಿ ಸ್ವಾಧೀನ ಮಾಡಿಕೊಳ್ಳುವಾಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 2013ರ ಭೂಸ್ವಾಧೀನ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಕೇಂದ್ರ ಸರ್ಕಾರ ಮಾಡಿರುವ ಕಾನೂನುಗಳನ್ನು ಬದಿಗೊತ್ತಿರುವ ಅಧಿಕಾರಿಗಳು ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ, ಕೊನಘಟ್ಟ, ಕೋಡಿಹಳ್ಳಿ, ಆದಿನಾರಾಯಣಹೊಸಹಳ್ಳಿ ಗ್ರಾಮಗಳಿಗೆ ಸೇರಿರುವ 970 ಎಕರೆ, ಲಿಂಗನಹಳ್ಳಿ ಗ್ರಾಮದ ಸುತ್ತ 570 ಎಕರೆ ರೈತರ ಫಲವತ್ತಾದ ಭೂಮಿಗೆ ಅವರದೇ ಮಾನದಂಡಗಳ ಆಧಾರದ ಮೇಲೆ ಬೆಲೆ ನಿಗದಿ ಮಾಡಿಕೊಂಡು ಬಲವಂತದ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವುದು ಖಂಡನೀಯ ಎಂದರು.
ಬೆಲೆ ಹೆಚ್ಚಿಸದಿದ್ದರೆ ಭೂಮಿ ಕೊಡಲ್ಲ:ರೈತರ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗೆ ಸ್ವಾದೀನ ಪಡಿಸಿಕೊಳ್ಳುವ ವೇಳೆ ಪಾಲಿಸಬೇಕಾದ ನಿಯಮಗಳನ್ನು ಅಧಿಕಾರಿಗಳು ಉಲ್ಲಂಘಿಸುವಂತಿಲ್ಲ. ರೈತರ ಹಕ್ಕೊತ್ತಾಯವಾದ 4 ಪಟ್ಟು ಹೆಚ್ಚು ದರ ನಿಗದಿ ಮಾಡದ ಹೊರತು ಭೂಮಿ ಕೊಡುವುದಿಲ್ಲ. ತಾಲೂಕಿನ ಅಭಿವೃದ್ಧಿಗೆ ಕೈಗಾರಿಕೆಗಳ ಸ್ಥಾಪನೆ ಮುಖ್ಯ. ಆದರೆ ರೈತರ ಭೂಮಿಗೆ ಸರ್ಕಾರ ರೂಪಿಸಿರುವ ಕಾನೂನುಗಳನ್ನೇ ಗಾಳಿಗೆ ತೂರಿರುವ ಅಧಿಕಾರಿಗಳು ವೈಜ್ಞಾನಿಕ ಬೆಲೆ ನೀಡದೆ ತಮಗಿಷ್ಟಬಂದಂತೆ ವರ್ತಿಸುತ್ತಿದ್ದಾರೆ. ರೈತರ ಕೃಷಿ ಭೂಮಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಲಾಗುತ್ತಿದೆ ಎಂದು ವಿವರಿಸಿದರು.
ಜ.26 ರವರೆಗೆ ಗಡುವು:ಕೆಐಎಡಿಬಿ ಅಧಿಕಾರಿಗಳಿಗೆ ಈ ಸಂಬಂಧ ಜ.26 ರೊಳಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಗಡುವು ನೀಡಲಾಗಿದೆ. ತಪ್ಪಿದಲ್ಲಿ ಹೋರಾಟದ ಸ್ವರೂಪ ಬದಲಾವಣೆಯಾಗಲಿದೆ. ಕೂಡಲೇ ಸೂಕ್ತ ಕ್ರಮ ಅಗತ್ಯ ಎಂದರು.
ಸಮನ್ವಯಕ್ಕೆ ಯತ್ನ: ಉಪವಿಭಾಗಾಧಿಕಾರಿಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಶ್ರೀನಿವಾಸ್, ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು. ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ವರದಿ ಮಾಡಲಾಗುವುದು. ಕೆಐಎಡಿಬಿ ಹಾಗೂ ಕೈಗಾರಿಕಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ನಾರಾಯಣಗೌಡ, ಟಿಎಪಿಎಂಸಿಎಸ್ ನಿರ್ದೇಶಕ ಆನಂದ್, ಗ್ರಾಪಂ ಅಧ್ಯಕ್ಷೆ ಮಂಗಳಾ ಮಂಜುನಾಥ್, ಸದಸ್ಯರಾದ ಸೋಮಶೇಖರ್, ಭಾಗ್ಯಮ್ಮ ಸುಬ್ರಮಣಿ, ಸಿಮೆಂಟ್ ಮಂಜುನಾಥ್, ಹಮಾಮ್ ಪ್ರಕಾಶ್, ಭಾಗ್ಯಮ್ಮ, ಸಿದ್ದಲಿಂಗಯ್ಯ, ನಿವೃತ್ತ ಶಿಕ್ಷಕ ಸಿ.ಕೃಷ್ಣಪ್ಪ, ಮುಖಂಡರಾದ ಸೊಣ್ಣಪ್ಪನಹಳ್ಳಿ ರಮೇಶ್, ಶಿವಾಜಿ, ನಾರಾಯಣಸ್ವಾಮಿ, ನರಸಿಂಹಮೂರ್ತಿ, ಮೋಹನ್ಬಾಬು, ರಮೇಶ್, ಮುನಿರಾಜು, ಜೋಗಿ ಆನಂದ್ ಮತ್ತಿತರರು ಪಾಲ್ಗೊಂಡಿದ್ದರು.(ಫೋಟೋ ಕ್ಯಾಫ್ಷನ್) ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಹೋಬಳಿಯಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಭೂಸ್ವಾದೀನ ವಿಚಾರದಲ್ಲಿ ಅವೈಜ್ಞಾನಿಕ ಬೆಲೆ ನಿಗದಿ ಖಂಡಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಉಪವಿಭಾಗಾಧಿಕಾರಿ ಭೇಟಿ ನೀಡಿ ಮನವಿ ಸ್ವೀಕರಿಸಿದರು.