ದೊಡ್ಡಬಳ್ಳಾಪುರ: ಸರ್ಕಾರಿ ಜಾಗಗಳ ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ಲ್ಯಾಂಡ್ ಬೀಟ್ ವ್ಯವಸ್ಥೆ ಜಾರಿಗೆ ತಂದಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಈಗಾಗಲೇ ಆ್ಯಪ್ ನಲ್ಲಿ 14 ಲಕ್ಷ ಸರ್ಕಾರಿ ಜಾಗಗಳನ್ನು ಅಪ್ ಲೋಡ್ ಮಾಡಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳ ಮಹಜರು ನಡೆಸಿ, ಒತ್ತುವರಿಯಾಗಿದ್ದರೆ ಅದರ ವಿವರವನ್ನು ಆ್ಯಪ್ ನಲ್ಲಿ ಹಂಚಿಕೊಳ್ಳಲಿದ್ದಾರೆ. ಇದರ ಆಧಾರ ಮೇಲೆ ಜಿಲ್ಲಾದಿಕಾರಿಗಳು ಕ್ರಮ ವಹಿಸಲಿದ್ದಾರೆ. ಸದ್ಯ ರಾಜ್ಯಾದ್ಯಂತ 5.90 ಲಕ್ಷ ಸ್ಥಳಗಳನ್ನು ಮಹಜರು ಮಾಡಲಾಗಿದೆ. ಸರ್ಕಾರಿ ಜಾಗಗಳ ಮಹಜರು ಪ್ರತಿ ಮೂರು ತಿಂಗಳಿಗೊಮ್ಮೆ ಪುನರಾವರ್ತಿತವಾಗಲಿದೆ. ಇದರಿಂದ ಒತ್ತುವರಿ, ಅತಿಕ್ರಮಣ ತಡೆಯಬಹುದಾಗಿದೆ ಎಂದರು.
ಆಧಾರ್- RTC ಲಿಂಕ್ ವ್ಯವಸ್ಥೆ :ರಾಜ್ಯದಲ್ಲಿ 4.30 ಕೋಟಿ ಜಮೀನು ಮಾಲೀಕರಿದ್ದಾರೆ. ಇತ್ತೀಚೆಗೆ ಯಾರದ್ದೋ ಜಮೀನನ್ನು ಮತ್ಯಾರೋ ನೋಂದಣಿ ಮಾಡಿಸಿಕೊಂಡ ಪ್ರಕರಣಗಳು ಬೆಳಕಿಗೆ ಬಂದಿವೆ. RTC ಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವುದರಿಂದ ಮಾಲಿಕತ್ವಕ್ಕೆ ಖಾತ್ರಿ ಕೊಟ್ಟಂತಾಗುತ್ತದೆ. ಜೊತೆಗೆ ಖಾತೆ, ಪಹಣಿ ವಿತರಣೆಯೂ ಸರಳೀಕರಣವಾಗಲಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.
RTC ಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವುದರಿಂದ ಒಬ್ಬರ ಜಮೀನನ್ನು ಮತ್ತೊಬ್ಬರು ಲಪಟಾಯಿಸಲು ಆಗುವುದಿಲ್ಲ. ಆಧಾರ್ ಸಂಖ್ಯೆ ಜೋಡಣೆ ಅಭಿಯಾನವನ್ನು ಮಾರ್ಚ್ ತಿಂಗಳಿಂದಲೇ ಆರಂಭಿಸಲಾಗಿದೆ. ಸದ್ಯ 1.40 ಕೋಟಿ ಆಸ್ತಿಗಳು ಲಿಂಕ್ ಆಗಿವೆ. ಇನ್ನು ಮುರ್ನಾಲ್ಕು ತಿಂಗಳಲ್ಲಿ ಎಲ್ಲ ಆಸ್ತಿಗಳ ಜೋಡಣೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. RTC- ಆಧಾರದ ಜೋಡಣೆಯಿಂದ ಪವತಿ ಖಾತೆ ಆಗದಿರುವ ಆಸ್ತಿಗಳ ಕುರಿತು ಸಹ ಮಾಹಿತಿ ಸಿಗಲಿದೆ. ಇದರಿಂದ ಆಡಳಿತ ಸರಳೀಕರಣಗೊಂಡು, ವೇಗವಾಗಿ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.ಕೆರೆಗಳ ಒತ್ತುವರಿ ತೆರವುಗೊಳಿಸಿದ ಬಳಿಕ ಸುತ್ತಲೂ ಗ್ರೀನ್ ಫೆನ್ಸಿಂಗ್ ಹಾಕಬೇಕು. ಗಿಡಗಳನ್ನು ನೆಡಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಈ ವೇಳೆ ಕಂದಾಯ ಇಲಾಖೆಯ ಕಾರ್ಯದರ್ಶಿ ಕಠಾರಿ, ಶಾಸಕ ಧೀರಜ್ ಮುನಿರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ್, ಉಪ ವಿಭಾಗಾಧಿಕಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.12ಕೆಡಿಬಿಪಿ1-
ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿ ವಿವಿಧ ಗ್ರಾಮಗಳ ಸರ್ಕಾರಿ ಜಮೀನುಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.12ಕೆಡಿಬಿಪಿ2-ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿ ವಿವಿಧ ಗ್ರಾಮಗಳ ಸರ್ಕಾರಿ ಜಮೀನುಗಳ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದರು.