ಶಿವಾನಂದ ಗೊಂಬಿ
ಹುಬ್ಬಳ್ಳಿ: ಧಾರವಾಡ- ಬೆಳಗಾವಿ ನೂತನ ರೈಲು ಮಾರ್ಗಕ್ಕೆ ಭೂಸ್ವಾಧೀನದ್ದೇ ದೊಡ್ಡ ಸಮಸ್ಯೆಯಾಗಿದೆ. ಜನವರಿ ಅಂತ್ಯದೊಳಗೆ ಭೂಮಿಯನ್ನು ರಾಜ್ಯ ಸರ್ಕಾರ ಹಸ್ತಾಂತರಿಸುತ್ತದೆ, ಆ ಬಳಿಕ ಕೆಲಸ ಶುರುವಾಗುತ್ತದೆ ಎಂಬ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ನೀಡಿದ್ದ ಹೇಳಿಕೆ ಹುಸಿಯಾಗಿದೆ. ಈ ವರೆಗೂ ರಾಜ್ಯ ಸರ್ಕಾರ ಭೂಮಿಯನ್ನೇ ನೀಡಿಲ್ಲ. ಅದ್ಹೇಗೆ ಕೆಲಸ ಶುರು ಮಾಡೋದು ಎಂಬುದು ರೈಲ್ವೆ ಇಲಾಖೆ ಮಾತು.ಧಾರವಾಡ- ಬೆಳಗಾವಿ ಮಧ್ಯೆ ಕಿತ್ತೂರು ಮಾರ್ಗವಾಗಿ ರೈಲು ಮಾರ್ಗ ನಿರ್ಮಾಣವಾಗಬೇಕು. ಇದರಿಂದ ಸರಿಸುಮಾರು ಒಂದುಗಂಟೆ ಸಮಯ ಉಳಿತಾಯವಾಗುತ್ತದೆ. ನೇರವಾಗಿ ಬೆಳಗಾವಿ ಸಂಪರ್ಕಿಸಿದಂತಾಗುತ್ತದೆ. ಹುಬ್ಬಳ್ಳಿ-ಧಾರವಾಡ- ಬೆಳಗಾವಿಗಳ ಅಭಿವೃದ್ಧಿಗೂ ಪೂರಕವಾಗುತ್ತದೆ ಎಂಬ ಉದ್ದೇಶದಿಂದ ರೈಲ್ವೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಈ ಮಾರ್ಗದ ಮುತುವರ್ಜಿ ವಹಿಸಿದ್ದರು. ಅವರಿದ್ದಾಗಲೇ ಈ ಯೋಜನೆ ಘೋಷಣೆಯಾಗಿತ್ತು. ಅದಾದ ಬಳಿಕ ಪ್ರಾಥಮಿಕ ಸಮೀಕ್ಷೆ, ಸ್ಥಳ ಗುರುತಿಸುವಿಕೆ ಎಲ್ಲವೂ ನಡೆದು ಅಂತಿಮಗೊಂಡಿದ್ದು ಆಗಿದೆ. ಇದೀಗ ಕೆಲಸ ಶುರುವಾಗಬೇಕಿದೆ. ಕೆಲಸ ಶುರು ಮಾಡಲು ರೈಲ್ವೆ ಇಲಾಖೆ ಸಿದ್ಧವಿದೆ.
ಭೂಮಿ ಕೊಡುತ್ತಿಲ್ಲ73 ಕಿಮೀ ದೂರದ ಈ ಮಾರ್ಗ ನಿರ್ಮಾಣಕ್ಕೆ ಬರೋಬ್ಬರಿ 888.30 ಎಕರೆ ಪ್ರದೇಶ ಭೂಸ್ವಾಧೀನವಾಗಬೇಕಿದೆ. ₹927.42 ಕೋಟಿ ವೆಚ್ಚದ ಯೋಜನೆಯಿದು. ಇದರಲ್ಲಿ ಧಾರವಾಡ ಜಿಲ್ಲೆಯ 288.7 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಬೇಕಿದ್ದರೆ, ಬೆಳಗಾವಿ ಜಿಲ್ಲೆ ವ್ಯಾಪ್ತಿಯಲ್ಲಿ 599.6 ಎಕರೆ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಹಾಗೆ ನೋಡಿದರೆ ಈಗಾಗಲೇ ಕೆಲಸ ಶುರುವಾಗಬೇಕಿತ್ತು.
2029ರೊಳಗೆ ಕಾಮಗಾರಿ ಮುಗಿಸಬೇಕು ಎಂಬ ಯೋಜನೆ ರೈಲ್ವೆಯದ್ದು. ಆದರೆ, ಈ ವರೆಗೂ ರಾಜ್ಯ ಸರ್ಕಾರ ಒಂದೇ ಒಂದು ಇಂಚು ಜಾಗವನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಿಲ್ಲ. ಕೆಲಸ ಶುರು ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ರೈಲ್ವೆ ಇಲಾಖೆ ಅಧಿಕಾರಿಗಳದ್ದು.ಸಚಿವರ ಭರವಸೆ ಹುಸಿ
ರೈಲ್ವೆ ಸಚಿವ ವಿ. ಸೋಮಣ್ಣ ಡಿಸೆಂಬರ್ ಮೊದಲ ವಾರದಲ್ಲಿ ನೈಋತ್ಯ ರೈಲ್ವೆ ವಲಯದ ಕಚೇರಿಗೆ ಆಗಮಿಸಿದ್ದರು. ಪ್ರಗತಿ ಪರಿಶೀಲನೆಯನ್ನೂ ನಡೆಸಿದ್ದರು. ಆಗ ಜನವರಿ ಅಂತ್ಯದೊಳಗೆ ರಾಜ್ಯ ಸರ್ಕಾರ ಭೂಮಿಯನ್ನು ರೈಲ್ವೆಗೆ ನೀಡಲಿದೆ. ತದನಂತರ ಕೆಲಸ ಶುರುವಾಗಲಿದೆ ಎಂದು ಭರವಸೆ ನೀಡಿದ್ದರು. ಆದರೆ, ಜನವರಿ ಮುಗಿದು ಆಗಲೇ 3 ತಿಂಗಳಿಗೂ ಅಧಿಕ ಕಾಲವೇ ಕಳೆದಿದೆ. ಇದೀಗ ಏಪ್ರಿಲ್ ತಿಂಗಳೂ ಮುಗಿಯುವತ್ತ ಸಾಗಿದೆ. ಆದರೆ, ಈ ವರೆಗೂ ರಾಜ್ಯ ಸರ್ಕಾರದಿಂದ ಭೂಮಿ ಸಿಕ್ಕಿಯೇ ಇಲ್ಲ. ಇದರಿಂದಾಗಿ ಸಚಿವರ ಭರವಸೆ ಕೂಡ ಹುಸಿಯಾದಂತಾಗಿದೆ.ಇನ್ನಾದರೂ ರಾಜ್ಯ ಸರ್ಕಾರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಕೂಡಲೇ ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕು. ಶೀಘ್ರವೇ ಕೆಲಸ ಶುರು ಮಾಡಬೇಕು ಎಂಬ ಒಕ್ಕೊರಲಿನ ಆಗ್ರಹ ನಾಗರಿಕರದ್ದು.
ತಾಳಗುಪ್ಪ- ಶಿರಸಿ- ಹುಬ್ಬಳ್ಳಿ ಜಾಗೆ ಗುರುತಿಸುವಿಕೆ ಆರಂಭಈ ನಡುವೆ ಉತ್ತರ ಕರ್ನಾಟಕ ಹಾಗೂ ಮಲೆನಾಡು ಸಂಪರ್ಕಿಸುವ ತಾಳಗುಪ್ಪ- ಶಿರಸಿ- ಹುಬ್ಬಳ್ಳಿ ರೈಲು ಮಾರ್ಗಕ್ಕೆ ಜಾಗ ಗುರುತಿಸುವಿಕೆಯ ಸಮೀಕ್ಷೆ ಪ್ರಾರಂಭವಾಗಿದೆ. 158 ಕಿಮೀ ದೂರದ ಈ ರೈಲು ಮಾರ್ಗದ ಪ್ರಾಥಮಿಕ ಸಮೀಕ್ಷೆ ಪೂರ್ಣಗೊಂಡಿದ್ದು, ಇದೀಗ ಜಾಗ ಗುರುತಿಸಲು ಸಮೀಕ್ಷೆ ನಡೆಯುತ್ತಿದೆ. ಅದು ಮುಗಿದ ಬಳಿಕ ಡಿಪಿಆರ್ ಸಿದ್ಧಪಡಿಸಿ ರೈಲ್ವೆ ಮಂಡಳಿಗೆ ಸಲ್ಲಿಸಲಿದೆ. ಆ ಬಳಿಕವಷ್ಟೇ ಟೆಂಡರ್ ಕರೆದು ಕೆಲಸ ಕೊಡಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸುತ್ತದೆ.
ಭೂಮಿ ಹಸ್ತಾಂತರ ನಂತರ ಕಾಮಗಾರಿ
ಇಲಾಖೆಗೆ ಭೂಮಿ ಹಸ್ತಾಂತರವಾದ ಬಳಿಕ ಕೆಲಸ ಶುರು ಮಾಡಲಾಗುತ್ತದೆ. ಈ ವರೆಗೂ ಭೂಮಿಯನ್ನು ಹಸ್ತಾಂತರಿಸಿಲ್ಲ. ಹೀಗಾಗಿ ಕೆಲಸ ಶುರುವಾಗಿಲ್ಲ.- ಮಂಜುನಾಥ ಕನಮಡಿ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈಋತ್ಯ ರೈಲ್ವೆ ವಲಯ