ಭೂಮಿಗಾಗಿ ಅರ್ಜಿ ತಿರಸ್ಕಾರ: ಕ್ಷಮೆಗೆ ರೈತರ ಪಟ್ಟು

KannadaprabhaNewsNetwork | Published : Mar 26, 2025 1:36 AM

ಸಾರಾಂಶ

ಭೂಮಿಗಾಗಿ ರೈತರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿ ಪ್ರಾಂತ ರೈತ ಸಂಘದ ಸದಸ್ಯರನ್ನು ನಿಂದಿಸಿ ಆರೋಪ ಮಾಡಿದ ತಹಸೀಲ್ದಾರ್ ಕ್ಷಮೆ ಕೇಳಬೇಕು. ಭೂಮಿಗೆ ಸಲ್ಲಿಸುವ ಅರ್ಜಿ ಸ್ವೀಕರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮಂಗಳವಾರ ಪಟ್ಟಣದ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಭೂಮಿಗಾಗಿ ರೈತರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿ ಪ್ರಾಂತ ರೈತ ಸಂಘದ ಸದಸ್ಯರನ್ನು ನಿಂದಿಸಿ ಆರೋಪ ಮಾಡಿದ ತಹಸೀಲ್ದಾರ್ ಕ್ಷಮೆ ಕೇಳಬೇಕು. ಭೂಮಿಗೆ ಸಲ್ಲಿಸುವ ಅರ್ಜಿ ಸ್ವೀಕರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮಂಗಳವಾರ ಪಟ್ಟಣದ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ಬಸ್ ನಿಲ್ದಾಣದಿನದ ಸರ್ಕಲ್ ಮೂಲಕ ತಾಲೂಕು ಕಚೇರಿ ಮುಂದೆ ಜಮಾಯಿಸಿದ ನೂರಾರು ಮಂದಿ ರೈತರು ಹಾಗೂ ಪ್ರಾಂತ ರೈತ ಸಂಘದ ಕಾರ್ಯಕರ್ತರು ತಹಸೀಲ್ದಾರ್ ವಿರುದ್ಧ ಘೋಷಣೆ ಕೂಗಿದರು. ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ್ ಮಾತನಾಡಿ ಬಗರ್ ಹುಕುಂ ಸಮಿತಿ ಮೂಲಕ ಅರ್ಜಿ ಸಲ್ಲಿಸಿ ಭೂಮಿ ಮಂಜೂರು ಆಗದ ಹಿನ್ನಲೆ ಈ ಹಿಂದೆ ಪ್ರಾಂತ ರೈತ ಸಂಘ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸುವ ಚಳವಳಿ ಮಾಡಿದ್ದೇವೆ. ಸುಮಾರು ನಾಲ್ಕು ಸಾವಿರ ಅರ್ಜಿ ನಂತರ ಬಾಕಿ ಇದ್ದ ಅರ್ಜಿಗಳ ಸಲ್ಲಿಕೆಗೆ ತಹಸೀಲ್ದಾರ್ ಅವರೇ ಖುದ್ದು ಎಲ್ಲರೂ ಬರುವ ಬದಲು ಒಬ್ಬರು ಎಲ್ಲರ ಅರ್ಜಿ ತಂದು ಸಲ್ಲಿಸಲು ಸೂಚಿಸಿದ್ದರು. ಅವರ ಮಾತಿನಂತೆ ನಮ್ಮ ಸಂಘದ ಸದಸ್ಯ ಅರ್ಜಿಗಳನ್ನು ಸಲ್ಲಿಸಲು ಹೋದಾಗ ಎಲ್ಲಾ ಅರ್ಜಿಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಪೊಲೀಸ್ ಕೇಸ್ ಮಾಡುವುದಾಗಿ ಬೆದರಿಸಿ ಅರ್ಜಿಗೆ ಸಾವಿರ ರು. ಪಡೆಯುತ್ತೀರಿ ಎಂದು ಆರೋಪ ಮಾಡಿದ್ದಾರೆ. ಸಂಘ ರೈತರ ಪರ ನಿಂತು ಕೆಲಸ ಮಾಡುತ್ತದೆ. ಮಾತಿಗೆ ತಪ್ಪಿದ ತಹಸೀಲ್ದಾರ್ ಅವರು ಕ್ಷಮೆ ಕೇಳಬೇಕು. ರೈತರಿಗೆ ಸೂಕ್ತ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಸುಬ್ರಹ್ಮಣ್ಯ ಹಾಗೂ ಅಜ್ಜಪ್ಪ ಮಾತನಾಡಿ, ಜಮೀನು ಇಲ್ಲದ ರೈತರು ಭೂಮಿ ಕೇಳುವುದು ನಮ್ಮ ಹಕ್ಕು ಆಗಿದೆ. ಬಹಳ ವರ್ಷಗಳಿಂದ ಕೃಷಿ ನಡೆಸಿ ದಾಖಲೆ ಸಿಗದ ಹಿನ್ನಲೆ ರೈತರು ಕಂಗಾಲಾಗಿದ್ದಾರೆ. . ಗಂಗಯ್ಯನಪಾಳ್ಯ ಗೋಮಾಳ ಸರ್ವೇ ನಂಬರ್ ನೂರಾರು ವರ್ಷದಿಂದ ರೈತರಿದ್ದಾರೆ. ಈಗ ಅರಣ್ಯ ಭೂಮಿ ಎಂದು ಒಕ್ಕಲೆಬ್ಬಿಸಿ ರೈತರನ್ನು ಬೀದಿಗೆ ತಂದಿದ್ದಾರೆ. ಈ ಜೊತೆಗೆ ಮಂಜೂರಾದ ಜಮೀನು ದುರಸ್ತು ಮಾಡಿ ದಾಖಲೆ ಮಾಡಿಕೊಡುತ್ತಿಲ್ಲ. ಈ ವಿಚಾರವಾಗಿ ಹೋರಾಟ ನಿರಂತರ ನಡೆದಿದೆ. ಈ ಸಮಯ ತಹಸೀಲ್ದಾರ್ ಅವರ ನಡೆ ಬೇಸರ ತಂದಿದೆ. ರೈತರಿಗೆ ಭೂಮಿ ನೀಡಲು ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸಿರುವುದು. ಸರ್ಕಾರ ಭಾಗವಾಗಿ ಅರ್ಜಿ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಗುಬ್ಬಿ ಶಾಸಕರ ಜೊತೆಗೆ ಮಾತಿನ ಚಕಮಕಿ

ಪ್ರತಿಭಟನಾ ನಿರತ ರೈತರ ಬಳಿಗೆ ಆಗಮಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ರೈತ ಮುಖಂಡರ ನಡುವೆ ಮಾತಿನ ಚಕಮಕಿ ಸಹ ನಡೆಯಿತು. ಮುಗ್ಧ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದೀರಿ. ಸರ್ಕಾರದ ನಿಯಮ, ಸುಪ್ರೀಂ ಕೋರ್ಟ್ ಆದೇಶ ಎಲ್ಲವನ್ನೂ ವಿವರಿಸಿ ರೈತರಿಗೆ ತಿಳಿ ಹೇಳುವುದು ಬಿಟ್ಟು ಜಮೀನು ಸಿಗುತ್ತೆ ಅರ್ಜಿ ಹಾಕಲು ಹುರಿದುಂಬಿಸಿ ಪ್ರತಿಭಟನೆ ಮಾಡಿಸುತ್ತಿರುವುದು ಸರಿಯಲ್ಲ. ಸಮಾಜದ ಸ್ವಾಸ್ಥ್ಯ ಕೆಡಿಸುವ ಹಾಗೂ ಮುಗ್ಧ ರೈತರನ್ನು ದಿಕ್ಕು ತಪ್ಪಿಸುವ ಕೆಲಸಕ್ಕೆ ಪೊಲೀಸ್ ದೂರು ನೀಡಿ ಕೇಸು ದಾಖಲು ಮಾಡುವ ಎಚ್ಚರಿಕೆ ನೀಡಿದರು. ನಂತರ ಅರ್ಜಿ ಸಲ್ಲಿಸಲು ಬಂದಿದ್ದ ಮುಗ್ಧ ರೈತರೊಟ್ಟಿಗೆ ಮಾತನಾಡಿದ ಶಾಸಕರು ಬೇರೆ ತಾಲ್ಲೂಕು, ಜಿಲ್ಲೆಯ ರೈತರು ಇಲ್ಲಿ ಅರ್ಜಿ ಸಲ್ಲಿಸಲು ಹೇಗೆ ಸಾಧ್ಯ. ಸರ್ಕಾರ ಈಗ ಯಾವುದೇ ಅರ್ಜಿ ಆಹ್ವಾನ ನೀಡಿಲ್ಲ. ಈ ರೀತಿ ದಿಕ್ಕು ತಪ್ಪಿಸುವವರ ಬಗ್ಗೆ ಎಚ್ಚರಿಕೆ ವಹಿಸಿ, ಹಣ ನೀಡಿ ಮೋಸಕ್ಕೆ ಸಿಲುಕಬೇಡಿ ಎಂದು ಮನವಿ ಮಾಡಿದರು.

Share this article