ಕನ್ನಡಪ್ರಭ ವಾರ್ತೆ ಹಿರಿಯೂರು
ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕೌನ್ಸಿಲ್ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನೆಲವಳಿ ವಸೂಲಿಯಿಂದ ರೌಡಿಗಳನ್ನು ಹುಟ್ಟುಹಾಕಿದಂತಾಗಿದೆ. ಕೊರಳಿಗೆ ಕೈ ಹಾಕಿ ಹಣ ವಸೂಲು ಮಾಡುವುದನ್ನು ಎಲ್ಲರೂ ನೋಡಿದ್ದಾರೆ ಎಂಬ ಸದಸ್ಯ ಮಹೇಶ್ ಪಲ್ಲವ ಆರೋಪಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ನೆಲವಳಿ ವಸೂಲಿಗೆ ಹರಾಜು ನಡೆಸಲಾಗಿತ್ತು. ಕಡಿಮೆ ಮೊತ್ತಕ್ಕೆ ಹರಾಜು ಆಗಿದ್ದರಿಂದ ಮತ್ತೆ ಮರು ಹರಾಜು ಕರೆಯಲಾಗಿತ್ತು. ಆದರೆ ಬೀದಿ ಬದಿ ವ್ಯಾಪಾರಿಗಳ ನೆಲವಳಿ ವಸೂಲಿ ಮಾಡಬಾರದು ಎಂಬ ಆದೇಶದಂತೆ ಇದೀಗ ನೆಲವಳಿ ವಸೂಲಿ ನಿಲ್ಲಿಸಲಾಗಿದೆ ಎಂದರು.ಸದಸ್ಯ ಬಿ.ಎನ್.ಪ್ರಕಾಶ್ ಮಾತನಾಡಿ, ಬೀದಿ ಬದಿಯಲ್ಲಿ ಮಾರುವ ಗೋಭಿ ಮಂಚೂರಿಗೆ ಹಾಕುತ್ತಿರುವ ಫೌಡರ್ ಬಳಕೆಯನ್ನು ಆದಷ್ಟು ಬೇಗ ನಿಲ್ಲಿಸಿ. ಅದರಿಂದ ಹಲವು ತೀವ್ರತರವಾದ ಕಾಯಿಲೆಯಾಗುವ ಸಂಭವವಿದೆ. ಜೊತೆಗೆ ನಗರದ ಹೋಟೆಲ್ ಗಳಲ್ಲಿನ ಸ್ವಚ್ಛತೆ ಬಗ್ಗೆ ಗಮನ ಹರಿಸಿ ಎಂದರು.
ಸದಸ್ಯ ಜಿ.ಎಸ್.ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ಡಾಕ್ಟರ್ ಗಳ ಅನುಪಸ್ಥಿತಿ ಬಗ್ಗೆ ಸಾಕಷ್ಟು ದೂರುಗಳಿವೆ. ರೋಗಿಯನ್ನು ಮುಟ್ಟದೆಯೇ ಮುಂದಿನ ಆಸ್ಪತ್ರೆಗೆ ಬರೆಯುವ ಇಲ್ಲವೇ ತಮ್ಮ ಕ್ಲಿನಿಕ್ ಗಳಿಗೆ ಬರೆದು ಕಳಿಸುವ ಮತ್ತು ಮೆಡಿಸಿನ್ ಅನ್ನು ಹೊರಗಡೆಯಿಂದ ತರಲು ಬರೆಯುವ ವ್ಯವಸ್ಥೆ ಇದೆ. ಆದಷ್ಟು ಬೇಗ ಅದು ಸರಿಹೋಗಬೇಕು. ಜನಪ್ರತಿನಿದಿಗಳು ಹೇಳಿದರೂ ಸಹ ಚಿಕಿತ್ಸೆ ನೀಡಲು ತಾತ್ಸಾರ ಮಾಡುವ ಡಾಕ್ಟರ್ ಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.ಸದಸ್ಯರ ಆರೋಪಕ್ಕೆ ಆಡಳಿತ ವೈದ್ಯಾಧಿಕಾರಿ ಡಾ.ನಿರಂಜನ್ ಉತ್ತರಿಸಿ ಈ ಮುಂಚೆ ಹೇಗಿತ್ತೋ ಗೊತ್ತಿಲ್ಲ. ಆದರೆ ಇತ್ತೀಚಿನ 2-3 ತಿಂಗಳಿನಿಂದ ವ್ಯವಸ್ಥೆ ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ರಾತ್ರಿ ಪಾಳಿಯ ವೈದ್ಯರ ಉಪಸ್ಥಿತಿಯ ಬಗ್ಗೆ ಖುದ್ದು ನಾನೇ ಬಂದು ಪರಿಶೀಲಿಸುತ್ತಿದ್ದೇನೆ. ತುಂಬಾ ಮುಖ್ಯವಾದ ಮೆಡಿಸಿನ್ ಗಳಾದ ಹಾವು ಕಡಿತದ ಔಷಧಿ, ಹೃದಯಾಘಾತಕ್ಕೆ ಸಂಬಂದಿಸಿದ ಔಷಧಿಯ ಕೊರತೆ ಇಲ್ಲ. ಗರ್ಭಿಣಿ ಸ್ತ್ರೀಯರಿಗೆ ಆಸ್ಪತ್ರೆಯಲ್ಲೇ ಸ್ಕ್ಯಾನಿಂಗ್ ಶುರು ಮಾಡಿದ್ದೇವೆ. ಹೆರಿಗೆ ವಿಭಾಗದಲ್ಲಿ ಹಣ ಕೇಳುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ. ರೋಗಿಗಳನ್ನು ನಿಲ್ಲಿಸಿಯೇ ಇಂಜೆಕ್ಷನ್ ನೀಡುವ ಪದ್ಧತಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ಸಭೆಯಲ್ಲಿ ಎಂಬಿಬಿಎಸ್, ಬಿಇ, ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಸಲು 4 ಲಕ್ಷ, ನಗರದ ತೇರುಮಲ್ಲೇಶ್ವರ ದೇವಸ್ಥಾನ ರಸ್ತೆಯಿಂದ ಸರ್ಕಾರಿ ಆಸ್ಪತ್ರೆ ಮೂಲಕ ಹುಳಿಯಾರ್ ರಸ್ತೆಯವರೆಗೆ ಎಲ್ಇಡಿ ದೀಪ ಅಳವಡಿಸುವುದು. ನಗರದ ಲಕ್ಕವನಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸುವುದು,ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಾರ್ಯಾಲಯದ ಕೋರಿಕೆಯಂತೆ ವಾರ್ಡ್ ನಂಬರ್ ಮೂರು ಮತ್ತು ಐದರಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ನಿವೇಶನ ಮಂಜೂರು ಮಾಡುವುದು, ಸಿದ್ದೇಶ್ವರ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ಸಿದ್ದೇಶ್ವರ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆ ಕಟ್ಟಡ ನಿರ್ಮಿಸಲು, ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜ ಸಮುದಾಯ ಭವನ ನಿರ್ಮಾಣ ಮಾಡಲು, ತಾಲೂಕು ಸವಿತಾ ಸಮಾಜ ಭವನ ನಿರ್ಮಿಸಲು ನಿವೇಶನ ಮಂಜೂರು ಮಾಡಲು ಸದರಿ ನಿವೇಶನಗಳ ಲಭ್ಯತೆ ಬಗ್ಗೆ ಪರಿಶೀಲಿಸಿ ಸರ್ಕಾರದ ಆದೇಶಗಳನ್ನು ಅನುಸರಿಸಿ ಮಂಜೂರು ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕನಕ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ನಿವೇಶನ ಮಂಜೂರಿಗೆ ಸದಸ್ಯರು ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪರಿಶೀಲನೆಯ ನಂತರ ನಿವೇಶನ ಮಂಜೂರು ಮಾಡುವ ಬಗ್ಗೆ ತೀರ್ಮಾನಿಸಲಾಯಿತು.ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಪೌರಾಯುಕ್ತ ಎ. ವಾಸಿಂ,ಸದಸ್ಯರಾದ ಈ. ಮಂಜುನಾಥ್,ವಿಠ್ಠಲ್ ಪಾಂಡುರಂಗ, ಗುಂಡೇಶ್ ಕುಮಾರ್, ಚಿತ್ರಜಿತ್ ಯಾದವ್, ವೈಪಿಡಿ ದಾದಾ ಪೀರ್, ಶಂಷುನ್ನಿಸಾ, ಗೀತಾ, ಜಗದೀಶ್, ನಾಮನಿರ್ದೇಶನ ಸದಸ್ಯರಾದ ಗಿರೀಶ್, ಶಿವಕುಮಾರ್ ಹಾಗೂ ನಗರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಕ್ರಮ ಕಟ್ಟಡ ಖಾತೆ ರದ್ದು:
ಮತ್ತೆ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಕ್ರಮ ಕಟ್ಟಡ ನಿರ್ಮಾಣದ ವಿಷಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಯಿತು. ಪ್ರತಿಮೆ ನಿರ್ಮಾಣಕ್ಕೆ ಜಾಗ ಕೇಳಿ ಮಳಿಗೆಗಳನ್ನೇ ಕಟ್ಟಿದ್ದರ ಬಗ್ಗೆ ಸದಸ್ಯರೊಬ್ಬರು ಕೇಳಿದಾಗ ಅಧ್ಯಕ್ಷರು ಮತ್ತು ಪೌರಾಯುಕ್ತರು ಮಾತನಾಡಿ, ಆ ಕಟ್ಟಡದ ಖಾತೆ ರದ್ದುಗೊಳಿಸಲಾಗಿದೆ. ಆ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ವಹಿಸುತ್ತಾರೆ ಎಂದರು. ಮತ್ತೊಬ್ಬ ಸದಸ್ಯರು ಮಾತನಾಡಿ ಹಾಗಾದರೆ ಖಾತೆ ಮಾಡಿಕೊಟ್ಟ ಅಧಿಕಾರಿಗೆ ಶಿಕ್ಷೆ ಏನು ಎಂದು ಪ್ರಶ್ನಿಸಿದ್ದಕ್ಕೆ ಅಧ್ಯಕ್ಷರು ನೀವೆಲ್ಲರೂ ತನಿಖೆಗೆ ಒತ್ತಾಯಿಸಿ, ಸದಸ್ಯರೆಲ್ಲರೂ ಸಹಿ ಹಾಕಿ ಕೊಡಿ ಎಂದರು. ಎಲ್ಲರೂ ನಗುತ್ತಾ ವಿಷಯಾoತರ ಮಾಡಿ ಸುಮ್ಮನಾದರು.