ಸರ್ವೇ ಚೈನ್‌ ಮುದ್ರಿಸದ ಭೂ ಇಲಾಖೆ: ಆರೋಪ

KannadaprabhaNewsNetwork | Published : Jul 5, 2024 12:45 AM

ಸಾರಾಂಶ

ಪ್ರತಿ ವರ್ಷ ಸರ್ವೇ ಚೈನ್‌ ಮುದ್ರಣ ಮಾಡಿಸುವಂತೆ ಸರ್ಕಾರದ ಆದೇಶವಿದ್ದರೂ ಭೂಮಾಪನ ಇಲಾಖೆ ನಿರ್ಲಕ್ಷ್ಯ ಮಾಡುತ್ತಿದ್ದು, ಇದರಿಂದ ಜಮೀನು ಅಳತೆ ಮಾಡುವ ಚೈನ್‌ಗಳಿಂದ ಸಾರ್ವಜನಿಕರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ ಆರೋಪಿಸಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರತಿ ವರ್ಷ ಸರ್ವೇ ಚೈನ್‌ ಮುದ್ರಣ ಮಾಡಿಸುವಂತೆ ಸರ್ಕಾರದ ಆದೇಶವಿದ್ದರೂ ಭೂಮಾಪನ ಇಲಾಖೆ ನಿರ್ಲಕ್ಷ್ಯ ಮಾಡುತ್ತಿದ್ದು, ಇದರಿಂದ ಜಮೀನು ಅಳತೆ ಮಾಡುವ ಚೈನ್‌ಗಳಿಂದ ಸಾರ್ವಜನಿಕರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ ಆರೋಪಿಸಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವೇದಿಕೆ ರಾಜ್ಯ ಉಪಾಧ್ಯಕ್ಷ ನಾಗರಾಜ ಸುರ್ವೆ, ಗೌರವಾಧ್ಯಕ್ಷ ಪಿ.ಸಿ.ಮುನಿಯಪ್ಪ ಮಾತನಾಡಿ, ಭೂ ಮಾಪನ ಇಲಾಖೆ ನಿರ್ಲಕ್ಷ್ಯದಿಂದ ರಾಜ್ಯಾದ್ಯಂತ ಸಮಸ್ಯೆ ಹೆಚ್ಚಾಗಿ, ಸಾಕಷ್ಟು ಪ್ರಕರಣ ಬಾಕಿ ಇವೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ ಎಂದರು.

ಮಾಹಿತಿ ಹಕ್ಕಿನಡಿ ಭೂ ಮಾಪನ ಇಲಾಖೆಗೆ ಮಾಹಿತಿ ಕೇಳಿದಾಗ 6 ವರ್ಷದಿಂದ ಇಲಾಖೆಯಿಂದ ಯಾವುದೇ ತರಹದ ಮುದ್ರಣ ಮಾಡಿಸಿಲ್ಲವೆಂಬುದು ಮಾಹಿತಿ ಲಭಿಸಿದೆ. ಇಲಾಖೆಯೇ ಹೀಗೆ ಬೇಜವಾಬ್ದಾರಿ ತೋರಿಸಿದರೆ, ಖಾಸಗಿ ವ್ಯಕ್ತಿಗಳು ಹೇಗೆ ತಾನೇ ಕಾನೂನು ಪಾಲಿಸುತ್ತಾರೆ? ಪ್ರತಿ ವರ್ಷ ಸರ್ವೇ ಮಾಡಬೇಕಾದ ಅಳತೆ ಮತ್ತು ಸರ್ವೇ ಚೈನ್‌ ಮುದ್ರ‍ಣವನ್ನು ಸ್ವತಃ ಭೂ ಮಾಪನ ಇಲಾಖೆಯೇ ಮಾಡಿಸದಿರುವುದು ಇಲಾಖೆ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.

ಸರ್ವೇ ಚೈನ್‌ ಮತ್ತು ಇತರೆ ಸಾಮಗ್ರಿಗಳ ಮುದ್ರೆಯನ್ನು ಯಾರೂ ಕೂಡ ಮಾಡಿಸಿಲ್ಲವೆಂದು ಹಾರಿಕೆ ಉತ್ತರ ನೀಡಿ, ರೈತರನ್ನು ಹಿಂದಕ್ಕೆ ಕಳಿಸುವ ಕೆಲಸವನ್ನು ಇಲಾಖೆ ಅಧಿಕಾರಿ, ಸಿಬ್ಬಂದಿ ಮಾಡುತ್ತಿದ್ದಾರೆ. ಇದರಿಂದ ಜಮೀನು ಅಳತೆಯೇ ತಿಳಿಯದಂತಾಗಿದೆ. ಅಕ್ಕಪಕ್ಕದ ಜಮೀನಿನ ರೈತರೊಂದಿಗೆ ರೈತರು ಹೊಡೆದಾಡುವಂತಹ ಪರಿಸ್ಥಿತಿ ಭೂ ಮಾಪನ ಇಲಾಖೆಯೇ ತಂದೊಡ್ಡುತ್ತಿದೆ. ಒಬ್ಬ ರೈತರು ಜಮೀನು ಅಳತೆ ಮಾಡಿಸಲು ಮುಂದಾದರೆ ಪಕ್ಕದ ಮತ್ತೊಬ್ಬ ರೈತ ಜಗಳವಾಡುವಂತಹ ವಾತಾವರಣವನ್ನು ಸ್ವತಃ ಇಲಾಖೆಯೇ ಹುಟ್ಟು ಹಾಕುತ್ತಿದೆ ಎಂದು ಆರೋಪಿಸಿದರು.

ಸರ್ವೇ ಚೈನ್‌ಗಳನ್ನು ಎಳೆದಾಡಿ, ನಿರಂತರ ಬಳಸುವುದರಿಂದ ಹಿಗ್ಗಿರುವ ಸನ್ನಿವೇಶ, ಸಂದರ್ಭಗಳೂ ಇವೆ. ಸರ್ವೇ ಚೈನ್‌ ಹಿಗ್ಗಿರುವ, ಕುಗ್ಗಿರುವ ಸಾಧ್ಯತೆಯೂ ಹೆಚ್ಚು. ಇದರಿಂದ ಪೋಡು ಮಾಡುವಾಗ ಸರ್ವೇ ನಂಬರ್‌ ಅದಲು ಬದಲು ಮಾಡುತ್ತಿದ್ದಾರೆ. ಇದರಿಂದಾಗಿ ಅದೆಷ್ಟೋ ರೈತರು ಕೋರ್ಟ್ ಕಚೇರಿಗಳಿಗೆ ಅಲೆಯುವಂತಾಗಿದೆ. ನ್ಯಾಯಾಲಯಗಳಲ್ಲಿ ಇದುವರೆಗೂ ಸಮಸ್ಯೆಗಳು ಬಗೆಹರಿಯದಂತಾಗಿದ್ದು, ರೈತ-ರೈತರ ಮಧ್ಯೆ ಜಗಳ, ಹೊಡೆದಾಟ, ಗಲಾಟೆಗಳು ಮುಂದುವರಿಯುತ್ತಲೇ ಇವೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಭೂಮಾಪನ ಇಲಾಖೆಗೆ ರೈತರು ಅಲೆದಾಡಿ, ಅಳತೆ ಸರಿಪಡಿಸುವಂತೆ ಕೋರಿದರೂ ಯಾವುದೇ ಕೆಲಸವನ್ನೂ ಇಲಾಖೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿಲ್ಲ. ಇದರಿಂದ ರೈತರು ಪೇಚಾಡುತ್ತಿದ್ದಾರೆ. ಸರ್ಕಾರದ ಆದೇಶವನ್ನೇ ಉಲ್ಲಂಘಿಸಿ, ನಿರ್ಲಕ್ಷ್ಯ ಧೋರಣೆ ತೋರಿಸುತ್ತಿರುವ ಅಧಿಕಾರಿ, ಸಿಬ್ಬಂದಿಗೆ ಚುರುಕು ಮುಟ್ಟಿಸುವ ಕೆಲಸ ಸರ್ಕಾರ ಮಾಡಬೇಕಿದೆ. ರೈತರಿಗೆ ಸರಿಯಾದ ಕ್ರಮದಲ್ಲಿ ಅಳತೆ ಮಾಡಿಕೊಟ್ಟು, ಜಮೀನುಗಳಲ್ಲಿ ಯಾವುದೇ ರೀತಿ ಅಳತೆ ವ್ಯತ್ಯಾಸವಾಗದಂತೆ ನೋಡಿಕೊಂಡು, ಸಮಸ್ಯೆಯಾಗದಂತೆ ಸಮಸ್ಯೆಗಳನ್ನು ಪರಿಹರಿಸಲಿ ಎಂದು ಆಗ್ರಹಿಸಿದರು.

ವೇದಿಕೆ ಜಿಲ್ಲಾಧ್ಯಕ್ಷ ಯು.ಶ್ರೀನಿವಾಸ, ಎಸ್.ಶ್ರೇಯಸ್ ಇತರರು ಇದ್ದರು.

Share this article